ಕೊರಟಗೆರೆ :
ಕೊರೋನಾದಿಂದ ಸಾವಿಗೀಡಾದ ಯುವಕನ ಅಂತ್ಯಕ್ರಿಯೆಗೆ ಸೋಂಕಿನ ಭಯದಿಂದ ಪೋಷಕರು ಗ್ರಾಮ ಪಂಚಾಯ್ತಿಗೆ ಮಾಹಿತಿ ನೀಡಿದರೂ ಭಾಗವಹಿಸದ ಗ್ರಾಪಂ ವಿರುದ್ದ ಸಾರ್ವಜನಿಕರು ಬೇಸರ ವ್ಯಕ್ತಪಡಿಸುವುದು ಒಂದೆಡೆಯಾದರೆ ಸ್ವಯಂ ಪ್ರೇರಿತ ಮುಸ್ಲಿಂ ಹಾಗೂ ಹಿಂದೂಗಳ ತಂಡವೊಂದು ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಿ ಮೆಚ್ಚುಗೆಗೆ ಪಾತ್ರವಾದ ಘಟನೆ ಬುಧವಾರ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಮದ ರಂಗನಾಥ್ (30) ಇತ್ತೀಚೆಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆದು, ಸ್ವಲ್ಪ ಗುಣಮುಖರಾಗಿ ನಂತರ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಇವರು ಇದ್ದಕಿದ್ದಂತೆ ತೀವ್ರ ಜ್ವರ, ಕೆಮ್ಮು ಕಾಣಿಸಿಕೊಂಡು ಅಸ್ವಸ್ಥರಾಗಿ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇವರ ಅಂತ್ಯಕ್ರಿಯೆಗೆ ಪೋಷಕರು ಮಿನಾಮೇಷ ಎಣಿಸಿ ಗಾಪಂಗೆ ತಿಳಿಸಿದರಾದರೂ ಪ್ರಯೋಜನವಾಗಿರಲಿಲ್ಲ. ಒಂದು ಕಡೆ ಗ್ರಾಪಂನ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದು ಕಡೆ ಸ್ವಯಂ ಪ್ರೇರಿತ ತಂಡದ ಸ್ವಯಂ ಆಸಕ್ತಿಯ ಉಚಿತ ಶವ ಸಂಸ್ಕಾರಕ್ಕೆ ಸಾರ್ವಜನಿಕ ವಲಯದಲ್ಲಿ ಅಭೂತಪುರ್ವ ಮೆಚ್ಚುಗೆ ವ್ಯಕ್ತವಾಗಿದೆ.
ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೂ ಸಾಯುವವರ ಸಂಖ್ಯೆ ಹೆಚ್ಚಾಗುತಿದೆ. ವೃದ್ಧರು, ಯುವಕರು ಸೇರಿದಂತೆ ಎಲ್ಲರೂ ಸಾವಿಗೆ ಶರಣಾಗುತಿದ್ದಾರೆ. ಇಂತಹ ಸಂದರ್ಭದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಕರಾಗಲಿ ಊರಿನವರಾಗಲಿ ಯಾರೂ ಸಹ ಮುಂದೆ ಬಾರದ ಪರಿಸ್ಥಿತಿಯಲ್ಲಿ ಗಾಪಂಗಳು ಅಂತ್ಯ ಸಂಸ್ಕಾರದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸರ್ಕಾರದ ಮಾರ್ಗಸೂಚಿಯಿದೆ. ಆದರೂ ಯಾರೂ ಅಂತ್ಯ ಸಂಸಾರಕ್ಕೆ ಮುಂದೆ ಬಾರದ ಸಂದರ್ಭದಲ್ಲಿ ನಾವು ಯಾವುದೇ ಅಪೇಕ್ಷೆಯಿಲ್ಲದೆ ಅಂತ್ಯ ಸಂಸ್ಕಾರವನ್ನು ಅವರ ಸಂಪ್ರದಾಯದಂತೆ ನಡೆಸಿಕೊಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮತ್ತು ಹಸಿರು ಸೇನೆಯ ತಾಲ್ಲೂಕು ಕಾರ್ಯಾಧ್ಯಕ್ಷ ಮಾಜಿ ಪಪಂ ಅಧ್ಯಕ್ಷ ನಯಾಜ್‍ಅಹ್ಮದ್, ಸಾಮಾಜಿಕ ಕಾರ್ಯಕರ್ತ ಜಟ್ಟಿಹಳ್ಳಿ ನಾಗರಾಜು, ಮುಸ್ಲಿಂ ತಂಡದ ಮಹಮ್ಮದ್‍ಗೌಸ್, ಸಾಮಾಜಿಕ ಕಾರ್ಯಕರ್ತರುಗಳಾದ ರೆಹಮಾನ್, ಸುಹೇಲ್ ಮತ್ತು ರೆಹಮಾನ್ ಸೇರಿದಂತೆ ಇತರ ಮುಸ್ಲಿಂ ತಂಡ ಫೋನ್ ಕರೆ ಮಾಡಿದರೆ ಉಚಿತವಾಗಿ ಅಂತ್ಯಸಂಸ್ಕಾರ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಸಂಪರ್ಕಕ್ಕೆ ಮೊ.ಸಂಖ್ಯೆ 9964754015, 9731929727, 9110277616 ಮತ್ತು 9964102736 ನೀಡಿದ್ದಾರೆ.
ಮಾನವೀಯತೆ ಮೆರೆದ ಮುಸ್ಲಿಂ ಯುವಕರು :
ಕೊರಟಗೆರೆ ತಾಲ್ಲೂಕಿನಲ್ಲಿ ಕೊರೋನಾದಿಂದ ಯಾವ ಧರ್ಮದವರೆ ಆಗಲಿ ಯಾರಾದರು ಸಾವನಪ್ಪಿದರೆ ಅಂತಹವರ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಯಾರೂ ಸಹಾಯಕ್ಕೆ ಬರದಿದ್ದರೆ ನಮಗೆ ಕರೆ ಮಾಡಿ ನಾವು ನಿಮ್ಮ ಸಹಾಯಕ್ಕೆ ಬಂದು, ಯಾವುದೆ ವೆಚ್ಚವಿಲ್ಲದೆ ಮೃತ ದೇಹವನ್ನು ಸಂಬಂಧಿಸಿದವರ ಸಂಪ್ರಾದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರ ಮೊಬೈಲ್ ನಂಬರ್‍ಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಅದನ್ನ ಆಧÀರಿಸಿ ಮೃತನ ಕುಟುಂಬದವರು ಕರೆ ಮಾಡಿ ತಿಳಿಸಿದ ನಂತರ, ಸುಮಾರು 8 ಗಂಟೆಗೆ ಬಂದ ಸಾಮಾಜಿಕ ಕಾರ್ಯಕರ್ತರಾದ ಜಟ್ಟಿ ನಾಗರಾಜು ಹಾಗೂ ಪಪಂ ಮಾಜಿ ಅಧ್ಯಕ್ಷ ನಯಾಜ್ ಇವರ ತಂಡ ಸ್ಥಳಕ್ಕೆ ಬಂದು ಕೋವಿಡ್ ನಿಯಮದಂತೆ ಹಾಗೂ ಹಿಂದೂ ಸಂಪ್ರಾದಾಯದಂತೆ ಅಂತ್ಯ ಸಂಸ್ಕಾರ ಮುಗಿಸಿದರು. ಏನೇ ಆಗಲಿ ನಮ್ಮ ಬಂಧು ಬಳಗದವರು ಹಾಗೂ ಅಕ್ಕ ಪಕ್ಕದವರು ಈ ಕೆಲಸ ಮಾಡಬೇಕಿದ್ದ ಅದಿಕಾರಿಗಳು ಮಾಡದ ಕೆಲಸವನ್ನು ತಂಡ ಮಾಡುತ್ತಿದೆ. ಇವರಿಗೆ ನಮ್ಮ ನಮಸ್ಕಾರಗಳು ಎಂದು ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಾನು ನಿನ್ನೆ ಇದರ ಬಗ್ಗೆ ಎಲ್ಲಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿದ್ದೇನೆ. ಗ್ರಾಮ ಪಂಚಾಯ್ತಿಯವರು ಅನಾಥ ಶವ ವಾದರೆ ಅಂತಹ ದೇಹಗಳನ್ನು ಅಂತ್ಯ ಸಂಸ್ಕಾರ ಮಾಡಬೇಕು. ಅಲ್ಲದೆ ಕೊರೊನದಿಂದ ಮೃತರಾಗಿದ್ದಾರೆ ನೀವೆ ಅಂತ್ಯ ಸಂಸ್ಕಾರ ಮುಗಿಸಿ ಎಂದು ಮೃತರ ಕುಟುಂಬದವರು ಪಂಚಾಯ್ತಿಗೆ ತಿಳಿಸಿದರೆ ಸಂಸ್ಕಾರ ಮಾಡಿಕೊಡಬೇಕು. ಬಿಡಿ ಪುರದ ನಿನ್ನೆಯ ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಕೂಡಲೆ ಮಾಹಿತಿ ಪಡೆದು ಸಂಬಂಧಪಟ್ಟವರ ಮೇಲೆ ಕಾನೂನು ರೀತಿ ಕ್ರಮ ಕೈ ಗೊಳ್ಳುತ್ತೇನೆ.
-ವಿದ್ಯಾಕುಮಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ತುಮಕೂರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
