ಹುಳಿಯಾರು ಆಸ್ಪತ್ರೆಯಲ್ಲಿ ಟೋಕನ್ ಪಡೆದವರಿಗೆ ಮಾತ್ರ ಆದ್ಯತೆ

 ಹುಳಿಯಾರು : 

      ಕೋವಿಡ್ ಲಸಿಕೆ ಸಿಕ್ಕಿ ಪಡೆಯಲು ಆನ್ಲೈನ್ ರಿಜಿಸ್ಟರ್ ಆಗಬೇಕು, ಆಗ ಮಾತ್ರ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದರೆ, ಹುಳಿಯಾರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸರತಿಯಲ್ಲಿ ನಿಂತು ಟೋಕನ್ ಪಡೆದರೆ ಮಾತ್ರ ವ್ಯಾಕ್ಸಿನ್ ಹಾಕಲಾಗುವುದು. ಆನ್ಲೈನ್ ರಿಜಿಸ್ಟರ್ ಆದವರ ಬಗ್ಗೆ ನಮಗೆ ಮಾಹಿತಿ ಇಲ್ಲ, ಆಸ್ಪತ್ರೆಯಲ್ಲಿ ಯಾರು ಬಂದು ನಿಂತು ಟೋಕನ್ ಪಡೆಯುತ್ತಾರೋ ಅವರಿಗೆ ಮಾತ್ರ ವ್ಯಾಕ್ಸಿನ್ ಹಾಕಲಾಗುವುದು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

      ಹೌದು, ದಿನೇದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ, ಲಸಿಕೆ ಹಾಕಿಸಿಕೊಳ್ಳುವುದೊಂದೆ ಪರಿಹಾರ ಎಂದು ಲಸಿಕೆ ಹಾಕಿಸಿಕೊಳ್ಳಲು ಹೆಚ್ಚೆಚ್ಚು ಜನ ಮುಂದಾಗುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಇದಕ್ಕಾಗಿ ಮೊದಲು ಕೋವಿನ್ ಅಥವಾ ಅರೋಗ್ಯ ಸೇತು ಆಪ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು.ಆಧಾರ್ ಕಾರ್ಡ್ ನಾಂಬರ್ ನೀಡುವುದರ ಮೂಲಕ ಮೊದಲು ರಿಜಿಸ್ಟರ್ ಮಾಡಿಸಬೇಕು. ಯಾವ ದಿನ,ಯಾವ ಸ್ಥಳದಲ್ಲಿ, ಯಾವ ಸ್ಲಾಟ್ ನಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಇಲ್ಲಿ ತಿಳಿಯುತ್ತದೆ. ನಮ್ಮ ಅನುಕೂಲಕರ ಸಮಯನೋಡಿ ರಿಜಿಸ್ಟರ್ ಮಾಡಿಕೊಂಡು ಲಸಿಕ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದಾಗಿದೆ.

      ಈಗಾಗಲೇ ಮೊದಲ ಲಸಿಕೆ ಪಡೆದಿರುವವರು ಎರಡನೇ ಡೋಸ್ ಪಡೆಯಲು ಮುಂದಾಗುತ್ತಿದ್ದಾರೆ. ಆದರೆ ಲಸಿಕೆ ಕೊರತೆ ಕಂಡುಬಂದಿದ್ದು ವಾರದಲ್ಲಿ ನಾಲ್ಕೈದು ದಿನ ಕೊಡಲಾಗುತ್ತಿದ್ದು,ಅದೂ ಕೂಡ ಕೇವಲ 40 ರಿಂದ 100 ಒಳಗೆ ಒಳಪಟ್ಟಿರುತ್ತದೆ. ಹೀಗಾಗಿ ವ್ಯಾಕ್ಸಿನ್ ಪಡೆಯುವವರ ಸಂಖ್ಯೆ ಜಾಸ್ತಿ ಇದ್ದು,ಎಲ್ಲಿ ಲಸಿಕೆ ಸಿಗುವುದಿಲ್ಲವೋ ಎಂಬ ಆತಂಕದಿಂದ ಗಂಟೆಗಟ್ಟಲೆ ಸರತಿಸಾಲಿನಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ.

      ಸರತಿ ಸಾಲಿನಲ್ಲಿ ಕಾಯುವುದು ಬೇಡವೆಂದು ಕೆಲವರು ಈಗಾಗಲೇ ಆನ್ಲೈನ್ ರಿಜಿಸ್ಟರ್ ಮಾಡಿಸಿಕೊಂಡು ತೆರಳಿದರೆ, ಹುಳಿಯಾರು ಲಸಿಕಾ ಕೇಂದ್ರದಲ್ಲಿ ಟೋಕನ್ ಸಿಸ್ಟಮ್ ಜಾರಿಯಿದ್ದು,ಆನ್ಲೈನ್ ರಿಜಿಸ್ಟರ್ ಮಾಡಿಸಿಕೊಂಡು ಹೋಗುವ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ.

      ಸರ್ಕಾರದ ಮಾರ್ಗಸೂಚಿಯಂತೆ ನಾವು ರಿಜಿಸ್ಟರ್ ಮಾಡಿಸಿಕೊಂಡು ತೆರಳಿದರೆ ಇಲ್ಲಿನ ಸಿಬ್ಬಂದಿಗಳು ನಮಗೆ ಲಸಿಕೆ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ.ಆನ್ಲೈನ್ ರಿಜಿಸ್ಟರ್ ಮಾಡಿಸಿಕೊಂಡಿರುವವರ ಮಾಹಿತಿ ನಮಗೆ ತಿಳಿದುಬರುವುದಿಲ್ಲ, ಹಾಗಾಗಿ ಲಸಿಕಾ ಕೇಂದ್ರದಲ್ಲಿ ನೀಡಲಾಗುವ ಟೋಕನ್ ಪಡೆದವರಿಗಷ್ಟೇ ನಾವು ಲಸಿಕೆ ನೀಡುವುದು ಎನ್ನುತ್ತಾರೆ. ಹೀಗಾದರೆ ನಾವು ರಿಜಿಸ್ಟರ್ ಮಾಡಿಸಿಕೊಳ್ಳುವುದು ವ್ಯರ್ಥನಾ, ಅರೋಗ್ಯ ಸೇತು ಇವರ್ಯಾಕೆ ಪರಿಗಣಿಸುವುದಿಲ್ಲ ಎಂದು ರಿಜಿಸ್ಟರ್ ಮಾಡಿಸಿಕೊಂಡಿರುವವರು ಬೇಸರ ವ್ಯಕ್ತಪಡಿಸುತ್ತಾರೆ.

      ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳು ಹೇಳುವುದೇ ಬೇರೆ. ಲಸಿಕೆ ನೀಡಲು ಪ್ರಾರಂಭಿಸಿದಿಂದಲೂ ಆಸ್ಪತ್ರೆಯಲ್ಲಿ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿ ಸಾಗಿದೆ. ಲಸಿಕೆ ಪಡೆಯಲು ಬರುವವರ ಸಂಖ್ಯೆಗಿಂತ ಲಸಿಕೆ ಬರುವುದು ಕಡಿಮೆ ಇರುವುದರಿಂದ ಗೊಂದಲ ಉಂಟಾಗುತ್ತದೆ. ಅರೋಗ್ಯ ಸೇತು ಆಪ್ ನಲ್ಲಿ ರಿಜಿಸ್ಟರ್ ಮಾಡಿಸಿದವರ ಮೊಬೈಲ್ ನಂಬರ್ ಕೆಲವೊಮ್ಮೆ ತಾಂತ್ರಿಕ ಕಾರಣದಿಂದ ಇಲ್ಲಿ ಡಿಸ್ಪ್ಲೇ ಆಗುವುದಿಲ್ಲ. ಹಾಗಾಗಿ ಅವರು ಎಷ್ಟು ಜನ ರಿಜಿಸ್ಟರ್ ಮಾಡಿದ್ದಾರೆ ಎಂಬುದು ನಮಗೆ ತಿಳಿಯುವುದಿಲ್ಲ. ಅಲ್ಲದೆ ಕೆಲವರು ರಿಜಿಸ್ಟರ್ ಮಾಡಿಸಿದರು ಸಹ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಲಸಿಕೆ ಕಾದಿರಿಸಿ ಅವರು ಬರದಿದ್ದಲ್ಲಿ ಅಂತಹ ಸಮಯದಲ್ಲಿ ಲಸಿಕೆ ವೃಥಾ ವ್ಯರ್ಥವಾಗುತ್ತದೆ. ಇದಕ್ಕೂ ಮೀರಿ ಇಲ್ಲಿ ಸಾಕಷ್ಟು ಜನ ಗ್ರಾಮೀಣ ಪ್ರದೇಶದವರಾಗಿದ್ದು ಹೆಚ್ಚಿನ ಜನರಿಗೆ ಆಪ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳುವುದು ಬರುವುದಿಲ್ಲ. ಸ್ಮಾರ್ಟ್ ಫೋನ್ ಹೊಂದಿದಲ್ಲಿ ಮಾತ್ರ ರಿಜಿಸ್ಟರ್ ಮಾಡಿಕೊಳ್ಳಬಹುದಿದ್ದು, ರಿಜಿಸ್ಟರ್ ಮಾಡಿಸದೆ ಬರುವವರ ಸಂಖ್ಯೆ ಕೂಡ ಹೆಚ್ಚಿದ್ದು ನಾವು ಲಸಿಕೆ ನೀಡದಿದ್ದಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ ನಾವು ಟೋಕನ್ ಸಿಸ್ಟಮ್ ಜಾರಿ ಮಾಡಿದ್ದು,ಟೋಕನ್ ನೀಡಿದವರ ಮೊಬೈಲ್ ಸಂಖ್ಯೆ ಮೂಲಕ ನಾವೇ ರಿಜಿಸ್ಟರ್ ಮಾಡಿಸಿ ಲಸಿಕೆ ನೀಡುತ್ತಿದ್ದೇವೆ. ಜನ ಇದಕ್ಕೆ ಸ್ಪಂದಿಸಬೇಕು ಎನ್ನುತ್ತಾರೆ ಇಲ್ಲಿರುವ ಸಿಬ್ಬಂದಿ.

      ಎಲ್ಲಡೆ ಲಸಿಕೆ ಪ್ರಮಾಣ ಕಡಿಮೆ ಇರುವುದರಿಂದ ಜನರ ನೂಕುನುಗ್ಗಲು ಹೆಚ್ಚಾಗುತ್ತಿದೆ. ಹುಳಿಯಾರಿಗೆ ಪಟ್ಟಣ ಅಲ್ಲದೆ ಸುತ್ತಮುತ್ತಲ ಗ್ರಾಮಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಸರತಿ ಸಾಲಿನಲ್ಲಿ ನಿಂತು ತಾಳ್ಮೆ ಕಳೆದುಕೊಳ್ಳುವ ಸಾರ್ವಜನಿಕರು ಸಿಬ್ಬಂದಿ ಮೇಲೆ ತಕರಾರು ತೆಗೆಯುವುದು ಹೆಚ್ಚುತ್ತಿದೆ. ಎಷ್ಟೇ ಲಸಿಕೆ ಬಂದರು ಸಿಬ್ಬಂದಿ ನೀಡಲು ಸಿದ್ಧರಿದ್ದು ಲಸಿಕೆ ಪ್ರಮಾಣ ಹೆಚ್ಚಿಸುವ ಅಗತ್ಯವಿದೆ. ಹುಳಿಯಾರು ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ತರಲು ಪ್ರಯತ್ನಿಸಬೇಕು. ಸದ್ಯ ಪ್ರತಿದಿನ 50 ರಿಂದ 100ರವರೆಗೆ ಲಸಿಕೆ ಬರುತ್ತಿದ್ದು ಕನಿಷ್ಠ 200 ರಿಂದ 250 ಲಸಿಕೆ ಬೇಕಾಗುವುದಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಅಗತ್ಯ ಪ್ರಮಾಣದ ಲಸಿಕೆ ತರಿಸಿದಲ್ಲಿ ಎಲ್ಲರಿಗೂ ಲಸಿಕೆ ನೀಡಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap