ಹುಳಿಯಾರು : ಆಟದ ಮೈದಾನ ಉಳಿಸಲು ಮನವಿ

 ಹುಳಿಯಾರು : 

      ಹುಳಿಯಾರು ಪಟ್ಟಣದಲ್ಲಿನ ಏಕೈಕ ಆಟದ ಮೈದಾನವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನವನ್ನು ಉಳಿಸಿ ವಿದ್ಯಾರ್ಥಿಗಳಿಗೆ ಹಾಗೂ ನಾಗರೀಕರಿಗೆ ನೆರವಾಗುವಂತೆ ಮನವಿ ಮಾಡಲಾಗಿದೆ.

      ಹುಳಿಯಾರು ಪಟ್ಟಣದ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಹೃದಯಭಾಗದಲ್ಲಿರುವ ಈ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನ ಆಸರೆಯಾಗಿದೆ. ಅದ್ದೂರಿ ಸಾರ್ವಜನಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ, ಆರ್‍ಎಸ್‍ಎಸ್ ಶಾಖೆ ಸೇರಿದಂತೆ ಹಿರಿಯ ನಾಗರಿಕರ ವಾಕಿಂಗ್, ಸ್ಥಳಿಯ ಯುವಜನತೆಯ ಆಟ, ವ್ಯಾಯಾಮ ಎಲ್ಲವೂ ಇಲ್ಲಿ ನಡೆಯುತ್ತಿದೆ.     

      ಆದರೆ ಈ ಆಟದ ಮೈದಾನದಲ್ಲೇ ಕರ್ನಾಟಕ ಪಬ್ಲಿಕ್ ಶಾಲೆಗೆ ನೂತನವಾಗಿ ಮಂಜೂರಾಗಿರುವ ಕಟ್ಟಡಗಳನ್ನು ಕಟ್ಟಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲಾ ಕೊಠಡಿಗಳನ್ನು ಕಟ್ಟಲು ಶಾಲಾ ಆವರಣದಲ್ಲಿ ಇತರೆಡೆ ಸ್ಥಳಾವಕಾಶ ಇದ್ದರೂ ಕೂಡ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಬಳಕೆಗೆ ಮೀಸಲಿದ್ದ ಲಕ್ಷಾಂತರ ರೂ. ವೆಚ್ಚದಲ್ಲಿ ಕಟ್ಟಿದ ಪ್ಲಾಟ್‍ಪಾರಂ ಮುಂಭಾಗದಲ್ಲಿ ಕಟ್ಟಲು ಮುಂದಾಗಿರುವುದು ಖಂಡನಾರ್ಹವಾಗಿದೆ.

      ಕರ್ನಾಟಕ ಪಬ್ಲಿಕ್ ಶಾಲೆಯ ಉದ್ದೇಶವೇ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆವಿಗೆ ಒಂದೇ ಕಡೆ ಕೊಡುವುದಾಗಿದೆ. ಈ ನಿಟ್ಟಿನಲ್ಲಿ ಹುಳಿಯಾರಿನ ಎಂಪಿಎಸ್ ಶಾಲೆ ಹಾಗೂ ಕೆಂಕೆರೆ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮರ್ಜ್ ಮಾಡಿ ಕರ್ನಾಟಕ ಪಬ್ಲಿಕ್ ಶಾಲೆ ಮಾಡಿದ್ದಾರೆ. ಭವಿಷ್ಯ ದಿನಗಳಲ್ಲಿ ಹುಳಿಯಾರಿನಲ್ಲಿರುವ ಪ್ರಾಥಮಿಕ ಶಾಲೆಯೂ ಸಹ ಕೆಂಕೆರೆ ರಸ್ತೆಯ ಶಾಲಾ ಆವರಣಕ್ಕೆ ಶಿಫ್ಟ್ ಮಾಡಲಾಗುತ್ತದೆ.

      ಹಾಗಾಗಿ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಜೂರಾಗಿರುವ ಕಟ್ಟಡವನ್ನು ಮುಂದೆ ಶಿಫ್ಟ್ ಆಗಲಿರುವ ಕೆಂಕೆರೆ ರಸ್ತೆಯ ಶಾಲಾ ಆವರಣದಲ್ಲಿ ಕಟ್ಟಿದರೆ ಭವಿಷ್ಯದಲ್ಲಿ ಅನುಕೂಲಕರ. ಹುಳಿಯಾರಿನಲ್ಲಿ ಈಗ ಕಟ್ಟಿ ಮುಂದೆ ಶಾಲೆ ಶಿಫ್ಟ್ ಆದರೆ ಲಕ್ಷಾಂತರ ರೂ. ವೆಚ್ಚದಲ್ಲಿ ಕಟ್ಟಿದ ಕೊಠಡಿಗಳು ಪಾಳು ಬೀಳುತ್ತವೆ. ಹಾಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಊರಿಗಿರುವ ಏಕೈಕ ಆಟದ ಮೈದಾನ ಉಳಿಸುವ ದೃಷ್ಠಿಯಿಂದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಹುಳಿಯಾರಿನ ಈ ಆಟದ ಮೈದಾನದಲ್ಲಿ ಪಟ್ಟಣದ ಐದಾರು ಪ್ರೌಢಶಾಲೆ, ಹತ್ತನ್ನೆರಡು ಪ್ರಾಥಮಿಕ ಶಾಲಾ ಮಕ್ಕಳು ಒಟ್ಟಿಗೆ ಸೇರಿ ಸ್ವಾತಂತ್ಯ ದಿನಾಚರಣೆ ಆಚರಿಸುತ್ತಾರೆ. ಹೋಬಳಿಯ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸಹ ಇಲ್ಲಿ ನಡೆಯುತ್ತವೆ. ಬೃಹತ್ ರಾಜಕೀಯ ಸಭೆ ಸೇರಿದಂತೆ ವಿವಿಧ ಸಭೆ ಸಮಾರಂಭಗಳು ಇಲ್ಲಿ ನಡೆಯುತ್ತವೆ. ಈ ಮೈದಾನದಲ್ಲಿ ಕಟ್ಟಡಗಳು ತಲೆ ಎತ್ತಿದರೆ ಇಲ್ಲಿನ ವಿದ್ಯಾರ್ಥಿಗಳು, ಸಾರ್ವಜನಿಕರು ಒಂದೂವರೆ ಕಿ.ಮೀ ದೂರದ ಕೆಂಕೆರೆ ರಸ್ತೆಯ ಶಾಲಾ ಆವರಣಕ್ಕೆ ಹೋಗಲೇ ಬೇಕಾದ ಅನಿವಾರ್ಯ ಕರ್ಮ ಸೃಷ್ಠಿಯಾಗುತ್ತದೆ.

-ವೈ.ಸಿ.ಸಿದ್ಧರಾಮಯ್ಯ, ಜಿಪಂ ಸದಸ್ಯರು, ಹುಳಿಯಾರು.

Recent Articles

spot_img

Related Stories

Share via
Copy link