ಕೊರೊನಾ, ಲಾಕ್‍ಡೌನ್, ಫ್ರೀಡೌನ್ ನಡುವೆ ಪರೀಕ್ಷೆ ಗೊಂದಲ!

 ತುಮಕೂರು : 

      ಕೊರೊನಾ ಲಾಕ್‍ಡೌನ್ ನಡುವೆಯೇ ದಿಢೀರನೇ ದ್ವಿತೀಯ ಪಿಯುಸಿ ಪರೀಕ್ಷೆ ರದ್ದತಿ ನಿರ್ಧಾರ ಪ್ರಕಟಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎರಡು ದಿನಕ್ಕೆ ಸೀಮಿತಗೊಳಿಸಿರುವ ಶಿಕ್ಷಣ ಸಚಿವರ ನಡೆ, ಆ ಸಂಬಂಧ ವ್ಯಕ್ತವಾಗುತ್ತಿರುವ ಪರ-ವಿರೋಧದ ಅಭಿಪ್ರಾಯಗಳು ಇಡೀ ಪರೀಕ್ಷಾ ವ್ಯವಸ್ಥೆ ಬಗ್ಗೆಯೇ ವಿದ್ಯಾರ್ಥಿಗಳು, ಪೋಷಕರಲ್ಲಿ ಗೊಂದಲ ಮೂಡಿಸಿದೆ.

      ಪರೀಕ್ಷೆ ರದ್ದುಗೊಳಿಸಿದ ಬೆನ್ನಿಗೆ ಸರಕಾರ ಹಂತ ಹಂತವಾಗಿ ಲಾಕ್‍ಡೌನ್ ತೆರವುಗೊಳಿಸುವ ಚಿಂತನೆ ನಡೆಸುತ್ತಿರುವುದು, ಇಂತಹ ಸಂಪತ್ತಿಗೆ ದ್ವಿತೀಯ ಪರೀಕ್ಷೆ ರದ್ದತಿ ಮಾಡುವ ಅವಸರವೇನಿತ್ತು. ಕಳೆದ ಬಾರಿ ಕೋವಿಡ್ ನಡುವೆಯೇ ಸೂಕ್ತ ಮುಂಜಾಗ್ರತ ಕ್ರಮ ಕೈಗೊಂಡು ಕರ್ನಾಟಕ ದೇಶಕ್ಕೆ ಮಾದರಿಯೆಂಬಂತೆ ಪರೀಕ್ಷೆ ನಡೆಸಿರಲಿಲ್ಲವೇ, ಈ ಬಾರಿ ಮತ್ತಷ್ಟು ಹೆಚ್ಚಿನ ಮುಂಜಾಗ್ರತಾ ಕ್ರಮಕೈಗೊಂಡು ಇನ್ನಷ್ಟು ಸಮಯ ಕಾದು ಪರೀಕ್ಷೆ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಕಾರ್ಯ ಆಗಬೇಕಿತ್ತು ಎಂಬ ಅಭಿಪ್ರಾಯಗಳು ಶೈಕ್ಷಣಿಕ ವಲಯದ ಪ್ರಮುಖರು, ಚಿಂತಕರಿಂದ ಕೇಳಿಬರುತ್ತಿದೆ.

      ಆದರೆ ಸರಕಾರ ಕೋವಿಡ್ ಮೂರನೇ ಅಲೆ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತದೆಂಬ ಕಾರಣ ಮುಂದು ಮಾಡಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾತ್ರ ರದ್ದು ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು 2 ದಿನಗಳಿಗೆ ಸೀಮಿತಗೊಳಿಸಿ ನಡೆಸಲು ಮುಂದಾಗಿರುವುದಕ್ಕೆ ಶೈಕ್ಷಣಿಕ ತಜ್ಞರಿಂದಲೇ ಅಸಮಾಧಾನ ವ್ಯಕ್ತವಾಗಿದೆ. 18 ವರ್ಷದ ಪಿಯು ವಿದ್ಯಾರ್ಥಿಗಳಿಗೆ ಕೋವಿಡ್ ಬರುತ್ತದೆಯೆಂದು ಪರೀಕ್ಷೆ ರದ್ದುಮಾಡಿದರೆ, ಅವರಿಗಿಂತ ಕಿರಿಯವರಾದ 16 ವರ್ಷದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಬರುವುದಿಲ್ಲವೇ ಎಂಬ ಪ್ರಶ್ನೆಗಳು ಎದುರಾಗಿವೆ. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಎರಡಕ್ಕೂ ಪರೀಕ್ಷೆ ನಡೆಸುವ ಅಗತ್ಯತೆ ಇತ್ತು. ಏಕೆಂದರೆ ಎಸ್‍ಡಿಎ, ಪೊಲೀಸ್ ಕಾನ್ಸ್ಟೇಬಲ್, ಸೇನಾಪಡೆ ಸೇರಿ ಕ್ಲರ್ಕ್ ಹುದ್ದೆಗಳಿಗೆ ಹಾಗೂ ವೃತ್ತಿಪರ ಶಿಕ್ಷಣಕ್ಕೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಸ್ವ ಪರಿಶ್ರಮದಿಂದ ಸಾಧನೆ ಮಾಡಿ ಪಡೆಯುವ ಅಂಕ ಪ್ರಮುಖ ಮಾನದಂಡವಾಗುತ್ತದೆ.

      ರದ್ದತಿ ಬದಲು ಮುಂದೂಡಿಕೆ ಮಾಡಬೇಕಿತ್ತು:

      ಶಿಕ್ಷಣ ಸಚಿವರು ಅಧಿಕಾರಿಗಳ ಅಭಿಪ್ರಾಯ ಕೇಳಿ ರದ್ದು ಮಾಡುವ ಅವಸರದ ನಿರ್ಣಯ ಕೈಗೊಳ್ಳುವ ಅಗತ್ಯವಿರಲಿಲ್ಲ. ಕೋವಿಡ್ ತಗ್ಗಿದ ಮೇಲೆಯೇ ಪರೀಕ್ಷೆ ನಡೆಸಬಹುದಿತ್ತು. ಶಿಕ್ಷಣ ತಜ್ಞರು, ಆರೋಗ್ಯ ತಜ್ಞರು ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರಮುಖರ ಅಭಿಪ್ರಾಯ ಆಧರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಯೋಚಿತವಾದ ನಿರ್ಣಯ ಕೈಗೊಳ್ಳಬೇಕಿತ್ತು. ಮುಂದೂಡಿಕೆ ಮಾಡುವ ಬದಲು ರದ್ದತಿಯೇ ಪರಿಹಾರವೆಂದು ಭಾವಿಸಿದ್ದು ಸಮಂಜಸವಲ್ಲ. ಮಕ್ಕಳ ಆರೋಗ್ಯ, ಭವಿಷ್ಯ ಎರಡೂ ಮುಖ್ಯವಾದ್ದರಿಂದ ಶಿಕ್ಷಣ ಇಲಾಖೆ ಸಮಾನಾಂತರ ಮಾರ್ಗದಲ್ಲಿ ಕೇಂದ್ರ ಸಿಬಿಎಸ್‍ಸಿ ಪರೀಕ್ಷೆ ರದ್ದುಪಡಿಸಿತೆಂದು ಅದೇ ಮಾದರಿಯಲ್ಲಿ ರಾಜ್ಯ ಸರಕಾರವೂ ತೀರ್ಮಾನ ಕೈಗೊಳ್ಳುವುದು ಉಚಿತವಲ್ಲ. ಅಲ್ಲಿ 3 ತಿಂಗಳಿಗೊಮ್ಮೆ ಪರೀಕ್ಷೆ ಮೌಲ್ಯಮಾಪನವಾಗುತ್ತದೆ. ಆದರೆ ರಾಜ್ಯ ಪಠ್ಯಕ್ರಮದಲ್ಲಿ ವರ್ಷಕ್ಕೊಮ್ಮೆ ಪರೀಕ್ಷೆ ನಡೆಸಿ ಅದರ ಫಲಿತಾಂಶದ ಮೇಲೆಯೇ ವಿದ್ಯಾರ್ಥಿ ಸಾಧನೆ ಅಳೆಯಲಾಗುತ್ತದೆ. ಈ ಅಂಶವನ್ನು ಇಲಾಖೆ ಗಂಭೀರ ಪರಾಮರ್ಶೆಗೊಳಪಡಿಸಿ ನಂತರ ನಿರ್ಧಾರ ಪ್ರಕಟಿಸಬೇಕಿತ್ತು ಎಂದು ರಾಜ್ಯ ಸರಕಾರದ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಎಂ.ಆರ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ದ್ವಿತೀಯ ಪಿಯುಸಿಗೂ ಪರೀಕ್ಷೆ ನಡೆಸುವುದು ಸೂಕ್ತ:

      ಪ್ರಸಕ್ತ ತೆಗೆದುಕೊಂಡಿರುವ ಪ್ರಥಮ ಪಿಯುಸಿ ಅಂಕವನ್ನು ಮಾನದಂಡವಾಗಿಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವ ಸರಕಾರದ ನಿರ್ಧಾರ ಅಸಮಂಜಸವೆಂಬ ಅಭಿಪ್ರಾಯ ಕೇಳಿಬಂದಿವೆ. ಬೆಂಗಳೂರಿನ ಆಕ್ಸ್‍ಫರ್ಡ್ ಕಾಲೇಜಿನ ಶಿಕ್ಷಣ ತಜ್ಞ ಡಾ.ಬಿ.ಆರ್.ಸುಪ್ರೀತ್ ಅವರು ಹೇಳುವಂತೆ ಬಹಳಷ್ಟು ವಿದ್ಯಾರ್ಥಿಗಳು ಪ್ರಥಮಪಿಯುಸಿಯನ್ನು ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಇದರಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾದವರೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಉದಾಹರಣೆಇದೆ. ಹಾಗಾಗಿ ಎಸ್ಸೆಸ್ಸೆಲ್ಸಿ ಮಾದರಿಯಲ್ಲಿಯೇ ಪಿಯುಸಿಗೂ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸುತ್ತಾರೆ.

ಬಹು ಆಯ್ಕೆಯ ಮಾದರಿಯಲ್ಲಿ 2 ದಿನ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆ:

      ಪಿಯುಸಿ ರದ್ದುಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸರಳವಾಗಿ ನಡೆಸುವುದಾಗಿ ಘೋಷಿಸಿರುವ ಸರಕಾರ, 6 ದಿನದ ಬದಲಾಗಿ 2 ದಿನಕ್ಕೆ ಇಳಿಸಿದ್ದು, ವಿಜ್ಞಾನ ಗಣಿತ, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ 120 ಅಂಕಗಳ ಒಂದು ಪತ್ರಿಕೆ, ಪ್ರಥಮ ದ್ವಿತೀಯ, ತೃತೀಯ ಭಾಷೆಗೆ ಸಂಬಂಧಿಸಿದಂತೆ 120 ಅಂಕಗಳ ಒಂದು ಪತ್ರಿಕೆಯ ಪರೀಕ್ಷೆ ನಡೆಸುತ್ತಿದ್ದು, ಪ್ರತೀ ವಿಷಯಕ್ಕೆ 40 ಅಂಕದ ಬಹುಆಯ್ಕೆಯ ಓಎಂಆರ್ ಶಿಟ್ ಮಾಡದರಿಯ ಉತ್ತರ ಪತ್ರಿಕೆ ನೀಡಿ, ಗಳಿಸುವ ಅಂಕದ ಆಧಾರದಲ್ಲಿ ಎ, ಬಿ.ಸಿ.ಗ್ರೇಡ್ ಹಾಗೂ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಕನಿಷ್ಠ ಅಂಕ ನೀಡಿ ಉತ್ತೀರ್ಣ, ಕೋವಿಡ್‍ನಿಂದ ಗೈರಾದರೆ ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿದೆ. ಸರಕಾರದ ಈ ನಿರ್ಧಾರದಿಂದ ಸಾಮಾನ್ಯ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿದ್ದ ಶಿಕ್ಷಣ ಇಲಾಖೆ ಬಹುಆಯ್ಕೆ ಪ್ರಶ್ನೆಪತ್ರಿಕೆ ಮಾದರಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ. ಪರೀಕ್ಷೆಗೆ ಅಟೆಂಡ್ ಆದರೆ ಸಾಕು ಎಲ್ಲರನ್ನು ಪಾಸು ಮಾಡುತ್ತಾರೆಂಬ ಧೋರಣೆಯು, ಬಹು ಆಯ್ಕೆಯ ಸರಳ ಪರೀಕ್ಷೆಯು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಮಹತ್ವವನ್ನು ಕಡಿಮೆ ಮಾಡಲಿದೆ ಎಂಬ ಚರ್ಚೆಗಳಿಗೂ ಆಸ್ಪದವಾಗಿದೆ.

      ಮಕ್ಕಳ ಮೌಲ್ಯೀಕರಣ ನೋಡಲು ಪೋಷಕರು ಕಾತರರಾಗಿರುತ್ತಾರೆ. ಅದಕ್ಕೆ ಪರೀಕ್ಷೆಯೇ ಮಾನದಂಡ. ಹಾಗಾಗಿ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ, ಪಿಯುಸಿ ಎರಡು ಪರೀಕ್ಷೆ ನಡೆಸುವುದು ಅವಶ್ಯಕ. ಸಿ, ಡಿ ಗ್ರೂಪ್ ಹುದ್ದೆಗಳ ನೇಮಕದ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಎರಡು ಪರೀಕ್ಷೆಗಳ ಅಂಕಗಳೇ ಮಾನದಂಡ. ಈ ಬಗ್ಗೆ ಹಿಂದೆಯೇ ಶಿಕ್ಷಣ ಸಚಿವರ ಗಮನಕ್ಕೂ ನೋಂದಾಯಿತ ಅನುದಾನ ರಹಿತ ಶಾಲೆಗಳ ಒಕ್ಕೂಟ(ರೂಪ್ಸ)ಗಮನಕ್ಕೆ ತಂದಿದೆ.

-ಡಾ.ಹಾಲನೂರು ಎಸ್.ಲೇಪಾಕ್ಷ್, ರೂಪ್ಸ ರಾಜ್ಯಾಧ್ಯಕ್ಷರು.

ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಪರೀಕ್ಷೆ ನಡೆಸುವ ಅಗತ್ಯತೆ ಕುರಿತು ಪತ್ರ ಬರೆದಿದ್ದೆ. ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಹಾಗೆಯೇ ಪಾಸು ಮಾಡುವ ಪ್ರಕ್ರಿಯೆ ವಿದ್ಯಾರ್ಥಿಗಳು ವರ್ಷವಿಡೀ ಆದ ತಯಾರಿಯನ್ನು ನಿಷ್ಪ್ರಯೋಜಕವಾಗಿಸುತ್ತದೆ. ಕೋವಿಡ್ 2 ನೇ ಅಲೆ ಯಾರೂ ನಿರೀಕ್ಷಿಸಿರಲಿಲ್ಲ. ಆದರೂ ಅಪ್ಪಳಿಸಿ ಎಲ್ಲರೂ ತೊಂದರೆಗೊಳಗಾಗಿದ್ದಾರೆ. ವಿದ್ಯಾರ್ಥಿಗಳ ಜೀವ-ಜೀವನ ಎರಡನ್ನೂ ಕಾಪಾಡಬೇಕಾದ ಸಂದಿಗ್ದ ಸನ್ನಿವೇಶದಲ್ಲಿ ಶಿಕ್ಷಣದ ಇಲಾಖೆ ಆತುರದ ನಿರ್ಧಾರಕೈಗೊಳ್ಳಬಾರದು. ಪರೀಕ್ಷೆ ರದ್ದು ಮಾಡುವುದಕ್ಕಿಂತ ಮುಂದೂಡಿ ನಡೆಸುವುದು ಸೂಕ್ತ.

-ಪ್ರೊ.ಎಂ.ಆರ್.ದೊರೆಸ್ವಾಮಿ, ಶೈಕ್ಷಣಿಕ ಸಲಹೆಗಾರರು, ಕರ್ನಾಟಕ ಸರಕಾರ.

ಸಿಬಿಎಸ್‍ಸಿ -ಐಸಿಎಸ್‍ಸಿಐ ಬೋರ್ಡ್ 12ನೇ ಪರೀಕ್ಷೆ ರದ್ದು ಮಾಡಿರುವ ಕಾರಣ ರಾಜ್ಯದಲ್ಲೂ ದ್ವಿತೀಯ ಪಿಯುಸಿ ರದ್ದು ಮಾಡಲಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಒಂದೇ ನಿಲುವು ತಾಳಿರುವ ಪ್ರತೀಕ. ಆದರೆ ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಹಾಗೂ ಗ್ರೇಡಿಂಗ್ ಪದ್ದತಿಯನ್ನು ನೀಡುವ ಬಗ್ಗೆ ಶಿಕ್ಷಣ ಕ್ಷೇತ್ರದ ಪರಿಣಿತರೊಂದಿಗೆ ಚರ್ಚಿಸಿ ಶಿಕ್ಷಣ ಇಲಾಖೆ ಸ್ಪಷ್ಟ ತೀರ್ಮಾನಕ್ಕೆ ಬರಬೇಕು.

-ಚಿದಾನಂದ ಎಂ.ಗೌಡ ಎಂಎಲ್ಸಿ.

ಪುನರಾವರ್ತಿತ, ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅಸಮಾಧಾನ

      ಫ್ರೆಶರ್ಸ್ ವಿದ್ಯಾರ್ಥಿಗಳಿಗೆ ಪಿಯುಸಿ ಪರೀಕ್ಷೆ ರದ್ದು ಮಾಡಿ ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಿಗದಿಮಾಡಿರುವ ಕ್ರಮದ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ. ಈ ಬಗ್ಗೆ ಕಾನೂನು ಹೋರಾಟಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳು ಸಜ್ಜಾಗಿದ್ದು, ಪರೀಕ್ಷೆ ಬಗೆಗಿನ ಸರಕಾರದ ಧ್ವಂಧ್ವ ನಿಲುವುಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಡೆಸುವುದಾದರೆ ಎಸ್ಸೆಸ್ಸೆಲ್ಸಿ, ಪಿಯುಸಿ ಎಲ್ಲರಿಗೂ ಪರೀಕ್ಷೆ ನಡೆಸಿ, ಗ್ರೇಡಿಂಗ್ ಪದ್ದತಿ ಕಷ್ಟ ಪಟ್ಟು ಓದಿ ಸಾಧಿಸಬೇಕೆಂದಿದ್ದ ವಿದ್ಯಾರ್ಥಿಗಳಿಗೆ ಸಹ್ಯವಾಗುವುದಿಲ್ಲ. ಪರೀಕ್ಷೆ ಪ್ರತಿಭೆಯನ್ನು ಅಳೆಯುವ ಅಳತೆಗೋಲು. ಕೋವಿಡ್ ಕಾರಣಕ್ಕೆ ಅದನ್ನು ಮರೆಮಾಚಿ ಸಾರಸಾಗಾಟಾಗಿ ಪಾಸು ಮಾಡುವುದು ಅರ್ಹರನ್ನು, ಅನರ್ಹರನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. 14 ವರ್ಷ ಮೇಲ್ಪಟ್ಟ ಮಕ್ಕಳಿಗೆಕೋವಿಡ್ ವ್ಯಾಕ್ಸಿನ್ ಲಸಿಕೆ ನೀಡಿ ನಂತರ ಪರೀಕ್ಷೆ ನಡೆಸಿ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ಎಸ್.ಹರೀಶ್ ಆಚಾರ್ಯ
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link