ಮಡಿವಾಳ ಸಮುದಾಯಕ್ಕೆ ಪ.ಜಾತಿ ಮೀಸಲು ಸೌಲಭ್ಯ ಖಚಿತ

ಶಿರಾ :

      ರಾಜ್ಯದ ಮಡಿವಾಳ ಸಮುದಾಯವು ಪ.ಜಾತಿ ಸೌಲಭ್ಯವನ್ನು ಪಡೆಯುವ ವಿಚಾರ ಇಂದು ನಿನ್ನೆಯದಲ್ಲ. ಮೀಸಲು ಸೌಲಭ್ಯ ಪಡೆಯಲು ಹಕ್ಕೊತ್ತಾಯ ಮಾಡುವವರು ನಮ್ಮಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪರಿಣಾಮ ಸ್ವಲ್ಪ ತಡವಾಗಿದೆಯಾದರೂ ಪ.ಜಾತಿ ಮೀಸಲು ಸೌಲಭ್ಯ ಲಭಿಸುವುದು ಖಚಿತ ಎಂದು ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.

      ಶಿರಾ ವಿದ್ಯಾನಗರದ ಮಡಿವಾಳ ಮಾಚಿದೇವರ ದೇವಸ್ಥಾನದ ಆವರಣದಲ್ಲಿ ತಾಲ್ಲೂಕು ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಹಾಗೂ ಶ್ರೀ ವೀರಗಂಟೆ ಮಡಿವಾಳ ಮಾಚಿದೇವರ ದೇವಸ್ಥಾನದ 7 ನೇ ವಾರ್ಷಿಕೋತ್ಸವ ಮತ್ತು ಸಮುದಾಯದ ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ವೀರಗಂಟೆ ಮಡಿವಾಳ ಮಾಚಿದೇವ ಮಡಿವಾಳ ಸಮುದಾಯದ ಪರವಾಗಿ ಹೋರಾಟ ಮಾಡುವವರು ಇಲ್ಲದಿರುವುದರಿಂದ ಸಮುದಾಯ ಪರಿಶಿಷ್ಟ ಜಾತಿಯ ಮೀಸಲು ಪಡೆಯಲು ತಡವಾಗುತ್ತಿದೆ. ಮಡಿವಾಳ ಸಮುದಾಯ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದರೂ ಇದುವರೆಗೂ ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶ ನೀಡಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅಧಿಕಾರ ಬಂದ ದಿನವೇ ಅನ್ನಪೂರ್ಣ ವರದಿಯ ಮೂಲಕ ಕುಲ ಶಾಸ್ತ್ರ ಅಧ್ಯಯನ ನಡೆಸಿದ್ದು, ಕೇಂದ್ರ ಸರ್ಕಾರಕ್ಕೆ ಕಳುಹಿಸುವುದು ಮಾತ್ರ ಬಾಕಿ ಇದ್ದು, ಶೀಘ್ರದಲ್ಲೇ ಪ.ಜಾತಿ ಮೀಸಲು ದೊರೆಯುವುದು ಎಂದು ತಿಳಿಸಿದರು.

      ವೀರಘಂಟೆ ಮಡಿವಾಳ ಮಾಚಿದೇವ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಕೆ.ಈಶ್ವರ್ ಮಾತನಾಡಿ, ನಗರದಲ್ಲಿ ನಮ್ಮ ಮಡಿವಾಳ ಜನಾಂಗವನ್ನು ಡಾ.ಅನ್ನಪೂರ್ಣರವರ ವರದಿ ಅನುಸಾರ ಪ.ಜಾತಿಗೆ ಸೇರಿಸಲು ತಾವುಗಳು ವಿಧಾನಮಂಡಲ ಅದಿವೇಶನದಲ್ಲಿ ಸರ್ಕಾರದ ಗಮನ ಸೆಳೆದು, ನಮ್ಮ ಸಮುದಾಯವನ್ನು ಪ.ಜಾತಿಗೆ ಸೇರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಕ್ರಮ ವಹಿಸಬೇಕಿದೆ. ನಮ್ಮ ಸಮುದಾಯ ಅತ್ಯಂತ ಹಿಂದುಳಿದಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಅವಶ್ಯಕತೆ ಇರುವ ವಿದ್ಯಾರ್ಥಿ ನಿಲಯ ನಿರ್ಮಿಸಲು ಎರಡು ಎಕರೆ ನಿವೇಶನ ಕಲ್ಪಿಸುವುದು ಮತ್ತು ಒಂದು ಸಮುದಾಯ ಭವನವನ್ನು ಹಾಗೂ ನಮ್ಮ ಮಡಿಕಟ್ಟೆಯನ್ನು ಯಾವುದಾದರೂ ಅನುದಾನದಲ್ಲಿ ಫೆನ್ಸಿಂಗ್ ಮಾಡಿಸಿಕೊಡಬೇಕೆಂದು ಮನವಿ ಮಾಡಿದರು.

      ತೆಂಗು ನಾರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಮಡಿವಾಳ ಸಮುದಾಯ ಹಿಂದುಳಿದ ಜಾತಿಗಳಲ್ಲಿಯೇ ಅತಿ ಹೆಚ್ಚು ಹಿಂದುಳಿದ ಸಮಾಜವಾಗಿದೆ. ಸಮಾಜದ ಮುಖ್ಯವಾಹಿನಿಗೆ ಬರಲು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ತುಂಬಾ ಅವಶ್ಯಕವಾಗಿದೆ ಎಂದರು.

      ಕಾಂಗ್ರೆಸ್ ಮುಖಂಡ ಸಂಜಯ್ ಜಯಚಂದ್ರ ಮಾತನಾಡಿ, ಮಡಿವಾಳ ಸಮುದಾಯ ಹೆಚ್ಚು ಹಿಂದುಳಿದಿದ್ದು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಮುದಾಯ ರಾಜಕೀಯ ಸ್ಥಾನಮಾನ ದೊರಕಿಸಿಕೊಡಲು ಎಲ್ಲಾ ರಾಜಕೀಯ ಪಕ್ಷಗಳು ಮುಂದಾಗಬೇಕು ಎಂದರು

     ಜಿ.ಪಂ.ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಮಾತನಾಡಿ, ಪ.ಜಾತಿ ಮೀಸಲಾಗಿ ಸ್ವಾಮೀಜಿ ಹಾಗೂ ನಂಜಪ್ಪನವರು ಹೋರಾಟ ನಡೆಸಿದ್ದಾರೆ. ಆದರೆ ಇದುವರೆಗೂ ಸಮಾಜಕಲ್ಯಾಣ ಸಚಿವರ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲು ಬಿಟ್ಟಿಲ್ಲ. ಈಗ ಸ್ವಾಮೀಜಿ ನಾಯಕತ್ವದಲ್ಲಿ ರಘುಕೌಟಿಲ್ಯರವರು ಸಮಾಜದ ಮುಖಂಡರನ್ನು ಸೇರಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಪ.ಜಾತಿಯ ಮೀಸಲಾತಿ ದೊರಕಿಸಿಕೊಡಲು ಮುಂದಾಗಬೇಕು ಎಂದರು.

      ಈ ಸಂದರ್ಭದಲ್ಲಿ ಸಮುದಾಯದಿಂದ ಆಯ್ಕೆಯಾಗಿರುವ ನೂತನ ಗ್ರಾ.ಪಂ.ಸದಸ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

      ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಕಲ್ಕೆರೆ ರವಿಕುಮಾರ್, ಬಿ.ಜೆ.ಪಿ. ನಗರಾಧ್ಯಕ್ಷ ವಿಜಯರಾಜು, ನಗರ ಮಹಿಳಾ ಅಧ್ಯಕ್ಷೆ ರೇಖಾ ರಾಘವೇಂದ್ರ, ಜಿಲ್ಲಾದ್ಯಕ್ಷ ಲಕ್ಷ್ಮಣ್, ಶಾಂತಕುಮಾರ್, ಜಿಲ್ಲಾ ಉಪಾಧ್ಯಕ್ಷ ಜ್ಞಾನೇಶ್, ಟ್ರಸ್ಟ್ ಅಧ್ಯಕ್ಷ ಎಸ್.ಎನ್.ಮಹೇಶ್‍ಕುಮಾರ್, ಕಾರ್ಯದರ್ಶಿ ನಟರಾಜ್, ಕುಮಾರ್, ಭೂತೇಶ್, ಕರಿಯಪ್ಪ, ಮಂಜುನಾಥ್, ದೇವರಾಜಪ್ಪ, ಕರಿಯಣ್ಣ, ಪಾಪಣ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap