ಮಧುಗಿರಿ : ಸಾರ್ವಜನಿಕ ಆಸ್ಪತ್ರೆಗೆ ಆಮ್ಲಜನಕ ಘಟಕ ಮಂಜೂರು!

 ಮಧುಗಿರಿ : 

     ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ 500 ಲೀಟರ್ ಸಾಮಥ್ರ್ಯದ ಆಮ್ಲಜನಕ ಘಟಕವನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆಸಿ.ಮಾಧುಸ್ವಾಮಿ ತಿಳಿಸಿದರು.

      ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೊರೋನಾ ವೈರಸ್ ನಿಯಂತ್ರಣದ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೋನಾ ಎರಡನೆ ಅಲೆಯಿಂದಾಗಿ ಸಾಕಷ್ಟು ರೋಗಿಗಳಿಗೆ ಸಕಾಲಕ್ಕೆ ಅಮ್ಲಜನಕ ದೊರಕದೆ ಇರುವುದನ್ನು ಮನಗಂಡ ಸರಕಾರ, ಈ ಘಟಕವನ್ನು ಮಂಜೂರು ಮಾಡಿದೆ. ಕೊರೋನಾ 3ನೆ ಅಲೆ ಬರುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕಿನ ಪಿ.ಎಚ್.ಸಿ ಕೇಂದ್ರಗಳಲ್ಲಿ ಆಮ್ಲಜನಕದ ಪೈಪ್‍ಲೈನ್ ಅಳವಡಿಸಿ, ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಹೊಸದಾಗಿ ಬಂದಿರುವ ಸಂಚಾರಿ ಲ್ಯಾಬ್ ಮುಂದಿನ ದಿನಗಳಲ್ಲಿ ಮಧುಗಿರಿಗೆ ಆಗಮಿಸಲಿದ್ದು, ರೋಗದ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಿಸಿ ಕೂಡಲೆ ವರದಿ ನೀಡುವ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಇನ್ನೂ ಸೋಂಕಿತರು ಇದ್ದರೆ, ಅಕ್ಕ ಪಕ್ಕದ ಮನೆಗಳವರನ್ನು ಪರೀಕ್ಷೆಗೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

      ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾದರೆ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ನಡೆಸಿ ಲಾಕ್‍ಡೌನ್ ಸಡಿಲಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸಾರ್ವಜನಿಕ ಆಸ್ಪತ್ರೆಗಳಿಗೆ ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು ಮಂಜೂರು ಮಾಡುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ದಾನಿಗಳು ಮುಂದೆ ಬಂದು ಯಂತ್ರಗಳನ್ನು ನೀಡಿದರೆ, ಮಧುಗಿರಿ ಆಸ್ಪತ್ರೆಗೂ ಕೂಡ ಅಳವಡಿಸಲಾಗುವುದು. ಮಧುಗಿರಿ – ಸಿರಾ ರಾಷ್ಟ್ರೀಯ ಹೆದ್ದಾರಿ 234 ನ್ನು ಅಭಿವೃದ್ದಿ ಪಡಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಣ ಮಂಜೂರು ಮಾಡಿರುವುದಾಗಿ ತಿಳಿಸಿದರು.

      ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹಾಗೂ ಶಾಸಕ ಎಂ.ವಿ.ವೀರಭದ್ರಯ್ಯನವರು ತಮ್ಮ ಅನುದಾನದಲ್ಲಿ ತಲಾ ಒಂದೊಂದು ಸುಸಜ್ಜಿತ ಆ್ಯಂಬ್ಯುಲೆನ್ಸ್ ವಾಹನಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಜೂನ್ 1 ರಿಂದ ಸಿದ್ದಾಪುರದ ಕೆರೆಗೆ 15 ದಿನಗಳ ಕಾಲ ಹೇಮಾವತಿ ನದಿಯ ನೀರು ಪೈಪ್ ಲೈನ್ ಮೂಲಕ ಹರಿಯಲಿದೆ ಎಂದರು.

     ಶಾಸಕ ಎಂ.ವಿ ವೀರಭದ್ರಯ್ಯ ಮಾತನಾಡಿ, ಸಿದ್ದಾಪುರ ಕೆರೆಗೆ ಹೇಮಾವತಿ ನೀರನ್ನು ಕಳೆದ ಬಾರಿ ಹರಿಸಿದ್ದರಿಂದ ಪಟ್ಟಣದಲ್ಲಿ ನೀರಿನ ಅಭಾವ ಕಂಡು ಬಂದಿಲ್ಲ. ಈ ವರ್ಷವು ಪೂರ್ಣ ಪ್ರಮಾಣದಲ್ಲಿ ಹರಿಸಬೇಕು. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮಧುಗಿರಿಗೆ ನೀರು ಹರಿದಿದೆ ಎಂದರು. 

     ಶಾಸಕ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಸಿ.ಇ.ಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಡಿ.ಎಚ್.ಓ ಡಾ.ನಾಗೇಂದ್ರಪ್ಪ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಸೀಲ್ಧಾರ್ ವೈ.ರವಿ, ತಾ.ಪಂ. ಇ.ಓ. ದೊಡ್ಡಸಿದ್ದಯ್ಯ, ಟಿ.ಎಚ್.ಓ ಡಾ.ರಮೇಶ್ ಬಾಬು, ಡಾ.ಗಂಗಾಧರ್, ಸಿ.ಪಿ.ಐ. ಎಂ.ಎಸ್.ಸರ್ದಾರ್, ಮುಖ್ಯಾಧಿಕಾರಿ ಅಮರನಾರಾಯಣ್, ಸಿ.ಡಿ.ಪಿ.ಓ. ಅನಿತಾ, ಅರೋಗ್ಯ ಇಲಾಖೆ ಶಿರಸ್ತೆದಾರ್ ಗಣೇಶ್, ಸಿದ್ದರಾಜು, ಶಿವರಾಮು, ಸುನೀಲ್, ಶರಣಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link