ಮಧುಗಿರಿ :
ಅಲಂಕಾರಿಕಾ ಶಿಲೆಯ ಗಣಿಗಾರಿಕೆಗಾಗಿ ಕೆಲ ಕಂದಾಯ ಇಲಾಖೆಯ ನೌಕರರು ಗ್ರಾಮಸ್ಥರ ನಕಲಿ ಸಹಿಗಳು ಇರುವ ವರದಿ ಸಲ್ಲಿಸಿದ್ದು, ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡದಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಕಸಬಾ ಹೋಬಳಿ ವೀರಣ್ಣನಹಳ್ಳಿ ಗ್ರಾಮದ ಸರ್ವೆ ನಂಬರ್ 25 ರಲ್ಲಿ ರಾಜೇಶ್ವರಿ ಎನ್ನುವವರು ಆರ್ನ್ಮೆಂಟ್ ಸ್ಟೋನ್, ಶಿವಮ್ಮರವರಿಗೆ 10 ಎಕರೆ ಮತ್ತು ಎಚ್.ಬಿ ರಮೇಶ್ ಎನ್ನುವವರಿಗೆ 10 ಎಕರೆ ಅಲಂಕಾರಿಕ ಶಿಲೆಯ ಗಣಿಗಾರಿಕೆಗಾಗಿ ಸಲ್ಲಿಸಿರುವ ಮನವಿಯ ಸಂಬಂಧ ತಾಲ್ಲೂಕಿನ ಕಸಬಾ ಹೋಬಳಿ ಶೆಟ್ಟಿಹಳ್ಳಿ ವೃತ್ತದ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ತನಿಖಾಧಿಕಾರಿ ಅವರು ಗಣಿಗಾರಿಕೆ ಸಂಬಂಧ ಕೆಲ ಗ್ರಾಮಸ್ಥರ ನಕಲಿ ಸಹಿಗಳನ್ನು ನಮೂದು ಮಾಡಿ ಸಲ್ಲಿಸಿರುವ ವರದಿಯು ಅಧಿಕೃತ ಮಾಹಿತಿಯಿಂದ ತಿಳಿದು ಬಂದಿದೆ.
ಈ ಗಣಿಗಾರಿಕೆಯಿಂದಾಗಿ ವನ್ಯ ಮೃಗಗಳು, ಜಾನುವಾರುಗಳು, ವಿಪರೀತವಾದ ಧೂಳಿನಿಂದ ಬೆಳೆಗಳು ಹಾಳಾಗುತ್ತದೆ ಹಾಗೂ ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಪರಿಸರಕ್ಕೂ ಹಾನಿಯಾಗಲಿದೆ. ನಿಗದಿ ಪಡಿಸಿರುವ ಸ್ಥಳದಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡದೆ ಗ್ರಾಮ ಲೆಕ್ಕಿಗ ಮತ್ತು ಕಂದಾಯ ತನಿಖಾಧಿಕಾರಿ ರವರ ನಕಲಿ ಸಹಿ ದಾಖಲಿಸಿರುವ ವರದಿಯ ಸಂಬಂಧ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜೆಡಿಎಸ್ ಮುಖಂಡ ಬಿ.ಎಸ್.ಶ್ರೀನಿವಾಸ್, ಗ್ರಾಪಂ ಸದಸ್ಯರಾದ ಗುಂಡನಾಯ್ಕ ಮತ್ತು ಗೋಪಾಲ ಹಾಗೂ ಮತ್ತಿತರ ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ