ಹುಳಿಯಾರು :
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆ ದಿನದಿಂದ ದಿನಕ್ಕೆ ಗರಿಗೆದರುತ್ತಿದೆ. ಚುನಾವಣೆಯೇ ಬೇಡ ಎನ್ನುತ್ತಿದ್ದವರೂ ಸಹ ಈಗ ಪಕ್ಷದ ಟಿಕೆಟ್‍ಗಾಗಿ ಒತ್ತಡ ಆರಂಭಿಸಿದ್ದಾರೆ. ಪರಿಣಾಮ 3 ಪಕ್ಷಗಳಲ್ಲೂ ಸ್ಪರ್ಧಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಟಿಕೆಟ್ ಕೊಡುವವರ್ಯಾರು ಎನ್ನುವ ಪಶ್ನೆ ಪಟ್ಟಣದಲ್ಲಿ ಬಹು ಚರ್ಚಿತ ವಿಷಯವಾಗಿದೆ.
ಹೌದು, ಬಿಜೆಪಿಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಜೈವಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ನಡುವೆ ಕ್ಷೇತ್ರದ ಪಾರುಪತ್ಯ ಹಿಡಿಯುವಲ್ಲಿ ಪ್ರತಿಷ್ಟೆ ನಿರ್ಮಾಣವಾಗಿದೆ. ಕಾಂಗ್ರೆಸ್‍ನಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಾಸಲು ಸತೀಶ್ ನಡುವೆ ಬಣ ರಾಜಕೀಯ ಶುರುವಾಗಿದೆ. ಎರಡೂ ಪಕ್ಷಗಳಲ್ಲೂ ಪತ್ರ್ಯೇಕ ಸಭೆಗಳನ್ನು ನಡೆಸಿ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಹಾಗಾಗಿ ಚುನಾವಣೆಗೆ ಸ್ಪರ್ಧಿಸಲು ಅಗತ್ಯವಾದ ಬಿ ಫಾರಂ ಕೊಡುವವರ್ಯಾರು ಎನ್ನುವ ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ.
ಸಚಿವ ಮಾಧುಸ್ವಾಮಿ ಅವರು ತಮ್ಮಿಂದ ಕಿತ್ತುಕೊಂಡಿದ್ದ ಖಾತೆಯನ್ನೇ ಮರಳಿ ಪಡೆದ ಛಲದಂಕ ಮಲ್ಲ. ಪಟ್ಟಣ ಪಂಚಾಯ್ತಿ ಚುನಾವಣೆಗೆ ಏನೇ ಎಡರುತೊಡರುಗಳು ಬಂದರೂ ಸಹ ಬಿಜೆಪಿ ಬಿ ಫಾರಂ ಅನ್ನು ಅವರೆ ಕೊಡಿಸುವ ವಿಶ್ವಾಸವನ್ನು ಅವರ ಬೆಂಬಲಿಗರು ವ್ಯಕ್ತಪಡಿಸಿದರೆ ಕೆ.ಎಸ್.ಕಿರಣ್‍ಕುಮಾರ್ ಅವರು ಪಕ್ಷನಿಷ್ಟೆಗೆ ಹೆಸರಾದವರು ಜೊತೆಗೆ ಪಕ್ಷದ ಮುಖಂಡರೊಂದಿಗೆ ನಿಕಟ ಸಂಪರ್ಕದಲ್ಲಿರುವವರು. ಅಲ್ಲದೆ ಹುಳಿಯಾರು ಇವರ ಊರಾಗಿರುವುದರಿಂದ ಇಲ್ಲಿನ ಮತದಾರರ ನಾಡಿಮಿಡಿತ ಬಲ್ಲವರೆಂದು ಹೈ ಕಮಾಂಡ್ ಟಿಕೆಟ್ ಇವರ ಮೂಲಕವೇ ಕೊಡಿಸುತ್ತದೆ ಎನ್ನುವ ವಾದ ಇವರ ಬೆಂಬಲಿಗರದಾಗಿದೆ.
ಇನ್ನು ಕಳೆದ ಮೂರ್ನಲ್ಕು ದಶಕಗಳಿಂದಲೂ ಚಿಕ್ಕನಾಯಕನಹಳ್ಳಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರೂ ಸಹ ಬಣ ರಾಜಕೀಯ ಕೊನೆಕಂಡಿಲ್ಲ. ಟಿ.ಬಿ.ಜಯಚಂದ್ರ ಅವರು ಪಕ್ಷದ ಹಿರಿಯ ರಾಜಕೀಯ ಮುತ್ಸದ್ಧಿಯಾಗಿದ್ದಾರೆ. ಅಲ್ಲದೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಟಿಕೆಟ್ ಇವರನ್ನು ಬಿಟ್ಟರೆ ಇನ್ಯಾರಿಗೂ ತರುವ ಶಕ್ತಿಯಿಲ್ಲ ಎಂದು ಇವರ ಬೆಂಬಲಿಗರು ಹೇಳಿಕೊಂಡರೆ ಸಾಸಲು ಸತೀಶ್ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ್ದಾರೆ. ಗ್ರಾಪಂ, ಸೊಸೈಟಿ ಸೇರಿದಂತೆ ಕಾರ್ಯಕರ್ತರ ಚುನಾವಣೆ ಮಾಡಿದ್ದಾರೆ. ಇವರ ಮೂಲಕ ಟಿಕೆಟ್ ಕೊಟ್ಟರೆ ಮಾತ್ರ ಸಮರ್ಥವಾಗಿ ಚುನಾವಣೆ ನಡೆಯಲು ಸಾಧ್ಯ ಎಂಬ ನಿಟ್ಟಿನಲ್ಲಿ ಇವರ ನಾಯಕತ್ವದಲ್ಲಿ ಟಿಕೆಟ್ ಹಂಚುತ್ತಾರೆ ನೋಡ್ತಿರಿ ಎನ್ನುತ್ತಾರೆ ಬೆಂಬಲಿಗರು.
ಕೊಟ್ಟರೆ 16 ಬಿ.ಫಾರಂ ಕೊಡಿ, ಇಲ್ಲವಾದರೆ ಒಂದು ಬೇಡ :
ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ತಲೆ ಎತ್ತಿರುವ ಬಣ ರಾಜಕೀಯ ಹೈಕಮಾಂಡ್‍ಗೆ ನುಂಗಲಾರದ ತುತ್ತಾಗಿದೆ. ಬಿಜೆಪಿಯಲ್ಲಿ ಇಬ್ಬರಿಗೂ ಎಂಟೆಂಟು ಟಿಕೆಟ್ ಹಂಚಿಕೆ ಒಪ್ಪಂದ ಮಂಡಿಸಲಾಗಿದ್ದರೂ ಮಾಧುಸ್ವಾಮಿ ಮಾತ್ರ ಕೊಟ್ಟರೆ 16 ಕೊಡಿ ಇಲ್ಲದಿದ್ದರೆ ನಿಮ್ಮ ಒಂದೂ ಟಿಕೆಟ್ ಬೇಡವೇಬೇಡ ಎಂದು ಕಡ್ಡಿತುಂಡಾದಂತೆ ಹೇಳಿದ್ದಾರಂತೆ. ಕಾಂಗ್ರೆಸ್‍ನಲ್ಲಿ ಹಿರಿಯರು ಬಯಸುವ ಮೂರ್ನಲ್ಕು ಟಿಕೆಟ್ ಕೊಟ್ಟು ಉಳಿದವುಗಳನ್ನು ನೀವೇ ಹಂಚಿ ಒಗ್ಗಟ್ಟಾಗಿ ಚುನಾವಣೆ ಮಾಡಿ ಎನ್ನುವ ಆಫರ್ ಕೊಟ್ಟಿದ್ದರೂ ಸಹ ಬಂಡವಾಳ ಹಾಕಿ ಚುನಾವಣೆ ಮಾಡಲು ಹಿರಿಯರು ಸಿದ್ಧರಿದ್ದರೆ ಅವರಿಗೆ ಎಲ್ಲಾ ಟಿಕೆಟ್ ಕೊಡಿ ಎಂದು ಸತೀಶ್ ಕೇಳಿದ್ದಾರಂತೆ. ಒಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವವರಾರು ಎನ್ನುವುದಕ್ಕಿಂದ ಬಣ ರಾಜಕೀಯದಲ್ಲಿ ಗೆಲ್ಲುವವರಾರು ಎನ್ನುವ ಕುತೂಹಲ ಕ್ಷೇತ್ರದ ಜನರದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
