ಶಿರಾ : ವಿರೋಧ ಪಕ್ಷಗಳ ವಿರುದ್ಧ ಶಾಸಕದ್ವಯರ ಟೀಕಾಸ್ತ್ರ!!

 ಶಿರಾ:

      ಇಡೀ ದೇಶವೆ ಕೋವಿಡ್‍ನಿಂದ ತಲ್ಲಣಿಸುತ್ತಿದ್ದು ಇಂತಹ ಕ್ಲಿಷ್ಟಕರವಾದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಇದು ತಮ್ಮದೆ ಕರ್ತವ್ಯವೆಂದು ಕೈಜೋಡಿಸಬೇಕಿದೆ ಆದರೆ ಶಿರಾ ಕ್ಷೇತ್ರದಲ್ಲಿ ವಿರೋಧ ಪಕ್ಷಗಳ ಕೆಲವರು ಕೋವಿಡ್ ನಿರ್ವಹಣೆಗೆ ಕೈಜೋಡಿಸಿ ಸಲಹೆ ಸೂಚನೆಗಳನ್ನು ನೀಡದೆ ಟೀಕೆ ಮಾಡುತ್ತಾ ಕೂರುವುದು ಸರಿಯಲ್ಲ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ತಿಳಿಸಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ಎರಡನೇ ಅಲೆಯು ಆರಂಭಗೊಂಡಾಗಿನಿಂದಲೂ ಇಡೀ ತಾಲ್ಲೂಕು ಆಡಳಿತ ನಮ್ಮ ಜೊತೆ ಕೈಜೋಡಿಸಿದೆ. ದಾನಿಗಳ ಸಹಕಾರದಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಇದ್ದ ಆಮ್ಲಜಕದ ಕೊರತೆಯನ್ನು ನೀಗಿಸಲಾಗಿದೆ. ಕೋವಿಡ್ ಸೆಂಟರ್‍ಗಳಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರದಿಂದ ಹಿಡಿದು ಉತ್ತಮ ಚಿಕಿತ್ಸೆಯೂ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.

      ಸೋಂಕಿತರು ಆರಂಭದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಾಗದೆ ಹೋಂ ಐಸೋಲೇಷನ್ ಆಗಿ ನಂತರ ಉಸಿರಾಟಕ್ಕೆ ತೊಂದರೆಯಾಗಿ ಅತ್ಯಂತ ಜೀವ ಭಯದಿಂದ ಆಸ್ಪತ್ರೆಗೆ ಬರುವ ಪ್ರಕರಣಗಳಿಂದ ಮಾತ್ರ ಕೆಲವರು ಸಾವನ್ನಪ್ಪಿದ್ದಾರೆ, ಆದರೆ ಮಾಜಿ ಸಚಿವರು ಸಾವಿನ ಪ್ರಮಾಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

      ಕೋವಿಡ್ 2ನೇ ಅಲೆ ಆರಂಭಗೊಂಡ ನಂತರ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಐದು ತುರ್ತು ಸಭೆಗಳನ್ನು ಕರೆದು ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಪರಿಣಾಮ ಇದೀಗ ಸೋಂಕಿನ ಪ್ರಮಾಣ ಇಳಿಕೆಯಾಗಿದೆ ಎಂದರು.

      ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ ಸೋಂಕಿತರ ಬಗ್ಗೆ ಜನಪ್ರತಿನಿಧಿಗಳಾದ ನಮಗೂ ಕಾಳಜಿ ಇದೆ. ಉಪ ಚುನಾವಣೆ ಹಾಗೂ ಎಂಎಲ್‍ಸಿ ಚುನಾವಣೆಗಳ ನಂತರ ನಾವುಗಳು ಕ್ರಿಯಾಶೀಲತೆಯಿಂದ ಕೋವಿಡ್ ನಿರ್ವಹಣೆಗೆ ಕ್ರಮ ಕೈಗೊಂಡಿದ್ದರೂ ಜಿಲ್ಲಾ ಮಟ್ಟದ ವಿರೋಧ ಪಕ್ಷಗಳ ಕೆಲ ಪ್ರಮುಖರು ಟೀಕೆ ಮಾಡುತ್ತಿದ್ದು ಇದರಲ್ಲಿ ಅರ್ಥವೇ ಇಲ್ಲ, ನಮ್ಮ ಕೈಲಾದ ಮಟ್ಟಿಗೆ ನಾವು ಸೋಂಕಿತರ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ ಎಂದರು.

      ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ ವಿರೋಧ ಪಕ್ಷಗಳ ಕೆಲ ಪ್ರಮುಖರು ಕೋವಿಡ್ ನಿರ್ವಹಣೆಯ ವಿರುದ್ಧ ಬರೀ ಟೀಕೆಗಳಲ್ಲಿಯೇ ಮುಳುಗಿದ್ದಾರೆ. ವ್ಯಾಕ್ಸಿನ್ ಬಗ್ಗೆ ವಿರೋಧ ಪಕ್ಷಗಳು ಅಪ ಪ್ರಚಾರ ಮಾಡಿದ ಪರಿಣಾಮದಿಂದ ಇಂದು ಕೋವಿಡ್‍ನಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು.

      ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ ತಾಲ್ಲೂಕಿನ ಸಂತ್ರಸ್ಥರಿಗೆ ಹಾಗೂ ಕೋವಿಡ್ ವಾರಿಯರ್ಸ್‍ಗಳ ಸಂಕಷ್ಟಕ್ಕೆ ಸ್ಪಂದಿಸಲು ನಾನು ಸಹ ಇಬ್ಬರು ಸ್ಥಳೀಯ ಶಾಸಕರು, ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರು ನಾವು ನಾಲ್ವರು ಕೂಡ ನಾಲ್ಕು ದಿಕ್ಕುಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ತಾಲ್ಲೂಕಿನ ಆಡಳಿತದ ಬಗ್ಗೆ ನಿಂದಿಸುವ ವಿರೋಧ ಪಕ್ಷಗಳ ದುರೀಣರು ಮೊದಲು ಕೋವಿಡ್ ನಿರ್ವಹಣೆಗೆ ನಮ್ಮ ಜೊತೆ ಕೈಜೋಡಿಸಲಿ ಎಂದರು.

      ಸುದ್ದಿಗೋಷ್ಟಿಯಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷ ವಿಜಯರಾಜು, ಗ್ರಾ.ಪಂ.ಅಧ್ಯಕ್ಷ ರಂಗಸ್ವಾಮಿ, ತರೂರು ಬಸವರಾಜು, ಮುದಿಮಡು ಮಂಜುನಾಥ್, ಕೃಷ್ಣಮೂರ್ತಿ, ಸುರೇಶ್‍ಬಾಬು, ಶಿವಕುಮಾರ್, ನಂದಿವಾಚ್ ಉಮೇಶ್, ಶ್ಯಾಮ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link