ಜೀವರಕ್ಷಕ ‘ರೆಮ್‍ಡಿಸಿವಿರ್’ ಕೊರತೆ : ಹಾಹಾಕಾರ ತಪ್ಪಿಸದಿದ್ದರೆ ಅಪಾಯ!!

 ತುಮಕೂರು:

      ಕೋವಿಡ್-19 ಎರಡನೇ ಅಲೆ ಅತ್ಯಂತ ಭಯಂಕರವಾಗುತ್ತಿರುವ ಬೆನ್ನಲ್ಲೇ ಜೀವ ಉಳಿಸಲು ಅಗತ್ಯವಾಗಿ ಬೇಕಿರುವ ಜೀವ ರಕ್ಷಕಗಳ ಕೊರತೆ ಮತ್ತೊಂದು ಆತಂಕವನ್ನು ತಂದಿಟ್ಟಿದೆ. ರಾಜ್ಯದಲ್ಲಷ್ಟೇ ಅಲ್ಲ, ಜಿಲ್ಲೆಯಲ್ಲಿಯೂ ರೆಮ್‍ಡಿಸಿವಿರ್ ಚುಚ್ಚುಮದ್ದು ಕೊರತೆ ದಿನೆ ದಿನೆ ಉಲ್ಬಣಿಸುತ್ತಿದ್ದು, ಈ ಕೊರತೆ ನೀಗದೆ ಹೋದರೆ ಮುಂದಿನ ಕೆಲವೆ ದಿನಗಳಲ್ಲಿ ಮತ್ತಷ್ಟು ಭೀಕರತೆಯನ್ನು ನೋಡಬೇಕಾಗಿದೆ. ವೈದ್ಯಕೀಯ ಕ್ಷೇತ್ರವೂ ತಲ್ಲಣಗೊಂಡಿದೆ.

      ಕೋವಿಡ್ ರೋಗಿಗಳಾಗಿ ಆಸ್ಪತ್ರೆಗೆ ದಾಖಲಾಗುವವರಿಗೆ ಆಮ್ಲಜನಕ ಹಾಗೂ ರೆಮ್‍ಡಿಸಿವಿರ್ ಔಷಧದ ಅಗತ್ಯತೆ ಇದೆ. ಕೋವಿಡ್‍ನಿಂದ ಬಳಲುತ್ತಿರುವ ಗಂಭೀರ ರೋಗಿಗಳಿಗೆ ಈ ಚಿಕಿತ್ಸೆ ದೊರಕದೆ ಹೋದರೆ ಅವರನ್ನು ಬದುಕಿಸಿಕೊಳ್ಳುವುದು ಕಷ್ಟವಾಗಲಿದೆ. ಆಮ್ಲಜನಕ ಹಾಗೂ ರೆಮ್‍ಡಿಸಿವಿರ್ ಪೂರೈಕೆ ತುರ್ತು ಅಗತ್ಯವಿದ್ದು, ಸರ್ಕಾರಗಳು ಇದನ್ನು ಸಕಾಲಕ್ಕೆ ಪೂರೈಸದೆ ಹೋದರೆ ಮುಂದಿನ ದಿನಗಳ ಮತ್ತಷ್ಟು ಭಯಾನಕವಾಗಲಿವೆ.

ಜಿಲ್ಲೆಯಲ್ಲಿಯೂ ಕೊರತೆ:

      ಸರ್ಕಾರದಿಂದ ಈಗ ಒದಗಿಸಲಾಗುತ್ತಿರುವ ರೆಮ್‍ಡಿಸಿವಿರ್ ಕೊರತೆ ಎಷ್ಟಿದೆ ಎಂದರೆ ನೂರು ಜನ ಕೋವಿಡ್ ರೋಗಿಗಳಿಗೆ ಕೇವಲ 20 ಜನರಿಗಷ್ಟೆ ಸಾಕಾಗುಷ್ಟು ಚುಚ್ಚುಮದ್ದು ಇದೆ ಎನ್ನುತ್ತವೆ ಮೂಲಗಳು. ಕೊರತೆ ಇಷ್ಟು ತೀಕ್ಷ್ಣವಾಗಿದ್ದರೂ ಆ ಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಕೊರತೆ ತೀವ್ರವಾಗಿರುವುದನ್ನು ಬಹಿರಂಗಪಡಿಸುತ್ತಿಲ್ಲ. ಕಳೆದ ಒಂದು ವಾರದಿಂದ ತುಮಕೂರು ಜಿಲ್ಲೆಯಲ್ಲಿ ನಿತ್ಯ ಒಂದು ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ನೂರು ರೋಗಿಗಳಲ್ಲಿ 20 ಮಂದಿಗೆ ರೆಮ್‍ಡಿಸಿವಿರ್ ಅಗತ್ಯ ಎಂದು ಲೆಕ್ಕ ಹಾಕಿದರೆ ಒಂದು ಸಾವಿರ ಮಂದಿಗೆ 200 ರೆಮ್‍ಡಿಸಿವಿರ್ ಬೇಕಾಗುತ್ತದೆ. 10 ದಿನಕ್ಕೆ 10,000 ರೋಗಿಗಳೆಂದು ಪರಿಗಣಿಸಿದರೆ ಕನಿಷ್ಠ 2000 ಬೆಡ್‍ಗಳಾದರೂ ಬೇಕು. ಅಂತಹವರಿಗೆ ರೆಮ್‍ಡಿಸಿವಿರ್ ಚುಚ್ಚುಮದ್ದು ಬೇಕು. ಹಾಸಿಗೆಗಳ ಕೊರತೆಗಿಂತ ಹೆಚ್ಚಾಗಿ ಕಾಡಲಿದೆ ರೆಮ್‍ಡಿಸಿವಿರ್ ಚುಚ್ಚುಮದ್ದಿನ ಕೊರತೆ.

     ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ, ಮತ್ತೊಂದು ಕಡೆ ರೆಮ್‍ಡಿಸಿವಿರ್ ಪೂರೈಕೆ ಕಡಿಮೆಯಾಗುತ್ತಿರುವುದು. ಮಗದೊಂದು ಕಡೆ ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಅಗತ್ಯ ಮಾತ್ರೆಗಳು, ಔಷಧಗಳು ಸಮರ್ಪಕವಾಗಿ ಸಿಗದೆ ಇರುವುದು. ಇವೆಲ್ಲವೂ ಒಂದಕ್ಕೊಂದು ಪೂರಕ ಕೊರತೆಗಳಾಗಿ ಪರಿಣಮಿಸಿ ಒಟ್ಟಾರೆ ಆರೋಗ್ಯ ವ್ಯವಸ್ಥೆಯಲ್ಲಿ ಗಂಡಾಂತರ ಎದುರಾಗುವುದಂತೂ ನಿಶ್ಚಿತ.

ಲಸಿಕೆಯೂ ಅನುಮಾನವಂತೆ:

     ಕೋವಿಡ್‍ಗೆ ಇನ್ನೂ ಚಿಕಿತ್ಸೆ ಕಂಡು ಹಿಡಿದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಲಸಿಕೆಯೇ ಒಂದು ಭರವಸೆಯಾಗಿದೆ. ರೋಗ ನಿರೋಧಕ ಶಕ್ತಿಯಾಗಿ ಕೋವಿಡ್ ಲಸಿಕೆ ಹೆಸರಾಗಿದೆ. ಇದೂ ಸಹ ಇನ್ನು ಮುಂದೆ ಎಲ್ಲರಿಗೂ ಸಿಗುವುದು ಅನುಮಾನ ಎಂಬುದನ್ನು ಸರ್ಕಾರದ ಪ್ರತಿನಿಧಿಗಳೇ ಹೊರ ಹಾಕಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರ ಹೇಳಿಕೆಯನ್ನೇ ಗಮನಿಸಿದರೆ ಮೇ 1 ರಿಂದ ಲಸಿಕೆ ಸಿಗುವುದೇ ಅನುಮಾನ ಎಂಬಂತಾಗಿದೆ. 

     ಒಂದು ಕಡೆ ಕೋವಿಡ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಿ ಎಂದು ಪ್ರಚಾರ ಮಾಡಲಾಗುತ್ತಿದೆ. ಮತ್ತೊಂದು ಕಡೆ ಕೋವಿಡ್ ರೋಗಿಗಳಿಗೆ ಬೇಕಾಗಿರುವ ಅಗತ್ಯ ಜೀವರಕ್ಷಕಗಳ ಕೊರತೆ ಎದ್ದು ಕಾಣುತ್ತಿದೆ. ಈ ನಡುವೆ ರೋಗಿಗಳ ಸಂಖ್ಯೆ ಉಲ್ಬಣಗೊಳ್ಳುತ್ತಲೇ ಇದೆ. ಆಮ್ಲಜನಕ, ರೆಮ್‍ಡಿಸಿವಿರ್ ಹಾಗೂ ಕೋವಿಡ್ ರೋಗಿಗಳಿಗೆ ನೀಡುವ ರೋಗನಿರೋಧಕ ಮಾತ್ರೆಗಳು, ರಕ್ತ ಶುದ್ಧೀಕರಣ, ಕರುಳಿಗೆ ವೈರಸ್ ಹರಡುವುದನ್ನು ಕಡಿಮೆ ಮಾಡುವ ನಿಯಂತ್ರಕ ಮಾತ್ರೆಗಳು, ಸೇರಿದಂತೆ ಇನ್ನಿತರ ಔಷಧಗಳು ಸಮರ್ಪಕವಾಗಿ ಪೂರೈಕೆಯಾಗುತ್ತಾ ಹೋದರೆ ಸಾವಿನ ಅಂಚಿಗೆ ಹೋದವರನ್ನು ಉಳಿಸಿಕೊಳ್ಳಲು ಸಾಧ್ಯ. ಆದರೆ ಜೀವನಾವಶ್ಯಕ ಔಷಧಗಳಿಗೆ ಕೊರತೆ ಉಂಟಾದರೆ ಗಂಭೀರ ಸ್ಥಿತಿಯಲ್ಲಿರುವವರನ್ನು ಉಳಿಸಿಕೊಳ್ಳುವುದು ಹೇಗೆ? ಈಗಾಗಲೇ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಅಲ್ಲಿಂದಿಲ್ಲಿಗೆ ಪರದಾಡುತ್ತಿರುವ ಪ್ರಕರಣಗಳು, ಸಾವಿನ ಪ್ರಕರಣಗಳು ನಡುಕ ಉಂಟು ಮಾಡಿವೆ. ಮುಂದಿನ ದಿನಗಳಲ್ಲಿ ರಸ್ತೆ ರಸ್ತೆಗಳಲ್ಲಿಯೇ ರೋಗಿಗಳು ಸಾವಿಗೀಡಾಗುವ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ. ಅಂತಹ ಸಂದರ್ಭ ಎದುರಾದರೆ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಕೈಚೆಲ್ಲಿ ಕೂರಲೂಬಹುದು. ಯಾವುದೇ ವ್ಯವಸ್ಥೆಗಳು ಇಲ್ಲದೆ ಹೋದಾಗ ಜನರಿಂದ ಅವರು ತಾನೆ ಎಷ್ಟು ಬೈಗುಳ ತಿಂದಾರು.

 ಆರೋಗ್ಯ ವ್ಯವಸ್ಥೆಯೇ ಏರುಪೇರು: 

Ahmedabad-based Zydus Hospitals introduces rules for buying Remdesivir

      ಕೋವಿಡ್ ರೋಗ ಬಂದವರೆಲ್ಲರಿಗೂ ಹಾಸಿಗೆಗಳ ಅಗತ್ಯವಿಲ್ಲ. ಎಲ್ಲರಿಗೂ ಆಮ್ಲಜನಕ, ರೆಮ್‍ಡಿಸಿವಿರ್ ಬೇಕಾಗಿಲ್ಲ. ವಯೋವೃದ್ಧರಿಗೆ, ಇತರೆ ರೋಗಗಳು ಇರುವವರಿಗೆ, ಕಾಯಿಲೆ ಉಲ್ಬಣಿಸಿ ಗಂಭೀರ ಸ್ಥಿತಿಯಲ್ಲಿರುವವರಿಗೆ ಮಾತ್ರವೆ ಇಂತಹ ಚಿಕಿತ್ಸಾ ವ್ಯವಸ್ಥೆ ಮಾಡಲಾಗುತ್ತಿದೆ. ಈಗಿನ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಈ ವ್ಯವಸ್ಥೆ ಮಾಡುತ್ತಿರುವುದು ನೂರು ಜನರಲ್ಲಿ 25 ಮಂದಿಗೆ ಮಾತ್ರ. ಆದರೆ ಅಷ್ಟು ಜನರಿಗೂ ಬೇಡಿಕೆ ಪೂರೈಸದಿರುವಷ್ಟು ಕಠಿಣ ಸ್ಥಿತಿಗೆ ನಮ್ಮ ಆರೋಗ್ಯ ವ್ಯವಸ್ಥೆ ಬಂದು ನಿಂತಿದೆ. ಪ್ರಸ್ತುತ ರೆಮ್‍ಡಿಸಿವಿರ್ 100 ಬೇಡಿಕೆ ಇದ್ದರೆ 25 ಮಾತ್ರವೆ ಪೂರೈಕೆಯಾಗುತ್ತಿದೆ ಎಂಬ ಅಂದಾಜಿದೆ.

      ಕೊರೊನಾ ರೋಗಲಕ್ಷಣವುಳ್ಳ ವ್ಯಕ್ತಿಗಳಿಗೆ 5 ದಿನಗಳ ನಂತರ ಗಂಭೀರತೆ ಎದುರಾದರೆ ಸೋಂಕಿನ ಪ್ರಮಾಣ ಅಧಿಕವಾಗುತ್ತದೆ. ಕರುಳಿಗೆ ವೈರಸ್ ವ್ಯಾಪಿಸಿದರೆ ಚೇತರಿಕೆ ಕಾಣುವಂತೆ ಮಾಡುವುದು ಬಹಳ ಕಷ್ಟಕರ. ಇಂತಹವರಿಗೆ ಮಾತ್ರವೆ ಜೀವರಕ್ಷಕ ಔಷಧಗಳನ್ನು ಆದ್ಯತೆಯಾಗಿ ಬಳಸಲಾಗುತ್ತಿದೆ. ಇಲ್ಲಿ ಜನರ ತಿಳವಳಿಕೆಯ ವಿಷಯದಲ್ಲೂ ಸಾಕಷ್ಟು ಗೊಂದಲ ಇದೆ. ಕೋವಿಡ್ ಪಾಸಿಟಿವ್ ಬಂದಿದೆ ಎಂದಾಕ್ಷಣ ಆಸ್ಪತ್ರೆಗೆ ಹೋದರೆ ಅಲ್ಲಿ ಚಿಕಿತ್ಸೆ ನೀಡಬೇಕು, ಆಮ್ಲಜನಕ ವ್ಯವಸ್ಥೆಯಾಗಬೇಕು ಇತ್ಯಾದಿ ಬಯಸುವವರ ಸಂಖ್ಯೆಯೇ ಹೆಚ್ಚು. ಆದರೆ ಯಾರಿಗೆ ಅದರ ಅವಶ್ಯಕತೆ ಇದೆ ಎಂಬುದನ್ನು ಹೇಳಬೇಕಾದವರು ಸರಿಯಾಗಿ ಹೇಳುತ್ತಿಲ್ಲ. ಜನರೂ ಸಹ ಅರ್ಥಮಾಡಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಬೇಡಿಕೆಯ ತೀವ್ರತೆ ದಿನೆ ದಿನೆ ಅಧಿಕವಾಗುತ್ತಿದೆ.

ಸರ್ಕಾರದ ಗೊಂದಲಕಾರಿ ಆದೇಶಗಳು:

      ರೆಮ್‍ಡಿಸಿವಿರ್, ಲಸಿಕೆ ಸೇರಿದಂತೆ ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸೆಯನ್ನು ಯಾವಾಗ ಹೇಗೆ ಕೊಡಬೇಕು ಎಂಬುದರಲ್ಲಿಯೂ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಯುವ ಜನರಿಗೆ ರೆಮ್‍ಡಿಸಿವಿರ್ ಬೇಡ ಎಂದು ಹಿಂದೆ ಹೇಳಲಾಗಿತ್ತು. ಕೋಮಾರ್ಬಿಡಿಟಿ ಇದ್ದವರಿಗೆ, ರೆಮ್‍ಡಿಸಿವಿರ್ ಚುಚ್ಚುಮದ್ದು ನೀಡಬೇಕು ಎಂದು ಹಿಂದೆ ಮೊದಲ ಹಂತದಲ್ಲಿ ಹೇಳಲಾಗಿತ್ತು. ಎರಡನೆ ಅಲೆಯಲ್ಲಿ ಯುವಕರಿಗೂ ಕೊರೊನಾ ವ್ಯಾಪಿಸುತ್ತಿದೆ. ಅಷ್ಟೇ ಅಲ್ಲ, ಸಾವಿನ ಪ್ರಮಾಣವೂ ಯುವಕರಲ್ಲಿ ಕಂಡುಬರುತ್ತಿದೆ. ಯುವಕರಿಗೆ ರೆಮ್‍ಡಿಸಿವಿರ್ ಬೇಡ ಎಂದು ಹೇಳಿದ ಪರಿಣಾಮವನ್ನು ಈಗ ಕಾಣುತ್ತಿದ್ದೇವೆ. ಬದಲಾಗಿ ಅಗತ್ಯ ಇರುವ ಎಲ್ಲರಿಗೂ ಈ ಚುಚ್ಚುಮದ್ದು ನೀಡುವ ವ್ಯವಸ್ಥೆ ಮಾಡಬೇಕಿತ್ತು. ಸ್ಟಾಕ್ ಎಲ್ಲಿದೆ ಎಂಬ ಪ್ರಶ್ನೆ ಏಳಬಹುದು.

      ಕೋವಿಡ್ ನಿರ್ವಹಣೆಯಲ್ಲಿ ಒಂದು ವರ್ಷದ ಅನುಭವ ಇದೆ. ಲಸಿಕೆ ಕಂಡು ಹಿಡಿಯಲಾಗಿದೆ. ನಮ್ಮಲ್ಲಿ ಮೊದಲನೆ ಹಂತ ಇದ್ದಾಗ ಅಮೆರಿಕ ಮೊದಲಾದ ರಾಷ್ಟ್ರಗಳಲ್ಲಿ ಎರಡನೇ ಅಲೆ ಇತ್ತು. ಆಗಲೇ ಎಚ್ಚೆತ್ತಕೊಂಡು ಎರಡನೆ ಅಲೆಯನ್ನು ಹಿಮ್ಮೆಟ್ಟಿಸಬಹುದಿತ್ತು. ಅದರೆ ಸರ್ಕಾರದ ವಿಳಂಬ ನೀರಿ, ನಿರ್ಲಕ್ಷ್ಯದ ಪರಮಾವಧಿಯ ಪರಿಣಾಮವನ್ನು ಇಡೀ ರಾಷ್ಟ್ರ ಅನುಭವಿಸಬೇಕಾಗಿ ಬಂದಿದೆ. ರಾಷ್ಟ್ರದ ವಿವಿಧ ಭಾಗಗಳಲ್ಲಿ ಈ ಒಂದು ವರ್ಷದಿಂದ ನಡೆಯುತ್ತಾ ಬಂದ ಚುನಾವಣೆಗಳಿಗೆ ಸರ್ಕಾರ ನೀಡಿದಷ್ಟು ಆದ್ಯತೆಯನ್ನು ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ನೀಡಲಿಲ್ಲ ಎನ್ನುವುದು ವಾಸ್ತವ.

      ಸರ್ಕಾರವೇ ನೇಮಿಸಿದ್ದ ತಜ್ಞರ ಸಮಿತಿ ಕಳೆದ ನವೆಂಬರ್ ತಿಂಗಳಿನಲ್ಲಿ ಸಲಹೆ ನೀಡಿತ್ತು. ಹೀಗಾದರೂ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿಲ್ಲ. ಸರ್ಕಾರದ ದಿನಕ್ಕೊಂದು ನೀತಿ, ಆದೇಶ, ಒಂದೇ ದಿನದಲ್ಲಿ ಆದೇಶದ ಮರು ಮಾರ್ಪಾಡು ಇವೆಲ್ಲವೂ ನಗೆಪಾಟಲಿಗೆ ಈಡಾಗಿವೆ.

ರೆಮ್‍ಡಿಸಿವಿರ್ ಅಕ್ರಮ ಮಾರಾಟ:

Remdesivir at Forefront of Battle Against COVID-19 - Brigham Health On a  Mission

      ಕೊರೊನಾ ಸೋಂಕಿತರಿಗೆ ನೀಡುವ ರೆಮ್‍ಡಿಸಿವಿರ್ ಚುಚ್ಚುಮದ್ದು ಅಕ್ರಮವಾಗಿ ಮಾರಾಟವಾಗುತ್ತಿರುವ ಪ್ರಕರಣಗಳು ರಾಜ್ಯವ್ಯಾಪಿ ವರದಿಯಾಗುತ್ತಲೇ ಇವೆ. ಈ ಒಂದು ವಾರದಲ್ಲಿ 40 ಆರೋಪಿಗಳನ್ನು ಬಂಧಿಸಿರುವುದಾಗಿ ಬೆಂಗಳೂರಿನಲ್ಲಿ ಸಿಸಿಬಿ ಜಂಟಿ ಕಮೀಷನರ್ ಸಂದೀಪ್ ಪಾಟೀಲ್ ಹೇಳಿದ್ದಾರೆ. ರಾಜ್ಯಾದ್ಯಂತ ಜೀವರಕ್ಷಕ ಚುಚ್ಚುಮದ್ದಿಗೆ ಕೊರತೆ ಇದ್ದರೂ, ರೋಗಿಗಳು ಹಾಹಾಕಾರ ಪಡುತ್ತಿದ್ದರೂ ಹೇಗೆ ಕಳ್ಳಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ..? ಚುಚ್ಚುಮದ್ದಿಗೆ ಬೇಡಿಕೆ ಇರುವುದನ್ನೇ ಕೆಲವರು ಬಂಡವಾಳ ಮಾಡಿಕೊಂಡಂತಿದೆ. ಈ ಹಿಂದೆ ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮದ ವಾಸನೆ ಬಡಿದಿತ್ತು. ಈ ವಾಸನೆ ಹಾಗೆಯೇ ಮುಂದುವರೆದಂತೆ ಕಾಣುತ್ತಿದೆ. ಜೀವರಕ್ಷಕ ರೆಮ್‍ಡಿಸಿವಿರ್ ಪ್ರತಿ ಡೋಸ್ 10 ಸಾವಿರ ರೂ.ಗಳಿಂದ 15 ಸಾವಿರ ರೂ.ಗಳವರೆಗೂ ಮಾರಾಟವಾಗುತ್ತಿರುವುದಾಗಿ ಅಧಿಕೃತ ಮಾಹಿತಿಗಳಿಂದಲೇ ಲಭ್ಯವಾಗಿದೆ.

      ಒಂದು ಕಡೆ ಹೀಗೆ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಈ ಔಷಧಿ ಖರೀದಿಸಲಾಗದೆ ಬಡವರು ಪರಿತಪಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬನನ್ನು ಉಳಿಸಿಕೊಳ್ಳಲು ಆತನ ಪೋಷಕರು ಇಡೀ ನಗರವನ್ನು ಸುತ್ತಾಡಿದ್ದಾರೆ. ಖಾಸಗಿಯಾಗಿ ಔಷಧಿ ತರಲು ಹೇಳಿದ್ದರಿಂದ ಔಷಧಿ ಮಳಿಗೆಗಳನ್ನು ಸುತ್ತಿಬಂದ ಪೋಷಕ ಅಸಹಾಯಕನಾಗಿ ಉಳಿದದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

      ಇನ್ನೂ ಒಂದು ವಿಚಿತ್ರವೆಂದರೆ, ಕಲಬುರ್ಗಿ ಸಂಸದ ಡಾ.ಉಮೇಶ್ ಜಾದವ್ ಬೆಂಗಳೂರಿನ ಔಷಧ ನಿಯಂತ್ರಕರ ಕಚೇರಿಯ ವಾರ್ಡ್‍ರೂಂಗೆ ತೆರಳಿ 350 ವೈಲ್ ರೆಮ್‍ಡಿಸಿವಿರ್ ತಂದಿರುವುದು. ಜಿಲ್ಲೆಯಲ್ಲಿ ಅಭಾವ ಇರುವುದನ್ನು ಗಮನಿಸಿದ ಸಂಸದರು ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿ ಅಧಿಕಾರಿಗಳ ಮನವೊಲಿಸಿ ಸ್ವತಃ ತಾವೇ ಕಾರಿನಲ್ಲಿ ಸಾಗಿಸಿ ತಂದುಕೊಟ್ಟಿದ್ದಾರೆ. ಇದೂ ಸಹ ಚರ್ಚೆಗೆ ಗ್ರಾಸವಾಗಿದೆ.

 ಎಲ್ಲಿಯೋ ಕುಳಿತು ತೀರ್ಮಾನ :

      ಎರಡನೇ ಅಲೆಯ ಎಚ್ಚರಿಕೆ ಇದ್ದರೂ ಅದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಚುನಾವಣೆಗೆ ಕೊಟ್ಟ ಅದ್ಯತೆಯನ್ನು ಕೊರೊನಾ ನಿಯಂತ್ರಣಕ್ಕೆ ನೀಡಲಿಲ್ಲ. ದಿನೆ ದಿನೆ ರೋಗ ಉಲ್ಬಣವಾಗುತ್ತಿದ್ದು, ಸಾಯುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಈ ಬಾರಿ ಎರಡನೇ ಅಲೆಯಲ್ಲಿ ಗಟ್ಟಿಮುಟ್ಟಾಗಿದ್ದ ಯುವಕರೆ ಬಲಿಯಾಗುತ್ತಿದ್ದಾರೆ. ಆಘಾತಕಾರಿ ಅಂಶವೆಂದರೆ ರೋಗ ನಿಯಂತ್ರಣಕ್ಕೆ ಬೇಕಾದ ಚುಚ್ಚುಮದ್ದು, ಔಷಧ ಪೂರೈಕೆ ವ್ಯವಸ್ಥೆ, ಹಾಸಿಗೆಗಳ ವ್ಯವಸ್ಥೆ ಕುಸಿಯುತ್ತಿರುವುದು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇಡೀ ಆರೋಗ್ಯ ವ್ಯವಸ್ಥೆಯೇ ಏರುಪೇರಾಗಲಿದೆ. ಸರ್ಕಾರಗಳು ಅದನ್ನು ನಿರ್ವಹಿಸುವ ಆಡಳಿತಗಳು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯರು, ವೈದ್ಯಕೀಯ ತಜ್ಞರು ಆಸ್ಪತ್ರೆಗಳೊಂದಿಗೆ ಸಮಾಲೋಚಿಸಬೇಕು. ಎಲ್ಲೋ ಕುಳಿತು ನೀತಿ ನಿರ್ವಹಣೆ ಮಾಡಿದರೆ ಪರಿಸ್ಥಿತಿ ಹೀಗಾಗಲಿದೆ.
 
      ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಪ್ರತಿದಿನ ಒಂದು ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿದಿನದ 1000 ರೋಗಿಗಳ ಪೈಕಿ ಶೇ.60 ರಿಂದ 70 ಮಂದಿ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವವರು ಕೇವಲ ಶೇ.25 ರಿಂದ 30 ರಷ್ಟು ಮಾತ್ರ. ಇಷ್ಟು ಮಂದಿಗೆ ವ್ಯವಸ್ಥೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾದರೆ ಪರಿಸ್ಥಿತಿ ಗಂಭೀರತೆಯನ್ನು ಊಹಿಸಲೂ ಸಾಧ್ಯವಾಗದು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ, ಬೆಡ್ ಸಿಗದೆ ಪರದಾಡುವವರ ಸಂಖ್ಯೆ ದ್ವಿಗುಣಗೊಳ್ಳಲಿದೆ. ರೆಮ್‍ಡಿಸಿವಿರ್ ಪೂರೈಕೆಯ ಕೊರತೆ ಹೀಗೆಯೇ ಮುಂದುವರೆದರೆ ಈಗ ನೀಡುತ್ತಿರುವ ಸಾವಿನ ಸಂಖ್ಯಾ ವರದಿ ದುಪ್ಪಟ್ಟಾಗಲಿದೆ.
 
      ಕೊರೊನಾ ಸೋಂಕಿನಿಂದ ಗಂಭೀರ ಪರಿಸ್ಥಿತಿ ತಲುಪಿದವರಿಗೆ ರೆಮ್‍ಡಿಸಿವಿರ್ ಔಷಧಿ ನೀಡಲಾಗುತ್ತಿದೆ. ರೋಗ ಉಲ್ಬಣವಾಗಿ ಗಂಭೀರ ಮಟ್ಟ ತಲುಪಿದಾಗ ಜೀವರಕ್ಷಕವಾಗಿ ರೆಮ್‍ಡಿಸಿವಿರ್ ರಾಮಬಾಣವಾಗಿದೆ ಎಂಬುದೇ ವೈದ್ಯಕೀಯ ಕ್ಷೇತ್ರದ ತಜ್ಞರ ಅಭಿಪ್ರಾಯ. ಈಗ ಎಲ್ಲ ಕಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಉದಾಹರಣೆಗಳು ಅಲ್ಲಲ್ಲಿ ಕಂಡುಬರುತ್ತಿವೆ. ಈ ದಂಧೆಯಲ್ಲಿ ಪಾಲ್ಗೊಂಡವರನ್ನು ಹಿಡಿದು ಶಿಕ್ಷಿಸುವುದರ ಜೊತೆಗೆ ಅಕ್ರಮ ದಂಧೆಗೆ ಕಡಿವಾಣ ಹಾಕುವುದು, ಜಿಲ್ಲಾವಾರು ಅಗತ್ಯಕ್ಕೆ ತಕ್ಕಂತೆ ರೆಮ್‍ಡಿಸಿವಿರ್ ಪೂರೈಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಮಧ್ಯಮ ವರ್ಗ, ಬಡವರು ಔಷಧಿ ಭರಿಸಲಾಗದೆ ತಮ್ಮವರನ್ನು ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ.

-ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link