ಕೊರಟಗೆರೆ :
ಮಾರಕಾಸ್ತ್ರಗಳನ್ನ ತೋರಿಸಿ ಮೂರು ಜನರ ಗುಂಪೋಂದು ಮಾರ್ಗ ಮಧ್ಯೆ ವ್ಯಕ್ತಿಯೋರ್ವರನ್ನು ಬೆದರಿಸಿ ಮೈಮೇಲಿದ್ದ ಒಡವೆ, ನಗದು, ಮೊಬೈಲ್ ಸೇರಿದಂತೆ ದ್ವಿಚಕ್ರವಾಹನವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ವೀರಸಾಗರ ಗ್ರಾಮದ ವೀರನಾಗಯ್ಯ ಎಂಬುವರು ಹುಲುವಂಗಲ ಮಾರ್ಗವಾಗಿ ಎಲೆರಾಂಪುರ ಕುಂಚಿಟಿಗ ಮಠಕ್ಕೆ ಹೋಗುವಾಗ ಮಾರ್ಗ ಮಧ್ಯೆ ಮೂವರು ಮಾರಕಾಸ್ತ್ರಗಳನ್ನು ಹಿಡಿದು ದ್ವಿಚಕ್ರವಾಹನ ಸವಾರರನ್ನು ಅಡ್ಡಗಟ್ಟಿ, ಮೈ ಮೇಲಿದ್ದ ಬಂಗಾರದ ಚೈನ್, ಉಂಗುರ, ಮೊಬೈಲ್ ಸೇರಿದಂತೆ 10 ಸಾವಿರ ನಗದು ಕಸಿದುಕೊಂಡು, ಕಿರುಚಾಡಿದರೆ ಹಾಗೂ ಪೋಲೀಸರಿಗೆ ಹೇಳಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎನ್ನಲ್ಲಾಗಿದೆ.
ಕೊರೋನಾ ಸಂಕಷ್ಟ ಕಾಲದಲ್ಲಿ ಹಣ, ಒಡವೆ, ಮೊಬೈಲ್ ಕಳೆದುಕೊಂಡು ಮಾರಕಾಸ್ತ್ರ ನೋಡಿದ ಭಯದಲ್ಲಿ ವೀರನಾಗಯ್ಯ ಮನೆ ಬಿಟ್ಟು ಹೊರಬರದ ಮನಸ್ಥಿತಿಯಲ್ಲಿದ್ದಾರೆ. ಈ ಪ್ರಕರಣದಿಂದ ನಾಗರಿಕರು ಒಬ್ಬಂಟಿಯಾಗಿ ಓಡಾಡಲು ಭಯಭೀತ ವಾತಾವರಣ ಸೃಷ್ಟಿಯಾಗಿದೆ. ಇಂತಹ ಇನ್ನಷ್ಟು ಪ್ರಕರಣಗಳು ಮರುಕಳಿಸುವ ಮೊದಲು ಪೋಲೀಸ್ ಇಲಾಖೆ ಎಚ್ಚರ ವಹಿಸುವ ತುರ್ತು ಅವಶ್ಯಕತೆ ಇದೆ ಎಂದು ನಾಗರಿಕರು ಆಘಾತದಿಂದ ಅಲವತ್ತುಕೊಂಡಿದ್ದಾರೆ.
ಈ ಸಂಬಂಧ ಕೊರಟಗೆರೆ ತಾಲ್ಲೂಕಿನ ಕೋಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಸಿದ್ದರಾಮೇಶ್ವರ ಹಾಗೂ ಕೋಳಾಲ ಪಿಎಸೈ ನವೀನ್‍ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ