ಹುಳಿಯಾರು :
ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ (ಎಸ್ಟಿ) ದ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ 10 ಸಾವಿರ ಕುರುಬರು ಭಾಗವಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ತಿಳಿಸಿದರು.
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಪಾದಯಾತ್ರೆಯು ಜ.28 ರ ಗುರುವಾರ ಬೆಳಿಗ್ಗೆ ಹಿರಿಯೂರು ಸಮೀಪ ಜವಗೊಂಡನಹಳ್ಳಿಗೆ ಬರಲಿದೆ. ಇಲ್ಲಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ಕುರುಬರು ಭಾಗವಹಿಸಲಿದ್ದಾರೆ. ಪಾದಯಾತ್ರೆಗೆ ತಲುಪಿಸಲು ಬಸ್ ವ್ಯವಸ್ಥೆ ಸಹ ಮಾಡಲಾಗಿದ್ದು ತಾಲ್ಲೂಕಿನಿಂದ ಮನೆಗಿಬ್ಬರಂತೆ ಕುರುಬ ಸಮಾಜದವರು ಹೊರಡುವಂತೆ ಅವರು ತಿಳಿಸಿದರು.
ರಾಜ್ಯದಲ್ಲಿ ಕುರುಬ ಸಮಾಜ ಶೇ 90 ರಷ್ಟು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಸಾಮಾಜಿಕ ನ್ಯಾಯದಡಿ ಇವರ ಪ್ರಗತಿಗಾಗಿ ಎಸ್‍ಟಿ ಮೀಸಲಾತಿ ನೀಡಬೇಕಿದೆ. ಆದರೆ ಎಸ್ಟಿ ಪಟ್ಟಿಯಲ್ಲಿರುವ ಇತರೆ ಜನಾಂಗದ ಮೀಸಲಾತಿಯಲ್ಲಿ ನಾವು ಪಾಲು ಕೇಳುತ್ತಿಲ್ಲ. ಈಗಿರುವ ಮೀಸಲಾತಿಯನ್ನು ಶೇ 20 ಕ್ಕೆ ಹೆಚ್ಚಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು ಎಂಬುದು ಸ್ವಾಮೀಜಿ ಹೋರಾಟದ ಒತ್ತಾಯವಾಗಿದೆ ಎಂದರು.
ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ಚಿಕ್ಕನಾಯಕನಹಳ್ಳಿ ಕುರುಬರ ಸಂಘದ ರಮೇಶ್, ರೇಣುಕಸ್ವಾಮಿ, ಹುಳಿಯಾರು ಹೋಬಳಿ ಕುರುಬರ ಸಂಘದ ಅಧ್ಯಕ್ಷ ಎಚ್.ಅಶೋಕ್, ಕಾರ್ಯದರ್ಶಿ ಎಸ್‍ಆರ್‍ಎಸ್ ದಯಾನಂದ್, ಪಪಂ ಮಾಜಿ ಸದಸ್ಯರುಗಳಾದ ಧನುಷ್ ರಂಗನಾಥ್, ಪಟಾಕಿ ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಬಿ.ದೇವರಾಜು, ನಿವೃತ್ತ ಉಪನ್ಯಾಸಕ ರಾಮಯ್ಯ, ಕನಕ ಬ್ಯಾಂಕ್ ಅಧ್ಯಕ್ಷ ಸಿದ್ಧರಾಮಯ್ಯ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ