ಹುಳಿಯಾರು
ಹಂದನಕೆರೆ ಹೋಬಳಿ ನರುವಗಲ್ಲು ಬಳಿ ಈಚೆಗೆ ಸುರಿದ ಮಳೆಯಿಂದಾಗಿ ರಸ್ತೆ ಮಧ್ಯದಲ್ಲಿ ಅಲ್ಲಲ್ಲಿ ಭೂಕುಸಿತವಾಗಿದ್ದು, ಅದನ್ನು ಇನ್ನೂ ದುರಸ್ತಿಪಡಿಸಿಲ್ಲ. ಇದರಿಂದ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ತೊಡಕಾಗಿದ್ದು, ಜನರಿಗೆ ತೀವ್ರ ತೊಂದರೆ ಉಂಟಾಗಿದೆ.
ನರುವಗಲ್ಲಿನಿಂದ ಹುಳಿಯಾರು ತಿಪಟೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಅಲುವಾಗಿ ಗೊಲ್ಲರಹಟ್ಟಿ ಮಾರ್ಗವಾಗಿ ಗೋಪಾಲಪುರಕ್ಕೆ ಇತ್ತೀಚೆಗಷ್ಟೆ ರಸ್ತೆ ಮಾಡಲಾಗಿತ್ತು. ರಸ್ತೆ ಮಾಡುವಾಗ ಸೇತುವೆ ಮಾಡುವ ಜಾಗದಲ್ಲಿ ಸೇತುವೆ ಮಾಡದೆ ನಿರ್ಲಕ್ಷ್ಯಿಸಲಾಗಿತ್ತು. ಅಲ್ಲದೆ ರಸ್ತೆಗೆ ಹೊಸ ಮಣ್ಣು ಹೊಡೆಸಿದಾಗ ಬಿಗಿಯಾಗಿ ಮಣ್ಣು ಕೂರುವಂತೆ ರೋಡ್ ರೋಲರ್ ಓಡಾಡಿಸದೆ ಏಕಾಏಕಿ ಡಾಂಬರ್ ಹಾಕಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯರು ವಿರೋಧ ಮಾಡಲಾಗಿದ್ದರೂ ಸಹ ಸ್ಪಂಧಿಸದೆ ರಸ್ತೆ ಕಾಮಗಾರಿ ಮಾಡಿ ಮುಗಿಸಿದ್ದಾರೆ. ಪರಿಣಾಮ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಎರಡೂ ಕಡೆಯಲ್ಲಂತೂ ಭೂ ಕುಸಿತದಿಂದ ರಸ್ತೆ 2 ಭಾಗವಾಗಿತ್ತು.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರೂ ಸಹ ದುರಸ್ತಿ ಮಾಡುವುದಿರಲಿ ಕನಿಷ್ಟ ಪಕ್ಷ ಸ್ಥಳ ವೀಕ್ಷಣೆ ಮಾಡದೆ ನಿರ್ಲಕ್ಷ್ಯಸಿದ್ದಾರೆ. ಪರಿಣಾಮ ಮತ್ತೆ ಮಳೆಗೆ ಅಲ್ಲಲ್ಲಿ ಭೂಕುಸಿತವಾಗುತ್ತಿದ್ದು ಈ ರಸ್ತೆಯಲ್ಲಿ ವಾಹನ ಸವಾರರು ಓಡಾಡಲು ಭಯಪಡುವಂತ್ತಾಗಿದೆ. ಅಲ್ಲದೆ ಇತ್ತೀಚೆಗಷ್ಟೆ ಹಾಲಿನ ವಾಹನ ಉರುಳಿ ಬಿದ್ದಿತ್ತು.
ಈ ರಸ್ತೆ ಮೂಲಕ ಗೊಲ್ಲರಹಟ್ಟಿ ಸೇರಿದಂತೆ ಅನೇಕ ಹಳ್ಳಿಗಳ ಜನರು ತಿಪಟೂರು ರಸ್ತೆಗೂ, ಚಿ.ನಾ.ಹಳ್ಳಿ ರಸ್ತೆಗೂ ಓಡಾಡುತ್ತಾರೆ. ಶಾಲಾ ಕಾಲೇಜಿಗೆ ನಿತ್ಯ ವಿದ್ಯಾರ್ಥಿಗಳು, ತಿಂಗಳಿಗೊಮ್ಮೆ ಪಡಿತರ ತರಲು ಮಹಿಳೆಯರು ಓಡಾಡುತ್ತಾರೆ. ಆದರೆ ಎಲ್ಲೆಂದರಲ್ಲಿ ಭೂಕುಸಿತವಾಗುತ್ತಿರುವುದರಿಂದ ಈ ಮಾರ್ಗದಲ್ಲಿ ಆಟೋಗಳೂ ಸಹ ಬರಲು ಹೆದರುವುದರಿಂದ ಇಲ್ಲಿನ ಜನ ನಡೆಯುವುದು ಅನಿವಾರ್ಯವಾಗಿದೆ.
ಅಧಿಕಾರಿಗಳು ಇನ್ನಾದರೂ ಸ್ಥಳಕ್ಕೆ ಬೇಟಿ ನೀಡಿ ಭೂಕುಸಿತಕ್ಕೆ ಕಾರಣ ತಿಳಿದು ಪುನಃ ಭೂಕುಸಿತ ಆಗದಂತೆ ಗುಣಮಟ್ಟದ ರಸ್ತೆ ಮಾಡಿಸಿ ಹಳ್ಳಿಗಳ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
