ತುರುವೇಕೆರೆ : ಕ್ರೀಡಾಂಗಣದೊಳಗಿದ್ದ ಮರಗಳ ಕಟಾವು!!

ತುರುವೇಕೆರೆ : 

      ಪಟ್ಟಣದ ಜಿ.ಜೆ.ಸಿ. ಕ್ರೀಡಾಂಗಣದೊಳಗೆ ಹಲವಾರು ಸಂಘ ಸಂಸ್ಥೆಗಳು ಬೆಳೆಸಿದ್ದ ಗುಲ್‍ಮೊಹರ್ (ಕತ್ತಿಮರ) ಗಿಡಗಳನ್ನು ಯಾರೋ ದುಷ್ಕರ್ಮಿಗಳು ಕಡಿದು ಹಾಳುಮಾಡಿದ್ದಾರೆಂದು ಸಂಘ ಸಂಸ್ಥೆಗಳ ಸದಸ್ಯರುಗಳು ಆರೋಪಿಸಿದ್ದಾರೆ.

      ಪಟ್ಟಣದ ಸೌಂಧರ್ಯ ಹೆಚ್ಚಿಸಿ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಗಿಡಮರಗಳು ಬಹಳ ಉಪಯುಕ್ತವಾಗಿದ್ದು ಆ ನಿಟ್ಟಿನಲ್ಲಿ ತಾಲ್ಲೂಕು ಲಯನ್ಸ್ ಕ್ಲಬ್ ಹಾಗೂ ಚಿತ್ರಕಲಾ ಸಮಿತಿ ಸದಸ್ಯರುಗಳು ಧಾನಿಗಳ ಹೆಸರಿನಲ್ಲಿ ಪಟ್ಟಣದಾದ್ಯಂತ ಹಲವಾರು ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಹಾಗೆಯೇ ಪಟ್ಟಣದ ಕ್ರೀಡಾಂಗಣದ ಸುತ್ತಲೂ ಸುಮಾರು 100 ಕ್ಕೂ ಹೆಚ್ಚು ಗುಲ್‍ಮೊಹರ್ (ಕತ್ತಿಮರ) ಸಸಿಗಳನ್ನು ಈ ಹಿಂದೆ ನೆಡಲಾಗಿತ್ತು. ಗಿಡ ಬೆಳೆದು ಇನ್ನೇನು ಹೂ ಬಿಡಬೇಕೆಂದ ಸಂಧರ್ಬದಲ್ಲಿ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಷಾರ್ಪ್ ಕಾನ್ವೆಂಟ್ ಕಟ್ಟಡದ ಹಿಂಬಾಗದಲ್ಲಿದ್ದ ಸಸಿಗಳನ್ನು ಮಾತ್ರ ಯಾರೋ ಕಿಡಿಗೇಡಿಗಳು ಅರ್ಧ ಭಾಗಕ್ಕೆ ಗಿಡಗಳನ್ನು ಕತ್ತರಿಸಿ ದುಷ್ಕೃತ್ಯ ಎಸಗಿರುವುದು ಅನುಮಾನಕ್ಕೆ ಆಸ್ಪದವಾಗಿದೆ. ಇದರ ಬಗ್ಗೆ ಪೋಲೀಸ್ ಇಲಾಖೆ ತನಿಕೆ ಕೈಗೊಂಡು ಕೃತ್ಯ ಎಸಗಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲಯನ್ಸ್ ಕ್ಲಬ್ ಹಾಗು ಚಿತ್ರಕಲಾ ಸಮಿತಿ ಪದಾಧಿಕಾರಿಗಳು ಹಾಗೂ ಪರಿಸರವಾದಿಗಳು ಆಗ್ರಹಿಸಿದ್ದಾರೆ.

      ಚಿತ್ರಕಲಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ಎರಡು ವರ್ಷಗಳಿಂದ ಸತತವಾಗಿ ಬೇಸಿಗೆ ಸಂಧರ್ಭಗಳಲ್ಲಿ ಸದಸ್ಯರುಗಳೊಡಗೂಡಿ ಗಿಡಗಳಿಗೆ ನೀರು ಹೊತ್ತೊಯ್ದು ಕಷ್ಟಪಟ್ಟು ಬೆಳೆಸಿದ್ದೆವು. ಇದೀಗ ವರ್ಷಗಟ್ಟಲೆ ಆಳೆತ್ತರಕ್ಕೆ ಬೆಳೆದ ಗಿಡಗಳನ್ನು ಕೆಲವೇ ಕ್ಷಣಗಳಲ್ಲಿ ದುಷ್ಕರ್ಮಿಗಳು ಹಾಳು ಮಾಡಿರುವುದು ನೋವಿನ ಸಂಗತಿಯಾಗಿದ್ದು ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ಮತ್ತೊಮ್ಮೆ ಇಂತಹ ಪ್ರಕರಣ ಪುನರಾವರ್ತನೆಯಾಗದಂತೆ ತಡೆಯಬೇಕಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ