ಮಧುಗಿರಿ :
ಎಲ್ಲೆಂದರಲ್ಲಿ ಕಸವನ್ನು ಎಸೆದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಪಟ್ಟಣವನ್ನು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಪುರಸಭೆ ಅಧ್ಯಕ್ಷ ತಿಮ್ಮರಾಜು ತಿಳಿಸಿದರು.
ಅವರು ಪಟ್ಟಣದ ಮೊದಲನೆ ವಾರ್ಡಿನಲ್ಲಿ ದೊಡ್ಡಪೇಟೆ ರಸ್ತೆಯಲ್ಲಿ ಪುರಸಭಾ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಕಸ ಹಾಕುವುದನ್ನು ನಿಷೇಧಿಸಲಾಗಿದೆ. ಯಾರಾದರು ಕಸವನ್ನು ಬೀದಿಗೆ ಹಾಕಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ 23 ವಾರ್ಡುಗಳಲ್ಲಿ ವಾರಕ್ಕೊಮ್ಮೆ ಒಂದು ವಾರ್ಡನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಲು ಪುರಸಭೆ ಹಾಗೂ ಸದಸ್ಯರ ಸಹಕಾರದಿಂದ ತೀರ್ಮಾನ ಕೈಗೊಳ್ಳಲಾಗಿದೆ. ಪೌರ ಕಾರ್ಮಿಕರು ಮನೆ ಹತ್ತಿರ ಬಂದಾಗ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಬೇಕು. ಈ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ಅತ್ಯಗತ್ಯವಾಗಿದ್ದು, ಇದರಿಂದಾಗಿ ನಾಗರಿಕರ ಆರೋಗ್ಯ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಈ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಜನತೆಗೆ ಕುಡಿಯುವ ನೀರು ಸಮಸ್ಯೆ ಆಗದಂತೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಸದಸ್ಯೆ ಆಸಿಯಾ ಬಾನು, ಮುಖಂಡ ಶಹಾನಾಜ್ ಹಾಗೂ ಪುರಸಭೆಯ ಪೌರ ಕಾರ್ಮಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ