ತುಮಕೂರು:
ಕೊರೊನಾ ಕಫ್ರ್ಯೂ ಜಾರಿಗೊಳಿಸಿದ ಮಾರ್ಗಸೂಚಿಯಲ್ಲಿ ಕೆಲವೊಂದು ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗಿದೆ. ಅದರಲ್ಲಿ ಕಟ್ಟಡ ಕಾಮಗಾರಿಯೂ ಸೇರಿದೆ.
ಅಗತ್ಯ ಸೇವೆಗಳು ಹಾಗು ಕಟ್ಟಡ ನಿರ್ಮಾಣ ಕಾಮಗಾರಿಗೆ ಯಾವುದೇ ಬಾಧಕ ಇಲ್ಲ ಎಂದು ಸರ್ಕಾರ ಹೇಳಿದರೂ ವಾಸ್ತವವಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಕೊರೊನಾ ಕಫ್ರ್ಯೂ ಸಾಕಷ್ಟು ಪರಿಣಾವನ್ನಂತೂ ಬೀರಿದೆ.
ಲಾಕ್‍ಡೌನ್ ಹೇರಲಾಗುತ್ತದೆ ಎಂಬ ಸುಳಿವು ಸಿಕ್ಕಿದೊಡನೆಯೇ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ನಿರತರಾಗಿದ್ದ ಬಹುತೇಕ ಕಾರ್ಮಿಕರು ಇಲ್ಲಿಂದ ಕಾಲ್ಕಿತ್ತರು. ಹಬ್ಬದ ಸಮಯದಲ್ಲಿ ಒಂದಷ್ಟು ಜನ ಊರು ಸೇರಿಕೊಂಡರೆ ಆನಂತರ ಕಫ್ರ್ಯೂ ಜಾರಿಗೊಳಿಸುವ ಸೂಚನೆ ಅರಿತು ಖಾಲಿ ಮಾಡಿದರು. ತುಮಕೂರು ನಗರದಲ್ಲಿ ಸ್ಥಳೀಯರಿಗಿಂತ ಹೊರಗಿನ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರೆ ಅಧಿಕ ಸಂಖ್ಯೆಯಲ್ಲಿದ್ದಾರೆ. ಬಿಹಾರ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ, ರಾಯಚೂರು ಕಡೆಯ ಮಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಸರಿಸುಮಾರು ಶೇ.75 ರಷ್ಟು ಕಾರ್ಮಿಕರು ತಮ್ಮ ಊರು ಸೇರಿಕೊಂಡಿದ್ದು, ಅನಿವಾರ್ಯವಾಗಿ ಕೆಲವರಷ್ಟೇ ಇಲ್ಲಿ ಉಳಿದಿದ್ದಾರೆ.
ಹೀಗಾಗಿ ಇರುವ ಕನಿಷ್ಠ ಸಂಖ್ಯೆಯ ಕಾರ್ಮಿಕರನ್ನೇ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸ್ಥಳೀಯ ಕೂಲಿ ಕಾರ್ಮಿಕರನ್ನು ಒಳಗೊಂಡು ಕಟ್ಟಡ ನಿರ್ಮಾಣ ಕಾಮಗಾರಿ ಸಾಗಿದೆ. ಆದರೆ ಇದಕ್ಕೂ ಗ್ರಹಣ ಹಿಡಿದಿದೆ. ಕಾರಣಗಳು ಹಲವು.
ಸರ್ಕಾರವೇನೋ ಕಟ್ಟಡ ಕಾಮಗಾರಿಗೆ ಅನುಮತಿ ನೀಡಿದೆ. ಆದರೆ ಇದಕ್ಕೆ ಬೇಕಾಗುವ ಸರಕು ಸಾಮಗ್ರಿಗಳ ಸಾಗಾಣಿಕೆ, ಬೇಕಾಗುವ ಪರಿಕರಗಳ ಅಲಭ್ಯತೆ ಇವೆಲ್ಲವೂ ಅಕ್ಷರಶಃ ತೊಡಕಾಗಿದ್ದು, ಮನೆಗಳ ನಿರ್ಮಾಣ ಕಾರ್ಯದಲ್ಲಿ ನಿರತರಾಗಿರುವವರು ಅತಂತ್ರ ಸ್ಥಿತಿಗೆ ಸಿಲುಕಿಬಿಟ್ಟಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ತ್ವರಿತವಾಗಿ ಮನೆ ನಿರ್ಮಾಣ ಮಾಡಿ ಮುಗಿಸಬಹುದು ಎಂಬ ಧಾವಂತದಲ್ಲಿರುವವರಿಗೆ ಹಲವು ತೊಡರುಗಳು ಎದುರಾಗುತ್ತಿವೆ.
ಮನೆ ಅಥವಾ ಕಟ್ಟಡಗಳ ನಿರ್ಮಾಣಕ್ಕೆ ಮುಖ್ಯವಾಗಿ ಬೇಕಿರುವುದು ಇಟ್ಟಿಗೆ. ತುಮಕೂರು ಹೊರವಲಯದಿಂದ ಇಟ್ಟಿಗೆಗಳು ನಗರಕ್ಕೆ ಸಾಗಾಣಿಕೆಯಾಗಬೇಕು. ಟ್ರ್ಯಾಕ್ಟರ್‍ಗಳಲ್ಲಿ ಇಟ್ಟಿಗೆ ತುಂಬಿಕೊಂಡು ಬರುವಾಗ ಪೊಲೀಸರು ತಡೆಯುತ್ತಿದ್ದಾರೆ. ಮನೆ ಕಟ್ಟಲು ಎಂದು ಹೇಳಿದರೂ ಪೊಲೀಸರು ಅದನ್ನು ಒಪ್ಪುವ ಸ್ಥಿತಿಯಲ್ಲಿ ಇಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ಇಟ್ಟಿಗೆ ಸಾಗಿಸುವ ಟ್ರ್ಯಾಕ್ಟರ್ ಅಥವಾ ಲಾರಿಗಳನ್ನು ತಡೆಯಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕಾಗಿ ಸಾಗಿಸುತ್ತಿರುವ ಬಗ್ಗೆ ಬಿಲ್ ಕೊಡಿ ಎಂದು ಕೇಳುತ್ತಾರೆ. ಆದರೆ ಇದಕ್ಕೆ ಬಿಲ್ ಎಲ್ಲಿಂದ ತರುವುದು ಎನ್ನುತ್ತಾರೆ ಇಟ್ಟಿಗೆ ಸಾಗಿಸುವವರು. ಇನ್ನೇನು ಇಟ್ಟಿಗೆ ಬರಬಹುದು, ಕಾಮಗಾರಿ ಕೆಲಸ ಆರಂಭಿಸಬೇಕು ಎಂದು ನಿರ್ಮಾಣ ಹಂತದ ಸ್ಥಳದಲ್ಲಿ ಕಾದಿರುವ ಇತರೆ ಕಾರ್ಮಿಕರಿಗೆ ಇಟ್ಟಿಗೆಗಳು ಬಾರದೆ ಹೋದಾಗ ಮುಂದಿನ ಕೆಲಸವೇ ಸ್ಥಗಿತ. ಇಂತಹ ಹಲವು ಉದಾಹರಣೆಗಳು ನಗರದಲ್ಲಿ ವರದಿಯಾಗುತ್ತಿವೆ.
ಒಂದು ಮನೆಯ ನಿರ್ಮಾಣ ಎಂದರೆ ಅದಕ್ಕೆ ಪೂರಕವಾಗಿ ಇತರೆ ವಸ್ತುಗಳು ಅವಲಂಬಿತವಾಗಿರುತ್ತವೆ. ಪೈಪ್‍ಗಳು, ಕಬ್ಬಿಣ, ಸ್ಟೀಲ್ ಸಾಮಗ್ರಿಗಳು, ಕಲ್ಲುಗಳು, ಮನೆಗೆ ಅಳವಡಿಸುವ ಇತರೆ ಪರಿಕರಗಳನ್ನು ಹೊರಗಿನಿಂದಲೇ ತರಬೇಕು. ಆದರೆ ಇಂತಹ ಸಾಮಗ್ರಿಗಳು ಸಿಗುವ ಅಂಗಡಿಗಳು ಬಹುತೇಕ ಬಂದ್ ಆಗಿವೆ. ಹುಡುಕಿಕೊಂಡು ಹೋಗಿ ಸಿಗುವ ಕಡೆಗಳಲ್ಲಿ ತರಬೇಕು. ಸಿಕ್ಕಿದರೂ ಕೇಳುವ ಬೆಲೆ ನೀಡಬೇಕು. ನಿಗದಿತ ವೇಳೆಯ ಅವಧಿಯಲ್ಲಿ ಮಾತ್ರವೆ ಇಂತಹ ಸಾಮಗ್ರಿಗಳನ್ನು, ಪರಿಕರಗಳನ್ನು ತರಬೇಕಿದ್ದು, ಅಗತ್ಯಬಿದ್ದ ಸಂದರ್ಭದಲ್ಲಿ ಹುಡುಕಿಕೊಂಡು ಹೋದರೂ ಸಿಗುತ್ತಿಲ್ಲ. ಇದು ಮನೆ ನಿರ್ಮಿಸುತ್ತಿರುವವರಿಗೆ ಎದುರಾಗಿರುವ ಬಹುದೊಡ್ಡ ಸಮಸ್ಯೆ.
ವೆಂಡಿಂಗ್ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಹಾರ್ಡ್‍ವೇರ್ ಅಂಗಡಿಗಳು, ಎಲೆಕ್ಟ್ರಿಕಲ್ ಸಾಮಗ್ರಿಗಳು ಸಿಗುತ್ತಿಲ್ಲ. ಅಗತ್ಯ ಸಾಮಗ್ರಿಗಳೇ ಸಿಗುತ್ತಿಲ್ಲವಾದ್ದರಿಂದ ಎಲೆಕ್ಟ್ರಿಷಿಯನ್, ಪ್ಲಂಬರ್‍ಗಳು ಅತ್ತ ತಲೆ ಹಾಕುತ್ತಿಲ್ಲ. ಕಟ್ಟಡಕ್ಕೆ ಬಳಸಬೇಕಿರುವ ಚುರುಕಿ ಕಾರ್ಯವೂ ಸೇರಿದಂತೆ ಯಾವುದಕ್ಕೂ ಅಗತ್ಯ ವಸ್ತುಗಳು ಸಿಗಲಾರದಂತಹ ಪರಿಸ್ಥಿತಿ ಇದೆ. ಮರಳು ಸಾಗಾಣಿಕೆಯೂ ಸುಲಭವಾಗುತ್ತಿಲ್ಲ. ಕಾರ್ಮಿಕರು ಇಲ್ಲದೆ ಬಂಡೆಗಳನ್ನು ಸಿಡಿಸಲಾಗುತ್ತಿಲ್ಲ. ಅಲ್ಲಿ ಬಂಡೆ ಸೀಳದೆ ಕಲ್ಲುಗಳು ಸರಬರಾಜಾಗುವುದಿಲ್ಲ. ಹೀಗೆ ಪ್ರತಿಯೊಂದು ಪರಿಕರಗಳು ಒಂದಕ್ಕೊಂದು ಪೂರಕವಾಗಿದ್ದು, ಯಾವುದೇ ಒಂದು ವಸ್ತು ಸಿಗದೆ ಹೋದರೂ ಇಡೀ ಕಾಮಗಾರಿ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಕೆಲವೇ ಮಂದಿ ಕಾರ್ಮಿಕರು ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೂ ಸಹ ಅವರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಪೂರೈಸುವುದರಲ್ಲೇ ಮನೆ ಮಾಲೀಕರು ಹೈರಾಣಾಗಿ ಹೋಗುತ್ತಿದ್ದಾರೆ.
ಒಂದು ಲೋಡ್ ಇಟ್ಟಿಗೆಯನ್ನು ಮನೆಗೆಲಸಕ್ಕೆ ತರಿಸಬೇಕಾದರೆ ಮೂರು ದಿನಗಳ ಕಾಲ ಹಿಡಿಯಿತು. ಇಟ್ಟಿಗೆ ತುಂಬಿಕೊಂಡು ಬಂದ ವಾಹನವನ್ನು ಪೊಲೀಸರು ಪ್ರಶ್ನಿಸಿದರು. ಬಿಲ್ ಕೇಳಿದರು. ಇಟ್ಟಿಗೆಗೆ ಯಾರು ತಾನೆ ಬಿಲ್ ಕೊಡುತ್ತಾರೆ. ಹೀಗಾಗಿ ಆ ವಾಹನ ವಾಪಸ್ ಹೋಗಬೇಕಾಯಿತು. ಹರಸಾಹಸಪಟ್ಟು ಮೂರು ದಿನಗಳ ನಂತರ ಇಟ್ಟಿಗೆ ತರಿಸಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಯಿತು. ಏನೇ ಸಾಗಿಸಿದರೂ ಎಲ್ಲದಕ್ಕೂ ಬಿಲ್ ಕೇಳುತ್ತಾರೆ. ಕೆಲವಕ್ಕೆ ಮಾತ್ರವೆ ಬಿಲ್ ನೀಡಬಹುದು. ಕಟ್ಟಡ ಸಾಮಗ್ರಿಗಳನ್ನು ತರುವ ಎಲ್ಲದಕ್ಕೂ ಬಿಲ್ ನೀಡಲು ಹೇಗೆ ಸಾಧ್ಯ..? ನಿರ್ಮಾಣ ಕೆಲಸ ಕಾರ್ಯಗಳಿಗೆ ಅವಕಾಶ ಇದೆ ಎಂದು ಹೇಳಿರುವಾಗ ಅದಕ್ಕೆ ಮುಕ್ತ ಅವಕಾಶ ನೀಡಬೇಕು. ಕೆಲವು ಕಾರ್ಮಿಕರು ಇಲ್ಲಿಯೇ ಉಳಿದಿದ್ದು ಅವರ ದೈನಂದಿನ ಬದುಕಿಗೆ ಕೆಲಸ ಕಾರ್ಯವನ್ನೇ ಅವಲಂಬನೆ ಮಾಡಿದ್ದಾರೆ. ಅಂತಹವರಿಗೆ ಕೆಲಸ ಕೊಡಲು ನಾವು ಸಿದ್ಧರಿದ್ದೇವೆ. ಅವರ ಬದುಕು ಸಾಗಬೇಕಲ್ಲ. ಆದರೆ ನೀತಿ ನಿಯಮಾವಳಿಗಳು ಕೆಲವೊಮ್ಮೆ ಕಟ್ಟಿ ಹಾಕುತ್ತವೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಕ್ತ ಅವಕಾಶ ನೀಡಬೇಕು.
-ಪುನೀತ್, ಪ್ರಥಮ ದರ್ಜೆ ಗುತ್ತಿಗೆದಾರರು.
ಕಟ್ಟಡ ಕಾಮಗಾರಿ ಹಾಗೂ ಕೃಷಿ ಕ್ಷೇತ್ರಕ್ಕೆ ವಿನಾಯಿತಿ ಇದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅದರಂತೆ ಈ ಎರಡೂ ಕ್ಷೇತ್ರಗಳಿಗೆ ಬೇಕಾಗಿರುವ ಅಗತ್ಯ ಪರಿಕರಗಳನ್ನು ನಾವು ಸರಬರಾಜು ಮಾಡಲಿದ್ದು, ಅಂಗಡಿ ತೆರೆಯಲು ಮುಂದಾದೆವು. ಅವಕಾಶ ಕೊಡಲಿಲ್ಲ. ಮನೆ ಕಟ್ಟುವವರು, ಕೃಷಿಕ ರೈತರು ಪೈಪ್‍ಗಳು, ಸಿಮೆಂಟ್, ಪ್ಲಂಬಿಂಗ್ ಉಪಕರಣಗಳಿಗಾಗಿ ಬರುತ್ತಾರೆ. ಆದರೆ ನಾವು ಅವರಿಗೆ ಒದಗಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ಇಂತಹ ವಲಯದಲ್ಲಿ ಇರುವ ಅಂಗಡಿಗಳಿಗೆ ಸಮಯದ ವಿನಾಯಿತಿ ನೀಡಬೇಕು. ಇಲ್ಲದೆ ಹೋದರೆ ಅವಕಾಶ ನೀಡಿಯೂ ಪ್ರಯೋಜನವಾಗದು.
-ಅಮರ್, ಪೈಪ್ ಹಾಗೂ ಪ್ಲಂಬಿಂಗ್ ಮಾರಾಟಗಾರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ