ಶಿರಾ :
ಮಕ್ಕಳ ಭವಿಷ್ಯ ಉಜ್ವಲಗೊಳ್ಳುವುದು ಶಾಲಾ ಕೊಠಡಿಯಲ್ಲಿ ಎಂಬ ಮಾತು ಶೈಕ್ಷಣಿಕ ಕ್ಷೇತ್ರದಲ್ಲಿ ತಮಟೆಯಂತೆ ಸಾರಿ ಸಾರಿ ಹೇಳಲಾಗುತ್ತದೆ. ಶಾಲಾಭಿವೃದ್ಧಿಯ ನೆಪದಲ್ಲಿ, ಶಾಲಾ ಕಾಂಪೌಂಡ್‍ಗೋಡೆ ನಿರ್ಮಾಣದ ನೆಪದಲ್ಲಿ, ಶಾಲಾ ಕೊಠಡಿಗಳ ನಿರ್ಮಾಣದ ಹೆಸರಲ್ಲಿ ಕೋಟಿ ಕೋಟಿ ರೂ.ಗಳ ಅನುದಾನವನ್ನು ಜನಪ್ರತಿನಿಧಿಗಳು ತಂದು ಹಾಕಿ ಅಭಿವೃದ್ಧಿಯ ಸೋಗು ತೋರಿಸುವುದು ಸಹಜವಷ್ಟೆ.
ಈ ರೀತಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆಂದೆ ರಾಜ್ಯ ಸರ್ಕಾರ ಕೋಟಿ ರೂ.ಗಳ ಅನುದಾನವನ್ನು ತಂದು ಸುರಿಯುತ್ತಿದ್ದರೂ ಶಿರಾ ನಗರದಲ್ಲಿರುವ ಅತ್ಯಂತ ಹಳೆಯ ಹಾಗೂ ನೂರಾರು ವರ್ಷಗಳ ಇತಿಹಾಸವನ್ನೇ ಸಾರುವ ಸರ್ಕಾರಿ ಪ್ರೌಢಶಾಲೆಯ ಪರಿಸ್ಥಿತಿಯನ್ನು ಕಂಡರೆ ನಿಜಕ್ಕೂ ಎಂತಹವರಿಗಾದರೂ ಕರುಳು ಚುರ್ ಅನ್ನದೇ ಇರದು.
ಶೈಕ್ಷಣಿಕ ಕ್ಷೇತ್ರ ದಿನಕ್ಕೊಂದು ಬದಲಾವಣೆಯ ಸುಳಿಯಲ್ಲಿ ಸಿಲುಕಿ ಸರ್ಕಾರಿ ಶಾಲೆಗಳನ್ನು ಬದಿಗೊತ್ತಿ ಅದೆಷ್ಟೋ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿರುವ ಪರಿಪಾಠ ಇರುವಾಗ ದಾಖಲಾತಿಗಳು ಹೆಚ್ಚಾಗಿರುವಂತಹ ಅದೆಷ್ಟೋ ಸರ್ಕಾರಿ ಶಾಲೆಗಳ ಅಭಿವೃದ್ಧಿಯತ್ತ ಶಿಕ್ಷಣ ಇಲಾಖೆ ಮುಖ ಮಾಡದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಶಿರಾ ನಗರದ ಅದರಲ್ಲೂ ಕ್ಷೇತ್ರ ಶಿಕ್ಷಣ ಇಲಾಖೆಯ ಕೂಗಳತೆಯ ದೂರದಲ್ಲಿಯೇ ಅತ್ಯಂತ ಹಳೆಯದಾದ 66 ವರ್ಷಗಳ ಶಾಲಾ ಕಟ್ಟಡವೊಂದಿದ್ದು, ಇದನ್ನು ಶಿರಾ ಮುನಿಸಿಪಲ್ ಹೈಸ್ಕೂಲು ಅಂತಲೂ ಕರೆಯಲಾಗುತ್ತಿದೆ. ನಗರದ ಪ್ರವಾಸಿ ಮಂದಿರದ ವೃತ್ತದ ಬಳಿಯೇ ಇರುವ ಈ ಪ್ರೌಢಶಾಲೆಯನ್ನು ಬಾಲಕರ ಸರ್ಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗವನ್ನಾಗಿಸಿ ಕೈತೊಳೆದುಕೊಳ್ಳಲಾಯಿತೆ ಹೊರತು ಇಲ್ಲಿನ ಶಾಲಾ ಕಟ್ಟಡಗಳನ್ನು ಸುಸಜ್ಜಿತವಾಗಿ ಕಟ್ಟಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳುವ ಕೆಲಸವನ್ನು ಮಾತ್ರ ಈ ಕ್ಷೇತ್ರದ ಯಾವ ಶಾಸಕರೂ ಕೂಡ ಮಾಡಲೇ ಇಲ್ಲ.
ಸುತ್ತ ಮುತ್ತಲ ಗ್ರಾಮಗಳ ಪ್ರಯಾಣಿಕರು ಪ್ರವಾಸಿ ಮಂದಿರದ ವೃತ್ತದಲ್ಲಿ ಬಸ್ ಇಳಿದ ಕೂಡಲೇ ದೊಡ್ಡ ಅರಳಿ ಮರವೊಂದಿದ್ದು ಅರಳಿ ಮರದ ನೆರಳಲ್ಲಿ ನಿಂತು ಹಿಂಭಾಗಕ್ಕೆ ನೋಡಿದ ಕೂಡಲೇ ಹೊರಗಿನಿಂದ ಒಂದಿಷ್ಟು ಸುಂದರವಾಗಿ ಕಾಣುವ ಪ್ರೌಢಶಾಲೆಯ ಒಳ ಹೊಕ್ಕು ನೋಡಿದರೆ ನಿಜಕ್ಕೂ ಅಚ್ಚರಿಯೇ ಕಾದಿರುತ್ತದೆ.
ಮುನಿಸಿಪಲ್ ಹೈಸ್ಕೂಲಿನ ಈ ಜಾಗದಲ್ಲಿ ಮೊದಲಿಗೆ ಮೈಸೂರು ರಾಜ್ಯದ ಅರಸರಾದ ಜಯ ಚಾಮರಾಜ ಒಡೆಯರ್ 30.7.1947ರಲ್ಲಿ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಎರಡೇ ವರ್ಷದಲ್ಲಿ ಈ ಶಾಲೆಯ ಶಿಲಾನ್ಯಾಸ ನೆರವೇರಿಸಿದರು. 27.4.1955ರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆ.ಹನುಮಂತಯ್ಯ ಅವರು ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನೂ ನೆರವೇರಿಸಿದ್ದರು.
ಈ ಶಾಲೆಯು ಶಿರಾ ತಾಲ್ಲೂಕಿನಲ್ಲಿಯೇ ಪ್ರಪ್ರಥಮವಾಗಿ ಉದ್ಘಾಟನೆಗೊಂಡ ಪ್ರೌಢಶಾಲಾ ವಿಭಾಗದ ಹೈಸ್ಕೂಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮಾಜಿ ಸಚಿವ ದಿ.ಬಿ.ಸತ್ಯನಾರಾಯಣ್, ಮಾಜಿ ಶಾಸಕ ದಿ.ಎಸ್.ಕೆ.ದಾಸಪ್ಪ ಅವರಿಂದ ಹಿಡಿದು ಬಹುತೇಕ ಗಣ್ಯ ರಾಜಕಾರಣಿಗಳು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಖ್ಯಾತಿಗೂ ಒಳಗಾಗಿರುವ ಅನೇಕ ಮಂದಿ ಪ್ರಮುಖರು ಓದಿ ಬೆಳೆದ ಈ ಶಾಲೆಯ ಈಗಿನ ದುಸ್ಥಿತಿ ಕಂಡರೆ ನಿಜಕ್ಕೂ ದುಃಖದ ಕಟ್ಟೆಯೇ ಒಡೆಯುತ್ತದೆ.
ಮಳೆ ಬಂದರೆ ಸೋರುವ ಉಪ ಪ್ರಾಂಶುಪಾಲರ ಕೊಠಡಿ, ಮಕ್ಕಳು ಕೂತು ಪಾಠ ಕೇಳುವ ಅನೇಕ ಕೊಠಡಿಗಳ ಮೇಲ್ಛಾವಣಿ ಬಿರುಕು ಬಿಟ್ಟು ಕೂತಿರುವುದು, ಮಕ್ಕಳು ಕೂರುವ ಹಳೆಯ ಡೆಸ್ಕ್‍ಗಳು, ಬಿರುಕು ಬಿಟ್ಟು ಆಗಲೋ, ಈಗಲೋ ಬೀಳುವ ಹಂತದಲ್ಲಿರುವ ಕಟ್ಟಡದ ಮಣ್ಣಿನ ಕಂಬಗಳು, ಗೋಡೆಗಳು ಇಡೀ ಶೈಕ್ಷಣಿಕ ಇಲಾಖೆಯ ನಿರ್ಲಕ್ಷ್ಯತನವನ್ನು ಅಣಕಿಸುವಂತಾಗಿದೆ.
ಈ ಸರ್ಕಾರಿ ಪ್ರೌಢಶಾಲೆಯ ಸನಿಹದಲ್ಲಿಯೇ ಇರುವ ಕಾಲೇಜು ಕಟ್ಟಡಕ್ಕೆ ಲಕ್ಷ ಲಕ್ಷ ರೂ. ಗಳ ಅನುದಾನ ತಂದು ಕಾಲೇಜಿನ ಅಭಿವೃದ್ಧಿಗೆ ಅನೇಕ ಮಂದಿ ಕ್ರಿಯಾಶೀಲತೆ ಮೆರೆದರೆ ಹೊರತು ಸನಿಹದಲ್ಲಿಯೇ ಇರುವ ಈ ಬಡಪಾಯಿ ಹೈಸ್ಕೂಲಿನ ದುಸ್ಥಿತಿ ಮಾತ್ರ ಯಾರ ಕಣ್ಣಿಗೂ ಕಾಣದೇ ಇರುವುದು ಸೋಜಿಗದ ಸಂಗತಿಯೇ ಸರಿ.
ಈ ಹಿಂದೆ ಸಚಿವರಾಗಿದ್ದ ಬಿ.ಸತ್ಯನಾರಾಯಣ್ ಮೂರು ಶಾಲಾ ಕೊಠಡಿಗಳನ್ನು ಮಂಜೂರು ಮಾಡಿಸಿದ್ದರು. ಈಗಿನ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಶಾಸಕರಾಗುವ ಮುನ್ನ ಅನ್ನಪೂರ್ಣ ಊಟದ ಪ್ರಾಂಗಣವನ್ನು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದರು. ಈ ಎರಡು ಅಭಿವೃದ್ಧಿ ಕೆಲಸ ಬಿಟ್ಟರೆ ಇಡೀ ಹೈಸ್ಕೂಲಿನ ಸ್ಥಿತಿ ಸ್ಮಶಾನದ ಗೂಡಂತಾಗಿದೆ. ಶಾಸಕರಾಗುವ ಮುನ್ನವೆ ಈ ಶಾಲೆಗೆ ಒಂದಿಷ್ಟು ನೆರವಾಗಿದ್ದ ರಾಜೇಶ್‍ಗೌಡರು ಇದೀಗ ಈ ಕ್ಷೇತ್ರದ ಶಾಸಕರೂ ಆಗಿದ್ದು ಈವರೆಗೂ ಈ ಶಾಲೆಯ ಅಭಿವೃದ್ಧಿಯತ್ತ ಗಮನ ನೀಡದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಸದರಿ ಶಾಲಾ ಕೊಠಡಿಗಳು ಬೀಳುವ ಸ್ಥಿತಿಯಲ್ಲಿದ್ದರೂ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಕಡಿಮೆ ಇಲ್ಲವಾದರೂ ಶಾಲೆಗೆ ಮಕ್ಕಳನ್ನು ಕಳುಹಿಸುವ ಪೋಷಕರ ಸ್ಥಿತಿ ಮಾತ್ರ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಇನ್ನಾದರೂ ಕ್ಷೇತ್ರದ ಶಾಸಕರು ಈ ಸರ್ಕಾರಿ ಪ್ರೌಢಶಾಲೆಯತ್ತ ಗಮನ ಹರಿಸುವರೆ ಎಂದು ಕಾದು ನೋಡಬೇಕಿದೆ.
(ಬರಗೂರು ವಿರೂಪಾಕ್ಷ)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
