ಕೇಂದ್ರ ಸರ್ಕಾರ ಬೆಲೆ ಏರಿಸಿ ಬಡವರನ್ನು ಸಂಕಷ್ಟಕ್ಕೆ ದೂಡಿದೆ

 ಮಧುಗಿರಿ : 

    ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ರೈತ ವಿರೋಧಿ ಕರಾಳ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ತಾಲ್ಲೂಕು ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

     ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಹಸಿರು ಶಾಲು ಧರಿಸಿದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗಿ ಎತ್ತಿನ ಗಾಡಿಯನ್ನು ಏರಿ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.

     ಕ್ರಿಬ್ಕೋ ರಾಷ್ಟ್ರೀಯ ನಿರ್ದೇಶಕ ಆರ್.ರಾಜೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ತೈಲ ಬೆಲೆ, ಅಡುಗೆ ಅನಿಲ, ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು ಕಡು ಬಡವರ ಜೀವನವನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. 75 ದಿನಗಳಿಂದ ಸಾವಿರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದು, ಮೂರು ರೈತ ವಿರೋಧಿ ಕಾಯಿದೆಗಳನ್ನು ಹಿಂಪಡೆದು ಸಂಸತ್ ಅಧಿವೇಶನ ಕರೆದು ಈ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.

      ಕೇಂದ್ರ ಸರ್ಕಾರ ತನ್ನ ಹಠಮಾರಿ ಹಾಗೂ ಅಮಾನವೀಯ ಧೋರಣೆಯನ್ನು ಕೈಬಿಟ್ಟು ರೈತರ ಕೂಗನ್ನು ಆಲಿಸಬೇಕು ಹಾಗೂ ತೈಲ ಬೆಲೆಗಳನ್ನು ಗಣನೀಯವಾಗಿ ಇಳಿಸಬೇಕೆಂದು ತಿಳಿಸಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸ್ಕೂಟರ್ ಒಂದಕ್ಕೆ ಚಟ್ಟಾ ಕಟ್ಟಿ ಅಣುಕು ಪ್ರದರ್ಶನ ನಡೆಸಿ ಶ್ರದ್ದಾಂಜಲಿ ಆರ್ಪಿಸಿದರು.

     ತಾಪಂ ಅಧ್ಯಕ್ಷೆ ಇಂದಿರಾ ದೇನಾ ನಾಯ್ಕ, ಪುರಸಭೆ ಅಧ್ಯಕ್ಷ ತಿಮ್ಮರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್.ರಾಜಗೋಪಾಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಂಗಶಾಮಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣರೆಡ್ಡಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ನಾಗೇಶ್ ಬಾಬು, ಪುರಸಭೆ ಸದಸ್ಯರಾದ ಎಂ.ವಿ.ಗೋವಿಂದರಾಜು, ಲಾಲಾ ಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್, ರಾಜ್ಯ ಸಹಕಾರ ಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಪುರಸಭೆಯ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಅಯ್ಯೂಬ್, ಜಿಪಂ ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಮುಖಂಡರಾದ ಆದಿನಾರಾಯಣರೆಡ್ಡಿ, ಎಸ್.ಬಿ.ಟಿ.ರಾಮು, ಎಸ್.ಆರ್.ಮಂಜುನಾಥ್, ಮಾಲಿಮರಿಯಪ್ಪ, ಮಹಿಳಾ ಕಾಂಗ್ರೆಸ್‍ನ ಚಂದ್ರಮ್ಮ ಹಾಗೂ ಸಾವಿರಾರು ಕಾರ್ಯಕರ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link