ಹುಳಿಯಾರು : ನಾಮಪತ್ರ ಪರಿಶೀಲನೆ ವೇಳೆ ಮಾತಿನ ಚಕಮಕಿ

 ಹುಳಿಯಾರು : 

      ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಯ ನಾಮಪತ್ರ ಪರಿಶೀಲನೆ ವೇಳೆ ಚುನಾವಣಾಧಿಕಾರಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ನಡೆದಿದೆ.

      3 ನೇ ವಾರ್ಡ್‍ನ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಎಂ.ಗಣೇಶ್ ಹಾಗೂ 5 ವಾರ್ಡ್‍ನಿಂದ ಪಕ್ಷೇತರ ಅಭ್ಯರ್ಥಿ ಪುಟ್ಟಮ್ಮ ಅವರು ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದಡಿ ಪ್ರಕರಣ ದಾಖಲಾಗಿರುವ ಕಾರಣ ನಾಮಪತ್ರಗಳನ್ನು ತಿರಸ್ಕೃತಗೊಳಿಸುವಂತೆ ಜಿಲ್ಲಾಧಿಕಾರಿಗಳು ಇ ಮೇಲೆ ಸಂದೇಶ ಕಳುಹಿಸಿದ್ದು ಈ ಮಾತಿನ ಚಕಮಕಿಗೆ ಕಾರಣವಾಗಿದೆ.

      ಜಿಲ್ಲಾಧಿಕಾರಿಗಳ ಪತ್ರದಂತೆ ಇಬ್ಬರ ನಾಮಪತ್ರವನ್ನು ತಿರಸ್ಕರಿಸುವುದಾಗಿ ಚುನಾವಣಾಧಿಕಾರಿ ಹೊನ್ನಪ್ಪ ಅವರು ಇವರಿಬ್ಬರಿಗೆ ತಿಳಿಸಿದರು. ಚುನಾಣಾಧಿಕಾರಿಗಳ ಈ ಅನಿರಿಕ್ಷಿತ ನಡೆಯಿಂದ ವಿಚಲಿತರಾದ ಗಣೇಶ್ ಮತ್ತು ಪುಟ್ಟಮ್ಮ ತಮ್ಮ ಬೆಂಬಲಿಗರೊಂದಿಗೆ ಪಪಂ ಕಛೇರಿಗೆ ಆಗಮಿಸಿ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳಿಂದ ಬಂದಿರುವ ಪತ್ರದಲ್ಲಿ ಸಹಿ ಮತ್ತು ಮೊಹರಿಲ್ಲ. ಅಲ್ಲದೆ ಈ ಪ್ರಕರಣದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು ತೀರ್ಪು ಬರುವವರೆವಿಗೂ ನಾವು ಅಪರಾಧಿಗಳಲ್ಲ, ಆರೋಪಿಗಳಷ್ಟೆ ಎಂದು ವಾದಿಸಿದರು. ಈ ಪ್ರಕರಣದಲ್ಲಿ ನಾವು ನಿರ್ದೊಷಿಗಳಾಗಿದ್ದು ನಮ್ಮ ನಾಮಪತ್ರ ತಿರಸ್ಕರಿಸಬೇಡಿ ಎಂದು ಕೈ ಮುಗಿದು ಮನವಿ ಮಾಡಿದರು.

      ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್ ಅವರಿಗೆ ಆಕ್ಷೇಪ ಎತ್ತಿರುವ ಬಗ್ಗೆ ತಿಳಿಸಲು ಚುನಾವಣಾಧಿಕಾರಿಗಳು ದೂರವಾಣಿ ಕರೆ ಮಾಡಿದರಾದರೂ ಅವರಿಬ್ಬರೂ ಸಂಪರ್ಕಕ್ಕೆ ಸಿಗಲಿಲ್ಲ. ತಮ್ಮ ಮೇಲಿರುವ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೆ ಅದರ ಪ್ರತಿ ಕೊಡಿ ನಾಮಪತ್ರ ಸಿಂಧು ಮಾಡುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದರು. ನಮ್ಮ ವಕೀಲರು ಕೋರ್ಟ್‍ಗೆ ಹೋಗಿದ್ದು ಕಾಲವಕಾಶ ಕೊಡಿ ಎಂದು ಕೇಳಿಕೊಂಡರು. 5 ಗಂಟೆಯವರೆವಿಗೂ ಕಾಲವಕಾಶ ನೀಡಿ ಕೊನೆಗೆ ಜಿಲ್ಲಾಧಿಕಾರಿಗಳ ಸೂಚನೆ ಉಲ್ಲಂಘಿಸಲಾಗುವುದಿಲ್ಲ. ಹಾಗಾಗಿ ನಾಮಪತ್ರ ತಿರಸ್ಕರಿಸಿ ಇದಕ್ಕೆ ಕಾರಣ ಸಹಿತ ತಮಗೆ ಹಿಂಬರಹ ನೀಡಲಾಗುವುದು. ಹಿಂಬರಹ ಪಡೆದು ಕೋರ್ಟ್ ಮೆಟ್ಟಿಲೇರಿ ಎಂದರು.

      ಇದು ಏಕಪಕ್ಷಿಯ ನಿರ್ಧಾರವಾಗಿದ್ದು ಯಾವುದೇ ಕಾರಣಕ್ಕೂ ತಿರಸ್ಕರಕ್ಕೆ ಅವಕಾಶ ಕೊಡುವುದಿಲ್ಲ. ಕಚೇರಿ ಮುಂದೆ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು. ವಿಷಯ ತಿಳಿದ ಸಿಪಿಐ ವೀಣಾ ಅವರು ಪೊಲೀಸ್ ಸಿಬ್ಬಂದಿ ಸಹಿತ ಆಗಮಿಸಿ ಚುನಾವಣಾಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಿದರು. ಅಲ್ಲದೆ ತಹಸೀಲ್ದಾರ್ ಕಛೇರಿಯ ಸಿಬ್ಬಂದಿ ಸಹ ಆಗಮಿಸಿ ನಾಮಪತ್ರ ತಿರಸ್ಕಾರಕ್ಕೆ ಸಂಬಂಧಿಸಿದ ಸೂಕ್ತ ದಾಖಲಾತಿಗಳನ್ನು ನೀಡಿದರು. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದಡಿ ಪ್ರಕರಣ ದಾಖಲಾಗಿರುವ ಕಾರಣ 3 ವರ್ಷ ತಾವು ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದೇಳಿ ಗೊಂದಲಕ್ಕೆ ತೆರೆ ಎಳೆದರು.

ಇವರಿಬ್ಬರ ಮೇಲಿರುವ ಪ್ರಕರಣ ಏನು?

      ಕಳೆದ ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಎಂ.ಗಣೇಶ್ ಹಾಗೂ ಪುಟ್ಟಮ್ಮ ಸೇರಿದಂತೆ ಐವರು 2015-16 ಮತ್ತು 2016-17ರ ಸಾಲಿನಲ್ಲಿ ವರ್ಗ 1 ರ ನಿಧಿಯಿಂದ ಕಾಮಗಾರಿ ನಿರ್ವಹಿಸಿದ ಬಾಬ್ತು ಹಣವನ್ನು ಕಾನೂನು ಬಾಹಿರವಾಗಿ ಅವರ ಹೆಸರಿಗೆ ಪಡೆದಿದ್ದರು. ಮಾರ್ಚ್ 20 ರಲ್ಲಿ ಈ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತಿ ಅಧಿನಿಯಮ 1999 ರ ಪ್ರಕರಣ 48(4)ರಂತೆ ಪ್ರಕರಣ ದಾಖಲಾಗಿತ್ತು. ಅಲ್ಲದೆ 20-03-2019 ರಂದು ಇವರ ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಈ ಪ್ರಕರಣದನ್ವಯ ಮುಂದಿನ 3 ವರ್ಷಗಳು ಚುನಾವಣೆಗೆ ಸ್ಪರ್ಧೆ ಮಾಡುವಂತಿರಲಿಲ್ಲ. ಆದರೆ ಗಣೇಶ್ ಹಾಗೂ ಪುಟ್ಟಮ್ಮ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹಾಗಾಗಿ ರಾಜ್ಯ ಚುನಾವಣಾ ಆಯೋಗ ಇವರ ಆದೇಶದಂತೆ ನಾಮಪತ್ರಗಳನ್ನು ತಿರಸ್ಕೃತಗೊಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap