ಪ್ರಗತಿ ಫಲಶೃತಿ
ಕುಣಿಗಲ್ :
ತಾಲ್ಲೂಕಿನ ಕಿಚ್ಚಾವಾಡಿ ಗ್ರಾಮದ ಭೋಚನಕಟ್ಟೆ ಕೆರೆಯನ್ನು 40 ವರ್ಷಗಳಿಂದ ಅಕ್ರಮವಾಗಿ ಒತ್ತುವರಿ ಮಾಡಿರುವುದನ್ನು ಕೂಡಲೇ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ ವರದಿ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಜ.17 ರಂದು ಪ್ರಕಟವಾಗಿತ್ತು.ಡಿದರ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಅಜಯ್ ಅವರು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿಯ ಜೊತೆಗೆ ಮುಚ್ಚಿಹೋದ ಕೆರೆಯನ್ನು ಪರಿಶೀಲಿಸಿದ ಅವರು, ತೆರವುಗೊಳಿಸಿ ಕೆರೆ ನಿರ್ಮಿಸಲಾಗುವುದೆಂದು ತಿಳಿಸಿದರು.
ಬುಧವಾರ ತಹಶೀಲ್ದಾರ್ ವಿಶ್ವನಾಥ್ ಅವರು ಮತ್ತು ಸರ್ವೇಯರ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳೊಂದಿಗೆ ಪತ್ರಿಕೆಯ ವರದಿಯ ಹಿನ್ನೆಲೆಯಲ್ಲಿ ಹುಲಿಯೂರುದುರ್ಗ ಹೋಬಳಿ ಕಿಚ್ಚಾವಾಡಿ ಗ್ರಾಮದ ಭೋಚನಕಟ್ಟೆ ಕೆರೆಯನ್ನು ಕಳೆದ 40 ವರ್ಷದಿಂದ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಹುಳುಮೆ ಮಾಡುತ್ತಿದ್ದ ಸ್ಥಳಕ್ಕೆ ಹೋದ ಅಧಿಕಾರಿಗಳು ಕೆರೆಯ ಅವಶೇಷವೇ ಇಲ್ಲದಂತೆ ಮಾಡಿ ಒತ್ತುವರಿ ಮಾಡಿರುವುದನ್ನು ಕಂಡರು. ಸರ್ವೆ ನಂ. 116 ರಲ್ಲಿ 13 ಎಕರೆ 5 ಗುಂಟೆ ಇರುವ ಕೆರೆ ಸಂಪೂರ್ಣವಾಗಿ ಒತ್ತುವರಿಯಾಗಿತ್ತು. ಸುಮಾರು ಅರ್ಧ ಕೆರೆಯ ಅಂಗಳ ನೀಲಗಿರಿ ತೋಪಿನಿಂದ ಕೂಡಿದ್ದು ಕೆರೆಯ ಏರಿಯನ್ನೇ ಒಡೆದು ಹಾಕಲಾಗಿತ್ತು. ಕೆರೆಗೆ ಹರಿದು ಬರುವ ತೊರೆ ಸೇರಿದಂತೆ ಸಂಪೂರ್ಣ ಕೆರೆಯ ಮೂಲ ನಕ್ಷೆಯನ್ನು ಗ್ರಾಮಸ್ಥ ಸಮ್ಮುಖದಲ್ಲಿ ಅಧಿಕಾರಿಗಳು ಪತ್ತೆಹಚ್ಚಿದರು.
ನಂತರ ಮಾತನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ಅಜಯ್ ಕುಮಾರ್, ಈ ಭೋಚನಕಟ್ಟೆ ಕೆರೆಯ ಒತ್ತೂವರಿ ತೆರವುಗೊಳಿಸಲು ಬಂದಿದ್ದು ಇಲ್ಲಿನ ದೃಶ್ಯ ನೋಡಿದರೆ ಈ ಕೆರೆ ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು ಇಲ್ಲಿ ಸಾವಿರಕ್ಕೂ ಹೆಚ್ಚು ನೀಲಿಗಿರಿ ಮರ ಇರುವುದರಿಂದ ಇದನ್ನು ಮೊದಲು 13.5 ಗುಂಟೆ ಕೆರೆಯ ಭೂ ಪ್ರದೇಶವನ್ನು ಪತ್ತೆಹಚ್ಚಿ ಅದ್ದುಬಸ್ತು ಮಾಡಿದ ನಂತರ, ಅರಣ್ಯ ಇಲಾಖೆಯವರಿಗೆ ಮರಕಟಾವು ಮಾಡಲು ಹಸ್ತಾಂತರ ಮಾಡಿ ತದ ನಂತರ ಈ ಕೆರೆ ನೂರು ಎಕರೆಗಿಂತ ಕಡಿಮೆ ಇರುವುದರಿಂದ ಇಲ್ಲಿನ ಪಿ.ಡಿ.ಒ ಅವರಿಗೆ ಹಸ್ತಾಂತರಿಸಿ ಮುಂದಿನ ತಿಂಗಳೇ ಕೆರೆಯ ಹೂಳೆತ್ತಿಸುವ ಕಾರ್ಯಕ್ಕೆ ಚಾಲನೆ ನೀಡಿ ಆ ನಂತರ ಏರಿ ಸೇರಿದಂತೆ ಮೂಲ ಕೆರೆಯನ್ನು ಕೆಲವೇ ದಿನಗಳಲ್ಲಿ ನಿರ್ಮಿಸಲಾಗುವುದೆಂದರು. ಇದೇ ರೀತಿ ಕುಣಿಗಲ್ ಪಟ್ಟಣದ ದೊಡ್ಡಕೆರೆ,ಚಿಕ್ಕಕೆರೆ ಸೇರಿದಂತೆ ಎಲ್ಲಿ ಒತ್ತುವರಿಯಾಗಿದೆ ಎಂಬ ದೂರು ಬರುತ್ತವೊ ಆ ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಆಸ್ತಿಯನ್ನು ರಕ್ಷಿಸಲಾಗುವುದು ಹಾಗೂ ನೀಲಿಗಿರಿ ಮರಬೆಳೆಯುವುದು ಕಾನೂನಿಗೆ ವಿರುದ್ಧವಾಗಿದ್ದು ಯಾರು ತಪ್ಪಿತಸ್ಥರು ಎಂಬುದು ನಿಖರವಾಗಿ ಗೊತ್ತಾದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
40 ವರ್ಷಗಳಿಂದ ಹೋರಾಟ ಮಾಡಿದ ಗ್ರಾಮಸ್ಥರಿಗೆ ಕಳೆದ ಹತ್ತಾರು ವರ್ಷಹಿಂದೆಯೇ ನ್ಯಾಯಾಲಯ ಗ್ರಾಮಸ್ಥರ ಪರವಾಗಿ ನ್ಯಾಯ ನೀಡಿದ್ದು ಕೆರೆ ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಫಲದೊರೆಯದೆ ಕಂಗಾಲಾಗಿದ್ದ ಜನರು ಇಂದು ಸ್ಥಳಕ್ಕೆ ಖುದ್ದು ಉಪವಿಭಾಗಾಧಿಕಾರಿ ಅಜಯ್, ಹಾಗೂ ತಹಶೀಲ್ದಾರ್ ವಿಶ್ವನಾಥ್ ಭೇಟಿ ನೀಡಿ ಕೆರೆಯ ಒತ್ತುವರೆಗೆ ಸೂಚನೆ ದೊರೆಯುತ್ತಿದ್ದಂತೆ ಪರಸ್ಪರ ಗ್ರಾಮಸ್ಥರು ಹಸ್ತಲಾಗವ ಮಾಡಿಕೊಂಡು ಸಂತೋಷವ್ಯಕ್ತಪಡಿಸುತ್ತ ಈಗಲಾದರೂ ನಮಗೆ ನ್ಯಾಯ ಸಿಕ್ಕಿತಲ್ಲ ಇನ್ನೇನು ಕೆರೆ ಆಗಿಬಿಟ್ಟರೆ ನಮ್ಮೂರ ಮುಂದಿನ ಪೀಳಿಗೆಗೆ ಹಾಗೂ ರಾಸುಗಳಿಗೆ ಪಕ್ಷಿ ಪ್ರಾಣಿ ಸಂಕುಲಕ್ಕೆ ಒಳಿತಾಗುತ್ತದೆ ಎಂದು ಖುಷಿಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡ ಗ್ರಾಮಸ್ಥರು ಈ ಕೆರೆಗೆ ಮೇಲ್ಭಾಗದ ಊರುಗಳಾದ ಪಾವಸಂದ್ರ, ಬೋದನಹಳ್ಳಿ, ತಿಬ್ಬೀಕಟ್ಟೆ, ಶಟ್ಟರಪಾಳ್ಯ, ಮಾಳಗುಡ್ಡೆ, ಪುರದಗುಡ್ಡೆ, ನಾಮದಕಟ್ಟೆಕಲ್ಲು ಈ ಭಾಗದಿಂದ ಪ್ರತಿವರ್ಷ ನೀರು ಸರಾಗವಾಗಿ ಹರಿದು ಬರುತ್ತಿದೆ ಆದರೆ ಇಲ್ಲಿ ಕೆಲವೇ ಮಂದಿ ಕೆರೆ ಒತ್ತುವರಿ ಮಾಡಿ ಮುಚ್ಚಿ ಹಾಕಿರುವುದರಿಂದ ಸುತ್ತಮುತ್ತಲ ರೈತಾಪಿಜನರಿಗೆ ಬಹಳ ಅನ್ಯಾಯವಾಗಿತ್ತು ಮತ್ತು ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವ ಹೆಚ್ಚಾಗಿತ್ತು ಈ ಕೆರೆ ನಿರ್ಮಾಣವಾದೆರೆ ಸಾವಿರಾರು ರೈತರಿಗೆ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ತಮ್ಮ ಸಂತಸವನ್ನು ತೋಡಿಕೊಂಡರು.
ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಹುಲಿಯೂರುದುರ್ಗ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್ ಮತ್ತು ಸಿಬ್ಬಂದಿ ಮೊಕ್ಕಂಹೂಡಿದ್ದರು. ಗ್ರಾಮಸ್ಥರಾದ ಸಿದ್ದಪ್ಪಾಜಿ, ಶ್ರೀನಿವಾಸ್, ಚನ್ನಪ್ಪ, ಕಾಳೇಗೌಡ, ಗೂಳಿಗೌಡ, ಕೆ.ವಿ. ವೆಂಕಟೇಶ್, ಕೆಂಪಣ್ಣ, ಚನ್ನೇಗೌಡ, ರಾಮಲಿಂಗಯ್ಯ, ಹರೀಶ್, ಸಂತೋಷ್, ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
