ತುಮಕೂರು:
ನಗರದ ನಾಗರಿಕರೇ ಎಚ್ಚರ, ಇಂದಿನಿಂದ ಮಾಸ್ಕ್ ಧರಿಸದೇ ರಸ್ತೆಗಿಳಿದರೆ, ಸಾಮಾಜಿಕ ಅಂತರ ಕಾಪಾಡದೇ ಗುಂಪುಗೂಡಿದ್ದರೆ ದಂಡ ಕಟ್ಟಿಟ್ಟ ಬುತ್ತಿ. ತುಮಕೂರು ಮಹಾನಗರಪಾಲಿಕೆ ಇಂದಿನಿಂದಲೇ ನಗರದ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಜಾರಿಗೆ ಬರುವಂತೆ ನಾಲ್ಕು ಗಸ್ತು ತಂಡಗಳನ್ನು ರಚಿಸಿ ಕೋವಿಡ್ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಕಾರ್ಯಪ್ರವೃತ್ತವಾಗಿದೆ.
ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ, ಜಿಲ್ಲಾಧಿಕಾರಿಗಳ ಆದೇಶದ ಅನುಸಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಆಯುಕ್ತೆ ರೇಣುಕಾ ಅವರು ಪಾಲಿಕೆ ಆರೋಗ್ಯಾಧಿಕಾರಿ ಡಾ.ಎನ್.ಪಿ.ರಕ್ಷಿತ್ ನೇತೃತ್ವದಲ್ಲಿ ಪಾಲಿಕೆ ಅಧಿಕಾರಗಳನ್ನೊಳಗೊಂಡ ನಾಲ್ಕು ಗಸ್ತುತಂಡವನ್ನು ರಚಿಸಿ ಮಾ.5ರಂದು ಆದೇಶಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ 35 ವಾರ್ಡ್ಗಳಲ್ಲಿ ಈ ತಂಡಗಳು ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಸಂಚರಿಸಿ ಸಾರ್ವಜನಿಕವಾಗಿ ಮಾಸ್ಕ್ ಧರಿಸದಿರುವವರು, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವವರು, ಗುಂಪು-ಗುಂಪಾಗಿ ಇರುವುವರು ಕಂಡುಬಂದರೆ ಸ್ಥಳದಲ್ಲೇ ತಕ್ಷಣ ಕಾರ್ಯಪ್ರವೃತ್ತರಾಗಿ 250 ರೂ. ದಂಡ ವಿಧಿಸಲಿದ್ದಾರೆ. ಅಂತೆಯೇ ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಸಂಖ್ಯೆಯಲ್ಲಿ ಜಮಾವಣೆಗೊಂಡರೆ ಮಾಲೀಕರಿಗೆ ದಂಡ ವಿಧಿಸುವ ಕ್ರಮ ವಹಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
