ತುರುವೇಕೆರೆ :
ರಾಜ್ಯಾದ್ಯಂತ ಛಾಯಾಗ್ರಾಹಕರು ಕೊರೋನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ನೀಡಬೇಕೆಂದು ರಾಜ್ಯಾದ್ಯಂತ ವೀಡಿಯೋ ಹಾಗೂ ಪೋಟೋಗ್ರಾಫರ್ ಸಂಘಗಳು ಸರ್ಕಾರವನ್ನು ಒತ್ತಾಯಿಸಿವೆ.
ಯಾವುದೇ ಒಂದು ಪತ್ರಿಕೆಯಲ್ಲಿ ಫೋಟೋ ನೋಡಿದರೆ ಸಾಕು ಕೂಡಲೆ ಅದರ ಪೂರ್ಣ ವಿವರ ನಮಗೆ ಗೋಚರವಾಗುತ್ತದೆ. ಯಾವುದೇ ಸಂದರ್ಭವಾಗಲಿ ಫೋಟೋ ಅವಶ್ಯಕತೆ ಇದ್ದೇ ಇದೆ. ಅದು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಅಂತೆಯೇ ಹಿಂದಿನ ದಿನಗಳಲ್ಲಿ ಪೋಟೋಗಳಿಗೆ ವಿಶೇಷ ಸ್ಥಾನಮಾನಗಳಿದ್ದವು. ಕಲೆಗಾರನಿಗೂ ಅಷ್ಟೇ ಪ್ರಾಧಾನ್ಯತೆ ನೀಡಲಾಗಿತ್ತು. ಯಾವುದೇ ಎಂತಹುದೇ ಒಂದು ಕಾರ್ಯಕ್ರಮ ಪೂರ್ಣಗೊಳ್ಳಬೇಕೆಂದರೆ ಫೋಟೋದ ಅವಶ್ಯಕತೆ ತುಂಬಾನೆ ಇತ್ತು. ಯಾವುದೇ ಒಂದು ಚಿತ್ರ ವಿಭಿನ್ನವಾಗಿ ಮೂಡಿಬರಬೇಕೆಂದರೆ ಅದರ ಹಿಂದೆ ಛಾಯಾಗ್ರಾಹಕನ ಚಾಣಾಕ್ಷತೆ ಅಷ್ಟೇ ಮುಖ್ಯವಾಗಿರುತ್ತದೆ.
ಫೋಟೋಗ್ರಾಫರ್‍ಗಳ ಬದುಕು ಬೀದಿಗೆ:
ಛಾಯಾಗ್ರಾಹಕ ವೃತ್ತಿಯನ್ನೇ ನಂಬಿ ಜೀವನ ನಡೆಸುತ್ತಿರುವ ಅದೆಷ್ಟೋ ಮಂದಿ ಇಂದು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಶೈಲಿಯ ಕ್ಯಾಮರಾಗಳ ಬೇಡಿಕೆಗನುಗುಣವಾಗಿ ಸಾಲ-ಸೋಲ ಮಾಡಿ ಲಕ್ಷಾಂತರ ರೂ.ಗಳ ಬಂಡವಾಳ ಸುರಿದು ತಂದರೂ ಸಹ ಹಾಕಿದ ಬಂಡವಾಳವೂ ಪೂರ್ಣ ಪ್ರಮಾಣದಲ್ಲಿ ಬಾರದೆ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಪ್ರತಿ ವರ್ಷ ಹೊಸ ಹೊಸ ಕ್ಯಾಮರಾಗಳು ಮಾರುಕಟ್ಟೆಗೆ ಬರುವುದರಿಂದ ಪೈಪೋಟಿ ಎದುರಿಸಲಾಗದೆ ಕೆಲವಷ್ಟೇ ಮಂದಿ ಈ ವೃತ್ತಿಯಿಂದ ಮೇಲೆ ಬಂದಿರುವುದು ಬಿಟ್ಟರೆ ಮಿಕ್ಕವರು ಕುಟುಂಬ ನಿರ್ವಹಣೆಗೂ ಪರದಾಡುವಂತ ಪರಿಸ್ಥಿತಿ ನಿರ್ಮಣವಾಗಿದೆ. ಕ್ಯಾಮರಾಗಳಿಗೆ ಹೆಚ್ಚು ಬಂಡವಾಳ ಹೂಡಬೇಕಾಗಿದ್ದು ಎಲೆಕ್ಟ್ರಾನಿಕ್ ವಸ್ತುವೆಂದು ಬ್ಯಾಂಕಿನವರು ಸಾಲ ಕೊಡಲು ಮೀನಾಮೇಷ ಎಣಿಸುವುದರಿಂದ ಕೈಸಾಲ ಪಡೆದು ಕ್ಯಾಮರಾ ತಂದು ಇಂತಹ ಸಂದಿಗ್ದ ಪರಿಸ್ಥಿತಿ ಎದುರಾದಾಗ ಕೈಚೆಲ್ಲಿ ಕೂರಬೇಕಾದ ಪರಿಸ್ಥಿತಿ. ಇನ್ನೂ ಕೆಲವರು ಲೇಟೆಸ್ಟ್ ಕ್ಯಾಮರಾ ಕೊಳ್ಳಲಾಗದವರು ಕ್ಯಾಮರಾಮನ್ ಆಗಿ ಕೆಲಸ ಮಾಡುವವರ ಪರಿಸ್ಥಿತಿಯಂತೂ ಹೇಳತೀರದು.
ಫೋಟೋಗ್ರಾಫರ್‍ಗಳ ಮೇಲೆ ಕೊರೊನಾ ಛಾಯೆ:
ಲಾಕ್‍ಡೌನ್ ಹಿನ್ನೆಲೆಯಲ್ಲಿ ಫೋಟೋಗ್ರಾಫರ್‍ಗಳ ಮೇಲೆ ಕೊರೊನಾ ಛಾಯೆ ಆವರಿಸಿದೆ. ಕೆಲವೇ ಶುಭ ಸಂದರ್ಭಗಳಲ್ಲಿ ಮಾತ್ರ ಫೋಟೋ ಬೇಡಿಕೆಯಿರುತ್ತದೆ. ಉಳಿದಂತೆ ಅದನ್ನು ಕೇಳುವವರೆ ಇಲ್ಲವಾಗುತ್ತಾರೆ. ಸಾಮಾನ್ಯವಾಗಿ ಮದುವೆ, ಗೃಹಪ್ರವೇಶದಂತಹ ಶುಭಸಮಾರಂಭಗಳು ಫೆಬ್ರ್ರುವರಿಯಿಂದ ಜೂನ್‍ವರೆಗೆ ನಡೆಯುವುದರಿಂದ ಫೋಟೋಗ್ರಾಫರ್‍ಗಳಿಗೆ ಡಿಮ್ಯಾಂಡ್ ಜಾಸ್ತಿಯಿದ್ದು ಅಂತಹ ಸಂದರ್ಭಗಳಲ್ಲಿ ಮಾತ್ರ ಅಷ್ಟಿಷ್ಟು ಕಾಸು ಕ್ರೋಡೀಕರಿಸಿಕೊಳ್ಳುತಾರೆ. ಆ ಸಮಯದಲ್ಲಿ ಗಳಿಸಿದ ಹಣದಿಂದ ವರ್ಷಪೂರ್ತಿ ಕುಟುಂಬ ನಿರ್ವಹಣೆ ಮಾಡುತ್ತಾರೆ. ಆದರೆ ಕಳೆದ ಮಾರ್ಚ್‍ನಿಂದ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಎಲ್ಲೆಡೆ ಲಾಕ್ ಡೌನ್ ಆಗಿದ್ದು, ಯಾವುದೇ ಸಭೆ ಸಮಾರಂಭಗಳು ನಡೆಯುತ್ತಿಲ್ಲ. ಈ ವರ್ಷವಾದರೂ ಒಳ್ಳೆ ಆರ್ಡರ್‍ಗಳು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಫೋಟೋಗ್ರಾಫರ್‍ಗಳ ಆಸೆ ಕೊರೊನಾ ಛಾಯೆಯಿಂದ ಬತ್ತಿ ಹೋಗಿದೆ. ಕ್ಯಾಮರಾಗಳು ಫಂಗಸ್ ಬಂದು ಮೂಲೆಗುಂಪಾಗುತ್ತಿದ್ದು ಮುಂದೇಗೆ ಎಂಬ ಚಿಂತೆ ಅವರಲ್ಲಿ ಕಾಡತೊಡಗಿದೆ.
ರಾಜ್ಯ ಜಿಲ್ಲೆಗಳಲ್ಲದೆ ತಾಲ್ಲೂಕುಗಳಲ್ಲಿಯೂ ಛಾಯಾಗ್ರಾಹಕರ ಬದುಕು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ರಾಜ್ಯದಾದ್ಯಂತ ಸ್ಟೂಡಿಯೋ ಬಂದ್. ಚಿತ್ರೀಕರಣ ಹಾಗೂ ಸಮಾರಂಭಗಳು ಮಾಡಬಾರದೆಂದು ಸರ್ಕಾರ ಘೋಷಣೆ ಮಾಡಿದ್ದು, ಇದರಿಂದ ಫೋಟೋ ಮತ್ತು ವೀಡಿಯೋಗ್ರಾಫರ್‍ಗಳ ಸ್ಥಿತಿ ಅತಂತ್ರವಾಗಿದೆ. 150 ವರ್ಷಗಳ ಇತಿಹಾಸವಿರುವ ಛಾಯಾಗ್ರಾಹಕ ವೃತ್ತಿಗೆ ಸರ್ಕಾರ ಯಾವುದೇ ಪ್ಯಾಕೇಜ್ ನೀಡದಿರುವುದು ವಿಪರ್ಯಾಸವೆ ಸರಿ. ಇದನ್ನೇ ನಂಬಿರುವ ಛಾಯಾಗ್ರಾಹಕರ ಬದುಕು ಮೂರಾಬಟ್ಟೆಯಾಗಿದೆ.
ವಿರೋಧ ಪಕ್ಷದವರೂ ಸಹಾ ಇದರ ಬಗ್ಗೆ ಚಕಾರವೆತ್ತಿಲ್ಲದಿರುವುದು ದುರ್ದೈವವೇ ಸರಿ. ಸ್ಟ್ಟೂಡಿಯೋ ಬಂದ್, ಎಲ್ಲಿಯೂ ಚಿತ್ರೀಕರಣ ಮಾಡಬಾರದು, ಸಭೆ-ಸಮಾರಂಭಗಳನ್ನು ನಡೆಸಬಾರದು. ಇವೆಲ್ಲಾ ಕಟ್ಟುಪಾಡುಗಳ ನಡುವೆ ಛಾಯಾಗ್ರಾಹಕ ನಲುಗಿ ಹೋಗಿದ್ದಾನೆ. ಡೆಕೋರೇಷನ್, ಷಾಮಿಯಾನ, ವಾದ್ಯ ಸಂಗೀತ, ಎಲ್‍ಇಡಿ ಟಿವಿಗಳು ಯಾವತ್ತಾದರೂ ಮತ್ತೊಮ್ಮೆ ಉಪಯೋಗಕ್ಕೆ ಬರುತ್ತವೆ. ಆದರೆ ಲಕ್ಷಾಂತರ ಬಂಡವಾಳ ಹೂಡಿ ತಂದ ಕ್ಯಾಮರಾಗಳು ಫಂಗಸ್ ಬಂದು ಉಪಯೋಗಕ್ಕೆ ಬಾರದಾಗಿ ಮತ್ತೆ ಲಕ್ಷಾಂತರ ಬಂಡವಾಳ ಹೂಡಬೇಕಾದ ಪರಿಸ್ಥಿತಿ ಉಂಟಾಗುವುದರಿಂದ ಆರ್ಥಿಕವಾಗಿ ಬಲಾಢ್ಯವಿಲ್ಲದವರ ಗತಿ ಏನಾಗಬಹುದು ಎಂಬುದನ್ನು ಊಹಿಸಲೂ ಆಗದಾಗಿದೆ. ಇದನ್ನೇ ನಂಬಿರುವ ಸಾವಿರಾರು ವೃತ್ತಿ ಬಾಂಧವರಿಗೆ ಇದುವರೆವಿಗೂ ಯಾವುದೇ ಪ್ಯಾಕೇಜ್ ಸರ್ಕಾರ ನೀಡಿಲ್ಲ. ಚಿತ್ರರಂಗದ ಕಲಾವಿದರಿಗೆ ಪ್ಯಾಕೇಜ್ ಘೋಷಣೆ ಮಾಡಿದೆ.
ಆದರೆ ಛಾಯಾಗ್ರಾಹಕರು ಸಹ ಕಲಾವಿದರಲ್ಲವೇ? ಛಾಯಾಚಿತ್ರ ತೆಗೆದು ನೆನಪಿನ ಬುತ್ತಿ ಕಟ್ಟಿಕೊಡುತ್ತಿರುವ ಛಾಯಾಗ್ರಾಹಕರನ್ನು ಇಂದು ಸರ್ಕಾರ ಮೂಲೆಗುಂಪು ಮಾಡಲು ಹೊರಟಂತಿದೆ. ಅದೆಷ್ಟೋ ಫೋಟೋಗ್ರಾಫರ್‍ಗಳು ಪತ್ರಿಕಾ ಛಾಯಾಗ್ರಾಹಕರಾಗಿ, ವರದಿಗಾರರಾಗಿ ರಾಜ್ಯಾದ್ಯಂತ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಇದರ ಬಗ್ಗೆ ಅರಿವಿದೆ. ಆದರೆ ಅದೇ ಬಡ ಛಾಯಾಗ್ರಾಹಕರನ್ನು ಸರ್ಕಾರವಾಗಲಿ, ವಿರೋಧ ಪಕ್ಷದವರಾಗಲಿ, ಇಲ್ಲವೆ ಕ್ಷೇತ್ರದ ರಾಜಕಾರಣಿಗಳಾಗಲಿ ಗುರ್ತಿಸದಿರುವುದು ಛಾಯಾಗ್ರಾಹಕರಲ್ಲಿ ನೋವುಂಟು ಮಾಡಿದೆ. ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳದೆ ಛಾಯಾಗ್ರಾಹಕರನ್ನು ಹೀಗೆಯೇ ಕಡೆಗಣಿಸಿದಲ್ಲಿ ಮುಂದೊಂದು ದಿನ ಇಡೀ ರಾಜ್ಯದ ಫೋಟೋ ಮತ್ತು ವೀಡಿಯೋಗ್ರಾಫರ್‍ಗಳು ತಮ್ಮ ನ್ಯಾಯಕ್ಕಾಗಿ ಬೀದಿಗಿಳಿದರೂ ತಪ್ಪಾಗಲಾರದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
