ತಿಪಟೂರು :
ಹಣ ಡಬ್ಲಿಂಗ್, ಎ.ಟಿ.ಎಂ. ವಂಚನೆ, ಸಿಗರೇಟ್ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಲವು ಆರೋಪಿಗಳನ್ನು ನೊಣವಿನಕೆರೆ ಪೊಲೀಸರು ಸೆರೆ ಹಿಡಿದಿದ್ದಾರೆ.
ನಗರದ ಡಿ.ವೈ.ಎಸ್ಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಡಾ.ಕೆ.ವಂಸಿಕೃಷ್ಣ ಅವರು, ಹಣ ಡಬ್ಲಿಂಗ್ ಮಾಡಿಕೊಡುತ್ತೇವೆ ಎಂದು ಹೇಳಿ ಮಾ.18 ರಂದು ರಾತ್ರಿ ನಿಟ್ಟೂರು ಗ್ರಾಮದ ರಮೇಶ್ ಎಂಬುವರಿಗೆ ಆರೋಪಿಗಳಾದ ತಾಲ್ಲೂಕಿನ ಗೊರಗೊಂಡನಹಳ್ಳಿಯ ಧನಂಜಯ, ಹಳೇಪಾಳ್ಯದ ಅಕ್ಷಯ್, ವಿಶ್ವನಾಥ್ ಇವರುಗಳು 500, 2000 ರೂ. ಮುಖಬೆಲೆಯ ನೋಟುಗಳನ್ನು ಕೊಟ್ಟರೆ ಅದಕ್ಕೆ ಬದಲಾಗಿ ಎರಡರಷ್ಟು ಮೌಲ್ಯದ 100 ರೂ. ಮುಖಬೆಲೆಯ ನೋಟುಗಳನ್ನು ಕೊಡುವುದಾಗಿ ನಂಬಿಸಿ ಅವರಿಂದ 1,65,000 ರೂ. ಗಳನ್ನು ಪಡೆದುಕೊಂಡು ವಂಚಿಸಿ ಮೋಸ ಮಾಡಿದ್ದರು. ಈ ಸಂಬಂಧನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿತ್ತು.
ಅದೇ ರೀತಿ ಮಾ.1 ರಂದು ಆರೋಪಿಗಳಾದ ಗೋವಿಂದರಾಜ, ವಿಶ್ವ, ಅನಿಲ್, ಆಕ್ಷನ್ ಕಿರಣ್ ಅವರು ಚನ್ನರಾಯ ಪಟ್ಟಣ ತಾಲ್ಲೂಕು ಜಂಬೂರು ಗ್ರಾಮದ ಧನಂಜಯ ಬಿನ್ ಚಂದ್ರ್ರೇಗೌಡ ರವರನ್ನು 500, 2000 ರೂ. ಮುಖಬೆಲೆಯ ನೋಟುಗಳನ್ನು ಕೊಟ್ಟರೆ, ಅದಕ್ಕೆ ಡಬ್ಬಲ್ ಹಣವನ್ನು 100 ರೂ. ಗಳ ಮುಖಬೆಲೆಯಲ್ಲಿ ಕೊಡುವುದಾಗಿ ನಂಬಿಸಿ ಧನಂಜಯನಿಂದ 5 ಲಕ್ಷ ರೂ. ಗಳನ್ನು ಪಡೆದು ವಂಚಿಸಿದ್ದರು.ಈ ಬಗ್ಗೆ ಹೊನ್ನವಳ್ಳಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮಾಡಿ ಮೇಲ್ಕಂಡ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯಾಮಾರಿಸಿ ಎಟಿಎಂ ಹಣ ಡ್ರಾ ಮಾಡುತ್ತಿದ್ದವನ ಸೆರೆ:
ನೊಣವಿನಕೆರೆಯ ಕರ್ನಾಟಕ ಬ್ಯಾಂಕ್ ಎಟಿಎಂ ಮೆಷಿನ್‍ನಲ್ಲಿ ಡಿ.ವಿ.ದೀಪಾ ಎಂಬುವರು ಹಣ ಡ್ರಾ ಮಾಡುವಾಗ ಹಿಂದೆ ನಿಂತಿದ್ದ ನೊಣವಿನಕೆರೆ ಗ್ರಾಮದ ಮಹಾಬುದ್ದೀನ್ ಎಂಬಾತ ಅವರ ಸಹಾಯಕ್ಕೆ ಬಂದು, ಅವರ ಗಮನಕ್ಕೆ ಬಾರದಂತೆ ಆಕೆಯ ಎ.ಟಿ.ಎಂ ಕಾರ್ಡ್ ಅನ್ನು ತೆಗೆದುಕೊಂಡು, ಆತನ ಬಳಿ ಇದ್ದ ಅದೇ ಬ್ಯಾಂಕ್‍ನ ಎ.ಟಿ.ಎಂ ಕಾರ್ಡ್ ಅನ್ನು ದೀಪಾರವರಿಗೆ ಬದಲಿಸಿ ನೀಡಿದ್ದಾನೆ. ನಂತರ ಆಕೆಯ ಖಾತೆಯಲಿದ್ದ 9500 ರೂ. ಗಳನ್ನು ಡ್ರಾ ಮಾಡಿ ವಂಚಿಸಿದ್ದ ಈ ಸಂಬಂಧ ನೊಣವಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಗಾಯತ್ರಿ ಎಂಬುವರ ಎ.ಟಿ.ಎಂಕಾರ್ಡ್‍ಯಿಂದ 12,100 ರೂ.ಗಳನ್ನು ಡ್ರಾ ಮಾಡಿ ವಂಚಿಸಿದ್ದು ರುವ ಸಂಬಂಧ ನೊಣವಿನಕೆರೆ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿ ಸದರಿ ಆರೋಪಿಯನ್ನು ಸೆರೆಹಿಡಿಯಲಾಗಿದೆ.
ಭದ್ರಾವತಿಯಿಂದ ಕಾರ್‍ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಮಹಿಳೆಯರ ಬಂಧನ:
ಭದ್ರಾವತಿಯಿಂದ ತಿಪಟೂರಿಗೆ ಬಂದು ಕಳ್ಳತನವೆಸಗುತ್ತಿದ್ದ ಶಾಂತಿಕರ್ಕಿ, ಮೀನಾಕ್ಷಿ ಮತ್ತು ಸಾವಿತ್ರಿ ಎಂಬುವವರನ್ನು ಬಂಧಿಸಿ 30 ಗ್ರಾಂ. ಚಿನ್ನ. 1ಕಾರು, 15 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಈ ಎಲ್ಲಾ ಆರೋಪಿತರವನ್ನು ಡಿ.ವೈ.ಎಸ್ಪಿ ನಿರ್ದೇಶನದಲ್ಲಿ ತಿಪಟೂರು ಗ್ರಾಮಾಂತರ ವೃತ್ತದ ಸರ್ಕಲ್ ಇನ್‍ಸ್ಪೆಕರ್ ಜಯಲಕ್ಷ್ಮಮ್ಮ ಹಾಗೂ ಹೊನ್ನವಳ್ಳಿ, ತಿಪಟೂರು ನಗರ ಹಾಗೂ ಗ್ರಾಮಾಂತರ, ನೊಣವಿನಕೆರೆ ಆರಕ್ಷಕರು ಈ ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆಂದ ಎಸ್ಪಿ ಅವರು ಇಡೀ ತಂಡವನ್ನು ಅಭಿನಂದಿಸಿದರು.
ಇತ್ತೀಚಿನ ದಿನಗಳಲ್ಲಿ ಎ.ಟಿ.ಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ಸ್ಕೀಮಿಂಗ್ ಯಂತ್ರ ಬಳಸಿ, ಅಮಾಯಕರಿಂದ ಕಾರ್ಡ್ ಬದಲಾವಣೆ ಮಾಡಿ ಹಣವನ್ನು ಅಪಹರಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಣವನ್ನು ದುಪ್ಪಟ್ಟು ಮಾಡುವಂತೆ ಆಮೀಷವೊಡ್ಡುವವರ ವಿರುದ್ಧ ಜಾಗೃತಿ ವಹಿಸಬೇಕು.
-ಡಾ. ವಂಶಿಕೃಷ್ಣ ಎಸ್ಪಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
