ಕೊರಟಗೆರೆ :

ರಾಷ್ಟ್ರೀಯ ಹಬ್ಬದ ಆಚರಣೆಗೆ ಗೈರು ಮತ್ತು ರಾಷ್ಟ್ರಧ್ವಜದ(ಬ್ಯಾಡ್ಜ್) ಗುರುತಿಗೆ ಅವಮಾನ ಮಾಡಿರುವ ಕೊರಟಗೆರೆ ಆಡಳಿತದ ವಿರುದ್ದ ರಾಜ್ಯ ಸರಕಾರದ ಕಾರ್ಯದರ್ಶಿಗೆ ದೂರು ನೀಡುತ್ತೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.
ಅವರು ಪಟ್ಟಣದ ಪದವಿ ಪೂರ್ವಕಾಲೇಜು ಮೈದಾನದಲ್ಲಿ ಕೊರಟಗೆರೆ ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ 72ನೇ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಸರಿ-ಬಿಳಿ-ಹಸಿರು ಬಣ್ಣದಿಂದ ತಯಾರಿಸಬೇಕಾದ ಬ್ಯಾಡ್ಜ್ನ್ನು ಕೇವಲ ಹಸಿರು ಮತ್ತು ಬಿಳಿ ಬಣ್ಣದಿಂದ ಮಾತ್ರ ತಯಾರಿಸಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೊರಟಗೆರೆ ಆಡಳಿತ ಅವಮಾನ ಮಾಡಿದೆ. ಮಕ್ಕಳಿಗೆ ಮಾದರಿ ಆಗಬೇಕಾದ ಅಧಿಕಾರಿ ವರ್ಗ ಮನೆಯಲ್ಲಿ ಕುಳಿತು ಕತೆ ಹೇಳ್ತೀರಾ? ನಾವು ಅದನ್ನು ಕೇಳಿಕೊಂಡು ಸುಮ್ಮನಿರಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ದೇಶದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಇಡೀ ವಿಶ್ವವೇ ಗಮನಿಸಲಿದೆ. ಸಮಾರಂಭದಲ್ಲಿ ನಮ್ಮ ದೇಶದ ಅಭಿವೃದ್ದಿ-ಸಾಧನೆಯು ಅನಾವರಣ ಆಗಲಿದೆ. ಸಂವಿಧಾನದ ಮೊದಲ ಪುಟದ ಆಶಯಗಳೇ ಇನ್ನೂ ಸಾಕಾರವಾಗಿಲ್ಲ. ನಮ್ಮ ದೇಶದಲ್ಲಿ ಜಾತೀಯತೆ ತೊಲಗಲಿಲ್ಲ. ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಹೋರಾಟದ ಕನಸು ನನಸಾಗದೆ ಇದ್ದರೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಹೇಳಿದರು.
ಕೊರಟಗೆರೆ ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಭಾರತದೇಶ 1950ನೆ ಜ.26ರಂದು ತನ್ನದೇ ಆದ ಸಂವಿಧಾನ, ರಾಷ್ಟ್ರ ಲಾಂಛನ, ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಸ್ವೀಕರಿಸಿ ಅಂಗೀಕರಿಸಿದೆ. ನಮ್ಮ ದೇಶದಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗ, ಅಸಮಾನತೆ, ಸ್ತ್ರೀಶೋಷಣೆ, ಜಾತೀಯತೆ ಕಂಡು ಬರುತ್ತಿದೆ. ಹವಾಮಾನ ವೈಪ್ಯರೀತ್ಯದಿಂದ ರೈತಾಪಿ ವರ್ಗ ಕಂಗಲಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಪ್ರೇಮಾ, ತಾಪಂಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಸಿಪಿಐ ನದಾಫ್, ತಾಪಂ ಇಓ ಶಿವಪ್ರಕಾಶ್, ಬಿಇಓ ಸುಧಾಕರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಹನುಮಂತರಾಜು, ಅಕ್ಷರ ದಾಸೋಹ ರಘು, ಪಪಂ ಸಿಇಓ ಲಕ್ಷ್ಮಣ್ಕುಮಾರ್, ಕೃಷಿ ಎಡಿಎ ನಾಗರಾಜು, ರೇಷ್ಮೆ ಲಕ್ಷ್ಮೀನರಸಯ್ಯ, ತೋಟಗಾರಿಕೆ ಪುಷ್ಪ್ಪಲತಾ, ಅಬಕಾರಿ ಆರಕ್ಷಕ ರಾಮಮೂರ್ತಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








