ಮಧುಗಿರಿ :
ಶೈಕ್ಷಣಿಕ ಜಿಲ್ಲೆಯಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ-2021 ತೆಗೆದುಕೊಂಡ 12845 ಪರೀಕ್ಷಾರ್ಥಿಗಳ ಪೈಕಿ 78 ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಎಂ. ರೇವಣಸಿದ್ದಯ್ಯ ರವರು ತಿಳಿಸಿದರು.
ಮಧುಗಿರಿ ತಾಲೂಕಿನಲ್ಲಿ ಒಟ್ಟು 3457 ವಿದ್ಯಾರ್ಥಿಗಳು ಪರೀಕ್ಷೆ ತಗೆದುಕೊಂಡಿದ್ದು ಇವರಲ್ಲಿ ಗಂಡು- 13 ಹೆಣ್ಣು 9 ಸೇರಿದಂತೆ ಒಟ್ಟು 22 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ತಾಲ್ಲೂಕಿನ ಪುರವರ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಪ್ರೌಢಶಾಲೆಯಲ್ಲಿ ಮದುವೆ ದಿಬ್ಬಣದಂತೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಮಾನು ಹಾಕಿ ವಿಶೇಷ ಗಮನ ಸೆಳೆದಿದ್ದಾರೆ.
ಐಡಿಹಳ್ಳಿ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹರೆಡ್ಡಿ ಮತ್ತು ಪಿಡಿಒ ಪ್ರತಿಯೊಬ್ಬ ಪರೀಕ್ಷಾರ್ಥಿಗಳಿಗೂ ಸಿಹಿ ಹಂಚಿ ಪರೀಕ್ಷೆಯಲ್ಲಿ ಯಶಸ್ಸು ಕಾಣಲಿ ಎಂದು ಶುಭ ಕೋರಿದರು.
ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳರವರು ಪಟ್ಟಣದ ಎಂಜಿಎಂ ಪ್ರೌಢಶಾಲೆ ಹಾಗೂ ಇತರೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು. ಪರೀಕ್ಷೆ ಆರಂಭಕ್ಕೂ ಮುನ್ನಾ ಪರೀಕ್ಷಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಪರೀಕ್ಷೆ ಬಗ್ಗೆ ಭಯ ಬೇಡ ಯಶಸ್ವಿಯಾಗಿ ಎದುರಿಸಿ ಎಂದು ಮಾನಸಿಕ ಧೈರ್ಯ ತುಂಬಿದ್ದು ಕಂಡುಬಂತು.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಸಿವಿನಿಂದ ಬಳಬಾರದೆಂಬ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿಸಿಎಂ ಇಲಾಖೆಯ ವತಿಯಿಂದ ಪರೀಕ್ಷಾರ್ಥಿಗಳಿಗೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು ಇದೇ ಸಂಧರ್ಭದಲ್ಲಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಹಾಸ್ಟಲ್ಗೆ ಭೇಟಿ ನೀಡಿ ಉಪಹಾರ ಸವಿದು ಗುಣಮಟ್ಟವನ್ನು ಪರೀಕ್ಷಿಸಿದರು.
ಡಿಡಿಪಿಐ ಎಂ. ರೇವಣಸಿದ್ದಪ್ಪ ಮಾತನಾಡಿ, ಪರೀಕ್ಷಾ ಕೆಲಸದಲ್ಲಿ ತೊಡಗಿಸಿಕೊಂಡ ಪರೀಕ್ಷಾ ಮುಖ್ಯ ಅಧೀಕ್ಷಕರು, ಮುಖ್ಯಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ಹಾಗೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಬ್ಬದ ವಾತಾವರಣದಲ್ಲಿ ಪರೀಕ್ಷೆ ಬರೆದರು ಎಂದು ತಿಳಿಸಿದರು.
ಪರೀಕ್ಷಾರ್ಥಿಗಳಿಗೆ ರೋಟರಿ ಸಂಸ್ಥೆ ವತಿಯಿಂದ ಮಾಸ್ಕ್ಗಳನ್ನು ಉಚಿತವಾಗಿ ನೀಡಿದ್ದು, ಕೆ.ಎನ್.ಆರ್ ಮತ್ತು ಆರ್.ಆರ್. ಅಭಿಮಾನಿ ಬಳಗದ ವತಿಯಿಂದ ಪ್ರತಿಯೊಬ್ಬ ಪರೀಕ್ಷಾರ್ಥಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಈ ಪರೀಕ್ಷೆ ಯಶಸ್ವಿ ಆಗಲು ತಾಲ್ಲೂಕು ಆಡಳಿತ ಸ್ಪಂದಿಸಿದ ಬಗ್ಗೆ ಸ್ಮರಿಸಿದರು.
ಅಂಗನವಾಡಿ ಮತ್ತು ಅಶಾ ಕಾರ್ಯಕರ್ತೆಯರು, ಪೊಲೀಸ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು ಪರೀಕ್ಷಾ ಕೆಲಸ ತೊಡಗಿಸಿಕೊಂಡಿದ್ದು ಕಂಡುಬಂತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
