ತಿಪಟೂರು :
44 ರಿಂದ 18 ವರ್ಷದ ವಯೋಮಾನದವರಿಗೆ ಕೊರೊನಾ ವ್ಯಾಕ್ಸಿನ್ ಕೊಡುತ್ತೇವೆಂದು ಮೆಸೆಜ್ ಮತ್ತು ಕರೆಮಾಡಿ ತಿಳಿಸಿ, ಆಸ್ಪತ್ರೆಗೆ ಹೋದಾಗ ಟೋಕನ್ ವಿತರಿಸಿ ಕೊನೆಗೆ ವ್ಯಾಕ್ಸಿನ್ ಇಲ್ಲವೆಂದು ಹೇಳಿದ ಘಟನೆ ತಿಪಟೂರಿನ ಗಾಂಧಿನಗರ ಪ್ರಾ.ಆ.ಕೇಂದ್ರದಲ್ಲಿ ನಡೆದಿದೆ. ವ್ಯಾಕ್ಸಿನ್ ಸಿಗದವರು ಟಿಹೆಚ್‍ಓಗೆ ದಿಗ್ಭಂದನ ಹಾಕಿದ್ದು, ಆರಕ್ಷಕರು ಮದ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಗಾಂಧಿನಗರದ ಪ್ರಾ.ಆ.ಕೇಂದ್ರದಲ್ಲಿ ಎಂದಿನಂತೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಬರುತ್ತಿದ್ದರು. ಆದರೆ ಇಂದು ಮಾತ್ರ 44 ರಿಂದ 18 ವರ್ಷದ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ಹಾಕಲಾಗುತ್ತದೆಂದು ಕರೆಮಾಡಿ ಮತ್ತು ಮೆಸೆಜ್ ಮೂಲಕ ಮಾಹಿತಿ ನೀಡಿದ್ದು, ಸುಮಾರು 50 ಜನರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಟೋಕನ್ ಸಹ ನೀಡಿ, ಇನ್ನೇನು ವ್ಯಾಕ್ಸಿನ್ ಹಾಕಬೇಕು ಎನ್ನುವ ಸಂದರ್ಭದಲ್ಲಿ 44 ರಿಂದ 18 ವರ್ಷದವರಿಗೆ ವ್ಯಾಕ್ಸಿನ್ ಹಾಕುವುದಿಲ್ಲವೆಂದು ತಿಳಿಸಿದ್ದಾರೆ.
ಬೆಳಗ್ಗೆಯಿಂದ ತಮ್ಮ ಎಲ್ಲಾ ಕೆಲಸ-ಕಾರ್ಯಗಳನ್ನು ಬಿಟ್ಟು ಟೋಕನ್ ತೆಗೆದುಕೊಂಡು ನಿಂತಿದ್ದ ಜನರು ಮಾಡುವ ಕೆಲಸಬಿಟ್ಟು ಸುಮ್ಮನೆ ನಿಂತು ಕಾಲಹರಣ ಮಾಡಿಸಿದ್ದಾರಲ್ಲ ಎಂದು ಕೋಪಗೊಂಡು ಟಿಹೆಚ್‍ಓ ಬಂದ ತಕ್ಷಣ ವಾಗ್ವಾದ ನಡೆಸಿ ಲಸಿಕೆ ಇಲ್ಲವೆಂದ ಮೇಲೆ ಟೋಕನ್ ಏಕೆ ನೀಡಿದಿರಿ, ನಿಮಗೆ ಎಷ್ಟು ಲಸಿಕೆ ಬರುತ್ತದೆ, ಯಾವ ವಯೋಮಾನದವರಿಗೆ ನೀಡಬೇಂದು ತಿಳಿಸಿದ್ದರು ನಿಮ್ಮ ಸಿಬ್ಬಂದಿ, ಏಕೆ ಟೋಕನ್ ವಿತರಿಸಿದರು, ಎಂದು ಪ್ರಶ್ನೆಗಳ ಮಳೆಯನ್ನೆ ಸುರಿಸಿದರು. ಸೂಕ್ತ ಉತ್ತರ ಕೊಡಲು ಸಾಧ್ಯವಾಗದ ಟಿಹೆಚ್‍ಓಗೆ ದಿಗ್ಭಂದನ ಹಾಕಿ, ನಮಗೆ ಲಸಿಕೆ ಕೊಡುವವರೆಗೂ ನಿಮ್ಮನ್ನು ಬಿಡುವುದಿಲ್ಲವೆಂದು ಸಾರ್ವಜನಿಕರು ತರಾಟೆ ತೆಗೆದುಕೊಂಡರು.
ನಂತರ ಮಾತನಾಡಿದ ಟಿಹೆಚ್‍ಓ ನಮ್ಮಿಂದ ತಪ್ಪಾಗಿದೆ. ಈಗ ಯಾರು ಯಾರಿಗೆ ಟೋಕನ್ ನೀಡಲಾಗಿದೆ ಅಂತವರ ಹೆಸರು ಮತ್ತು ಪೋನ್ ನಂಬರ್ ಕೊಡಿ ಅವರಿಗೆ 44 ರಿಂದ 18 ವರ್ಷದ ಲಸಿಕೆ ಬಂದಾಗ ಆದ್ಯತೆಯ ಮೇಲೆ ಮೊದಲಿಗೆ ಲಸಿಕೆ ಹಾಕಲಾಗುವೆಂದು ತಿಳಿಸಿದರು ಮತ್ತು ಇಂದು ಲಸಿಕೆ ತೆಗೆದುಕೊಳ್ಳಲು ಬಂದವರು ಮಾತ್ರ ಹೆಸರು ಮತ್ತು ಮೊಬೈಲ್ ನಂಬರ್ ಕೊಡಿ ಎಂದು ವಿನಂತಿಸಿದಾಗ ವಾತಾವರಣ ಸ್ವಲ್ಪ ತಣ್ಣಗಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
