ತುಮಕೂರು :
ಇದು ಶಾಲಾ ಆವರಣ, ನಾವು ನಿಮ್ಮ ಮಕ್ಕಳಿದ್ದ ಹಾಗೇ. ದಯವಿಟ್ಟು ಇಲ್ಲಿ ಕಸ ತಂದು ಸುರಿಯಬೇಡಿ ಎಂದು ಶಾಲಾ ಕಾಂಪೌಂಡ್‍ಗೆ ಲಗತ್ತಾಗಿ ಫಲಕ ಅಳವಡಿಸಿದ್ದರೂ…, ಶಾಲಾ ಕಾಂಪೌಂಡ್‍ನ ಕಲ್ಲಿನ ಕಂಬದ ಬದಿಗೆ ತರಕಾರಿ ತ್ಯಾಜ್ಯದ ಕಸ ತಂದು ರಾಶಿ ರಾಶಿ ಸುರಿಯುವುದು ತಪ್ಪಿಲ್ಲ. ವಿದ್ಯಾರ್ಥಿಗಳು ಈ ತ್ಯಾಜ್ಯವನ್ನೇ ತುಳಿದುಕೊಂಡು ಜ್ಞಾನದೇಗುಲಕ್ಕೆ ಪ್ರವೇಶ ಪಡೆಯುವ ಅಸಹ್ಯಕರ ಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ತಪ್ಪಿಸಲು ಕ್ರಮ ವಹಿಸದ ಪಾಲಿಕೆ ವಿರುದ್ಧ ವಿದ್ಯಾರ್ಥಿಗಳ ಪೋಷಕರು, ಸ್ಥಳೀಯರು ಹಿಡಿಶಾಪ ಹಾಕುವಂತಾಗಿದೆ. ಅಲ್ಲದೇ ಪಾಲಿಕೆ ನಡೆಸುತ್ತಿರುವ ಸ್ವಚ್ಛ ಸರ್ವೇಕ್ಷಣಾ ಅಭಿಯಾನ, ಸ್ವಚ್ಛತಾ ಆಂದೋಲನಕ್ಕೆ ಇದು ಕಪ್ಪು ಚುಕ್ಕೆಯಾದಂತಾಗಿದೆ.
ಹೌದು ಇದು ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಎಡಭಾಗಕ್ಕೆ ವಿಶಾಲಾಕ್ಷಮ್ಮ -ಸದಾಶಿವಯ್ಯ ಕಲ್ಯಾಣಮಂಟಪ ಸನಿಹದ ಹಿರೇಮಠದ ವಿದ್ಯಾಸಂಸ್ಥೆಯಿಂದ ನಡೆಸುತ್ತಿರುವ ವಿದ್ಯಾಮಾನಸ ಶಾಲೆಯ ಆವರಣದ ಬಳಿ ರೈಲ್ವೇ ಹಳಿಗೆ ಲಗತ್ತಾಗಿರುವ ಸಂಪರ್ಕ ರಸ್ತೆ ಸ್ಥಳದಲ್ಲಿ ವಿದ್ಯಾರ್ಥಿಗಳು, ಪಾದಚಾರಿಗಳು ಎದುರಿಸುತ್ತಿರುವ ನಿತ್ಯದ ಗೋಳು. ಪಾಲಿಕೆ ವಿಪಕ್ಷ ನಾಯಕ ರಮೇಶ್ ಅವರು ಪ್ರತಿನಿಧಿಸುವ ವಾರ್ಡ್‍ನಲ್ಲೇ ಎದುರಾಗಿರುವ ದುಸ್ಥಿತಿ. ಶೆಟ್ಟಿಹಳ್ಳಿ ಮುಖ್ಯರಸ್ತೆಯ ಎರಡು ಬದಿಯಲ್ಲಿ ಸಂಜೆ ವೇಳೆ ತಲೆ ಎತ್ತುವ ಬೀದಿ ಬದಿ ತರಕಾರಿ ವ್ಯಾಪಾರಸ್ಥರು, ಪಾಲಿಕೆ ದಂಡಕ್ಕೆ ಹೆದರಿ ರಸ್ತೆಯಲ್ಲಿ ಆ ತ್ಯಾಜ್ಯವನ್ನು ಬಿಡದೆ ಮೂಟೆಗಳಲ್ಲಿ ತುಂಬಿಕೊಂಡು ರಾತ್ರಿ ವೇಳೆ ಶಾಲಾ ಕಾಂಪೌಂಡ್ ಬದಿಗೆ ತಂದು ಸುರಿಯುತ್ತಿರುವುದರಿಂದ ರಾಶಿ-ರಾಶಿ ಕಸ ಬಿದ್ದು ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟಾಗಿದೆ.
ರಾತ್ರಿ ಕಾಣದಂತೆ ತಂದು ಸುರಿಯುವ ತರಕಾರಿ, ಸೊಪ್ಪು ತ್ಯಾಜ್ಯದ ಈ ಮೂಟೆಗಳನ್ನು ಬೀದಿ ನಾಯಿಗಳು, ಹಂದಿಗಳು, ಬೀಡಾಡಿ ದನಗಳು ಬಂದು ಕೆದಕಿ ಮತ್ತಷ್ಟು ರಸ್ತೆಪೂರ್ತಿ ಹರಡುತ್ತಿದ್ದು, ಪಾಲಿಕೆಯವರು ಎತ್ತೊಯ್ಯದ ಪರಿಣಾಮ ಅಲ್ಲಿಯೇ ಕೊಳೆತು ದುರ್ನಾತ ಬೀರುತ್ತಿರುವುದಲ್ಲದೇ ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತಿದೆ. ಹಿಂದೆ ಕಲ್ಯಾಣ ಮಂಟಪದ ಬಳಿ ಕಸದ ಕಂಟೈನರ್ ಇಟ್ಟಿದ್ದಾಗ ಅಲ್ಲಿಗೆ ಈ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಈಗ ಅದನ್ನು ಅಲ್ಲಿಂದ ತೆರವು ಮಾಡಿರುವ ಪರಿಣಾಮ ತರಕಾರಿ ಮಾರಾಟಗಾರರು ಉಳಿಕೆ ತ್ಯಾಜ್ಯವನ್ನು ಬಿಸಾಡಲು ಸೂಕ್ತ ಸ್ಥಳವಿಲ್ಲದೆ ಶಾಲೆಗೆ ಹೊಂದಿಕೊಂಡಿರುವ ಸ್ಥಳದಲ್ಲೇ ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ 31ನೇ ವಾರ್ಡ್‍ನ ಸ್ಥಳೀಯ ಪಾಲಿಕೆ ಸದಸ್ಯರಿಗಾಗಲೀ, ಪಾಲಿಕೆ ಅಧಿಕಾರಿಗಳಿಗಾಗಲೀ ಕರೆ ಮಾಡಿ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕಸದೊಂದಿಗೆ ಮೂತ್ರವಿಸರ್ಜನೆಯ ದುರ್ನಾತ:
ಇನ್ನೂ ಕಸ ಸುರಿಯುವ ರೈಲ್ವೆ ಹಳಿಯ ಈ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಹೆಚ್ಚಿದ್ದು, ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದಿರುವುದು ದೊಡ್ಡ ಕೊರತೆ ಎನಿಸಿದೆ. ಸೋಮೇಶ್ವರ ಪುರಂ ಮುಖ್ಯರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯ ದೂರವೆಂಬ ಕಾರಣಕ್ಕೆ ಈ ಕಸದ ಪ್ರದೇಶವನ್ನೇ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರು ಮೂತ್ರಾಲಯವನ್ನಾಗಿ ಮಾಡಿಕೊಂಡು ಅಲ್ಲಿಯೇ ಬಯಲು ಮೂತ್ರ ವಿಸರ್ಜನೆ ಮಾಡುತ್ತಾ ಶಾಲೆಯ ಸುತ್ತ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಮತ್ತೆ ಶಾಲೆಗಳು ಪುನರಾರಂಭಗೊಂಡಿದ್ದು, ಕೋವಿಡ್ ಆತಂಕ ಇನ್ನೂ ದೂರವಾಗದಿರುವ ಈ ಸಂದರ್ಭದಲ್ಲಿ ಪಾಲಿಕೆಯವರಿಗೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಬೇಡವೇ? ಬೀದಿ ಬದಿ ತರಕಾರಿ ವ್ಯಾಪಾರಸ್ಥರಿಗೆ ಬರೀದಂಡಾಸ್ತ್ರ ತೋರಿಸಿ ರಸ್ತೆಯಲ್ಲಿ ಹಾಕುವುದನ್ನು ತಪ್ಪಿಸಿದರಷ್ಟೇ ಸಾಕೇ? ಶಾಲೆ ಬಳಿ ತ್ಯಾಜ್ಯ ಹಾಕದಂತೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡದಬೇಕಲ್ಲವೇ ಎಂಬೆಲ್ಲ ಪ್ರಶ್ನೆಗಳು ಎದುರಾಗಿವೆ.
ಶಾಲೆಯೆಂಬುದು ಜ್ಞಾನದೇಗುಲವಿದ್ದಂತೆ. ದೇಶದ ಮುಂದಿನ ಭವಿಷ್ಯ ಅಲ್ಲಿ ರೂಪಿತವಾಗುತ್ತಿರುತ್ತದೆ. ಶಾಲೆಬಳಿಯಾಗಲೀ, ಮನೆಗಳ ಬಳಿಯಾಗಲೀ, ದೇವಾಲಯಗಳ ಬಳಿಯಾಗಲೀ ಅಸ್ವಚ್ಛತೆ ಉಂಟು ಮಾಡುವುದು ತರವಲ್ಲ. ಜನರು ಇದನ್ನುಅರಿತುಕೊಳ್ಳಬೇಕು. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕು.
-ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ ಶ್ರೀಗಳು ಹಾಗೂ ವಿದ್ಯಮಾನಸ ಶಾಲೆ ಸಂಸ್ಥಾಪಕರು.
ರಸ್ತೆಯಲ್ಲಿ ತರಕಾರಿ ತ್ಯಾಜ್ಯ ಬಿಸಾಡಿದರೆ ಪಾಲಿಕೆ ದಂಡ ಹಾಕುತ್ತದೆಂದು ಅದಕ್ಕೆ ಹೆದರಿ ರಾತ್ರೋರಾತ್ರಿ ಶಾಲೆ ಪಕ್ಕದ ಸ್ಥಳದಲ್ಲಿ ತಂದು ಸುರಿಯುವುದು ಅಪರಾಧವೇ. ಈ ಬಗ್ಗೆ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಸ್ಥಳ ಪರಿಶೀಲಿಸಿ ಕಸ ಎತ್ತುವಳಿಗೆ ಕ್ರಮ ವಹಿಸಲಾಗುವುದು.
-ಫರೀದಾಬೇಗಂ ಮೇಯರ್, ತುಮಕೂರು ಮಹಾನಗರಪಾಲಿಕೆ.