ಕೊರಟಗೆರೆ : ಮಗು ಸಂಸ್ಕಾರ : ಕುಟುಂಬ ಭೇಟಿಯಾದ ಆಯೋಗ

 ಕೊರಟಗೆರೆ : 

      ತಾಲ್ಲ್ಲೂಕಿನ ಜಂಪೇನಹಳ್ಳಿ ಗ್ರಾಮದ ಮಗುವಿನ ಅಂತ್ಯ ಸಂಸ್ಕಾರದ ಘಟನೆಯು ರಾಜ್ಯದಲ್ಲಿ ಮತ್ತೆಲ್ಲಿಯೂ ನಡೆಯಬಾರದು. ಅಂತಹ ಘಟನೆ ನಡೆದರೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಆಯೋಗದ ಸದಸ್ಯ ಹಾಗೂ ಕಾರ್ಯದರ್ಶಿ ವೆಂಕಟೇಶ ದೊಡ್ಡೇರಿ ತಿಳಿಸಿದರು.

ಅವರು ತಾಲ್ಲುಕಿನ ಜಂಪೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದರು. ಸಂತ್ರಸ್ತ ಕುಟುಂಬಸ್ಥೆ ನೇತ್ರಾವತಿರವರ ಗುಡಿಸಲಿಗೆ ಭೇಟಿ ನೀಡಿ, ಸ್ಥಳದಲ್ಲೇ ಘಟನೆಯ ಸಂಪೂರ್ಣ ವರದಿ ಪಡೆದರು. ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಮಾರ್ಚ್ 21 ರಂದು ಜಂಪೇನಹಳ್ಳಿಯ ಶಾಹಿ ಗಾರ್ಮೆಂಟ್ಸ್‍ನ ಸೆಕ್ಯೂರಿಟಿ ಗಾರ್ಡ್‍ನಿಂದ ನಡೆದ ಕೃತ್ಯವು ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಪ್ರಜಾ ಪ್ರಭುತ್ವದಲ್ಲಿ ಇದು ಅತ್ಯಂತ ತಲೆ ತಗ್ಗಿಸುವಂತಹ ಘಟನೆಯಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಗಳಿಗೆ ಅನ್ಯಾಯ, ಅವರ ಹಕ್ಕುಗಳಿಗೆ ಚ್ಯುತಿ ಬಂದಂತ ಸಂದರ್ಭದಲ್ಲಿ ನ್ಯಾಯ ಒದಗಿಸಲು, ಸರ್ಕಾರಕ್ಕೆ ವರದಿ ನೀಡಲು ಸಂವಿಧಾನಾತ್ಮಕವಾಗಿ 2002ರಲ್ಲಿ ಈ ಆಯೋಗವು ರಚನೆಯಾಗಿದೆ. ಎತ್ತಿನಹೊಳೆ ಯೋಜನೆಯ ಕಾಮಗಾರಿಯಲ್ಲಿ ಕಲ್ಲು ಸ್ಪೋಟದಿಂದ ಜಂಪೇನಹಳ್ಳಿಯ ನೇತ್ರಾವತಿ ಮತ್ತು ರಂಗನಾಥ್ ದಂಪತಿಯ ಮೂರು ತಿಂಗಳ ಹೆಣ್ಣು ಮಗು ಸಾವಿಗೀಡಾಗಿದೆ ಎಂದು ಹೇಳಲಾಗಿದೆ.

      ಆ ಮಗುವನ್ನು ಶವಸಂಸ್ಕಾರ ನಡೆಸುವಾಗ, ಗುಂಡಿಯಿಂದ ಹೊರತೆಗೆದು ಬೇರೆಡೆಗೆ ಕಳುಹಿಸಿದ ಸುದ್ದಿ ಪತ್ರಿಕೆಗಳಿಂದ ತಿಳಿಯಿತು. ಈ ಕುಟುಂಬಕ್ಕೆ ಆಯೋಗ ಇರುವುದಾಗಿ ತಿಳಿಸಿ, ಧೈರ್ಯ ತುಂಬಲು ಈ ಸ್ಥಳಕ್ಕೆ ಆಗಮಿಸಿದ್ದು, ಘಟನೆ ನಡೆದ ಜಾಗಗಳನ್ನು ಪರಿಶೀಲಿಸಲಾಗಿದೆ. ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಈ ಘಟನೆಯಿಂದ ನೊಂದಿರುವ ಕುಟುಂಬಕ್ಕೆ ಎತ್ತಿನಹೊಳೆ ಯೋಜನೆಯಡಿಯಲ್ಲಿ ಒಂದು ಲಕ್ಷ ರೂ. ಮತ್ತು ಇಲಾಖೆ, ಸಾರ್ವಜನಿಕರಿಂದ 10 ಸಾವಿರ, ತಲಾ ಐವತ್ತು ಕೆ.ಜಿ ಅಕ್ಕಿ, ರಾಗಿ, ಗೋಧಿಯನ್ನು ನೀಡಲಾಗಿದೆ. ಅವರು ಮನೆ ಕಟ್ಟಿಕೊಳ್ಳಲು ಅಂಬೇಡ್ಕರ್ ವಸತಿ ನಿಗಮದಿಂದ ಹಕ್ಕು ಪತ್ರವನ್ನು ಸಹ ನೀಡಲಾಗಿದೆ. ಈ ಗ್ರಾಮಕ್ಕೆ ಸರ್ವೇ ನಂ 7 ರಲ್ಲಿ ಸ್ಮಶಾನಕ್ಕಾಗಿ ಹಾಗೂ ಘಟನೆ ನಡೆದ ಜಾಗವನ್ನು ಪರಿಶೀಲಿಸಿ ಅಲ್ಲಿನ ಜನರಿಗೆ ಸ್ಮಶಾನದ ಜಾಗವನ್ನಾಗಿ ಮಾಡಲು ಸ.ನಂ 52/1ರ ಮಾಲೀಕರ ಜೊತೆ ಮಾತನಾಡಿ ನದಿ ಪಾತ್ರದ ಜಾಗವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು.

ಈಗಿರುವ ಅಂಕಿ ಅಂಶಗಳ ಪ್ರಕಾರ ತಾಲ್ಲೂಕಿನಲ್ಲಿ 252 ಹಳ್ಳಿಗಳ ಪೈಕಿ ಸುಮಾರು 42 ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ಮಶಾನ ಮಂಜೂರಾಗಬೇಕಿದೆ. ಸಮಾಜ ಕಲ್ಯಾಣ ಇಲಾಖೆಯು ಈ ಎಲ್ಲಾ ಸ್ಮಶಾನಗಳಿಗೆ ನೀರು, ತಂತಿ ಬೇಲಿ, ವಿದ್ಯುತ್‍ಶಕ್ತಿಯನ್ನು ಒದಗಿಸಲು ಸೂಚಿಸಲಾಗಿದೆ. ಒಟ್ಟಾರೆ ಈ ಘಟನೆ ಇನ್ನು ಮುಂದೆ ನಡೆದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಕ್ಷೇತ್ರದ ಶಾಸಕ ಡಾ.ಜಿ ಪರಮೇಶ್ವರರವರು ಪತ್ರಿಕೆಯೊಂದಿಗೆ ಮಾತನಾಡಿ, ಪ್ರಸ್ತುತ ಕೇರಳ ಚುನಾವಣಾ ಉತ್ಸುವಾರಿಯಲ್ಲಿದ್ದು, ಘಟನೆಯ ವಿಷಯ ತಿಳಿದ ತಕ್ಷಣ ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದ್ದೇನೆ. ಕೇರಳದಿಂದ ಬಂದ ತಕ್ಷಣ ಕುಟುಂಬದವರನ್ನು ಭೇಟಿ ಮಾಡಿ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಲಾಗುವುದು. ಈ ಘಟನೆಯು ಒಂದು ಅಮಾನವೀಯ ಸಂಗತಿಯಾಗಿದ್ದು, ತಪಿತಸ್ಥರಿಗೆ ಶಿಕ್ಷೆ ಹಾಗೂ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

      ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಪಿ.ಆರ್ ಸುಧಾಕರ್‍ಲಾಲ್ ನೊಂದ ಕುಟುಂಬದವರಿಗೆ ನ್ಯಾಯ ಒದಗಿಸುವಂತೆ ಆಯೋಗದ ಸದಸ್ಯರಿಗೆ ಮನವಿ ನೀಡಿದರು. ಜಿ.ಪಂ ಸದಸ್ಯ ವೈ ಹೆಚ್ ಹುಚ್ಚಯ್ಯ, ತಾ.ಪಂ ಅಧ್ಯಕ್ಷ ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ತುಮಕೂರು ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಉದ್ದೇಶ್ ಟಿ.ಜೆ, ಉಪವಿಭಾಗಾಧಿಕಾರಿ ಸೋಮಪ್ಪ ಕಡಗೋಳ, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ತಹಸೀಲ್ದಾರ್ ಗೋವಿಂದರಾಜು, ಇ.ಒ ಶಿವಪ್ರಕಾಶ್, ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರುಗಳಾದ ಜೆಟ್ಟಿ ಅಗ್ರಹಾರ ನಾಗರಾಜು, ವೆಂಕಟೇಶ್, ದೊಡ್ಡಯ್ಯ, ಸುರೇಶ್, ಕೆ.ಆರ್ ಓಬಳರಾಜು, ಕೆವಿ ಮಂಜುನಾಥ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link