ತಿಪಟೂರು: ಕೆರೆಯ ಪಾದಚಾರಿ ರಸ್ತೆ ಹಾಳಾಗಿದ್ದಕ್ಕೆ ಹೊಣೆ ಯಾರು..?

ತಿಪಟೂರು :

      ಲಾಕ್‍ಡೌನ್ ಸಂದರ್ಭದಲ್ಲಿ ನಗರದ ಅಮಾನಿಕೆರೆಯನ್ನು ಸುತ್ತಲಿನ ಸಾರ್ವಜನಿಕರ ವಾಯುವಿಹಾರಕ್ಕೆ ಮುಚ್ಚಲಾಗಿತ್ತು. ಆದರೆ ಈಗ ಪಾದಚಾರಿ ಮಾರ್ಗ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗಿದ್ದು ಸಂಚಾರಕ್ಕೆ ಬಾರದಷ್ಟು ಹಾಳಾಗಿ ಹೋಗಿದೆ. ಇದಕ್ಕೆ ಹೊಣೆಯಾರು ಎಂಬ ಪ್ರಶ್ನೆ ಪಾದಚಾರಿಗಳನ್ನು ಕಾಡುತ್ತಿದೆ.

       ಸುತ್ತಲೂ ಬಣ್ಣ ಹೊಡೆದ ತಂತಿಬೇಲಿ, ಕೆರೆಯ ಮಧ್ಯದಲ್ಲಿ ಸ್ವಚ್ಚಂಧವಾಗಿ ನಿದ್ರಿಸಿ ತಮ್ಮ ನಿತ್ಯಕಾಯಕ್ಕಾಗಿ ಹೊರಡುವ ಹಕ್ಕಿಗಳ ಚಿಲಿಪಿಲಿ, ಆಗಾತಾನೆ ಉದಯಿಸುತ್ತಿರುವ ಸೂರ್ಯನ ಕಿರಣಗಳ ಸ್ಪರ್ಶದ ರೋಮಾಂಚನ, ಸೂರ್ಯನಕಿರಣ ಬಿದ್ದು ಹೊಳೆಯುತ್ತಿರುವ ಮಂಜಿನ ಹನಿ ಇವುಗಳೆಲ್ಲವನ್ನು ಲಾಕ್‍ಡೌನ್‍ನಿಂದ ಕಳೆದು ಕೊಂಡಿದ್ದ ಪಟ್ಟಣದ ನಾಗರೀಕರು ಕೆರೆ ಸುತ್ತಲಿನ ರಸ್ತೆಯಲ್ಲಿ ಮುಂಜಾನೆ ವಾಯು ವಿಹಾರ ಮಾಡುತ್ತಿದ್ದರು. ಎಷ್ಟು ಬೇಗ ಕೆರೆ ಸುತ್ತ ವಾಯುವಿಹಾರ ಮಾಡುತ್ತೇವೊ ಎಂಬ ಕೌತುಕದಿಂದ ಕೆರೆಯ ಅಂಗಳಕ್ಕೆ ಬಂದರೆ ಇಲ್ಲಿದ್ದ ಪಾದಚಾರಿ ರಸ್ತೆಯಲ್ಲಿ ಬೇಕಾಬಿಟ್ಟಿ ಟ್ರಾಕ್ಟರ್ ಮತ್ತಿತರ ವಾಹನಗಳನ್ನು ಓಡಿಸಿ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಹಾಳುಮಾಡಿದನ್ನು ಕಂಡು ಜನರು ಸ್ವಲ್ಪ ಸಮಯ ಹೌಹಾರಿದರು. ಮತ್ತು ಇದೇ ಸಂದರ್ಭದಲ್ಲಿ ಲಾಕ್‍ಡೌನ್‍ನಿಂದ ಕೆರೆಯ ಒಳಗೆ ಯಾರು ಬಾರದಂತೆ ಬೀಗವನ್ನು ಹಾಕಿದ್ದು, ಸುತ್ತ ಬೇಲಿ ಭದ್ರವಾಗಿದ್ದರು ಸಹ ಹೇಗೆ ವಾಹನಗಳು ಸಂಚರಿಸಿದವು ಎಂಬುದು ತಿಳಿಯದಾಗಿದೆ ಎಂದು ಪಾದಚಾರಿಗಳು ಮಾತನಾಡಿಕೊಳ್ಳುತ್ತಿದ್ದರು.

      ಅದೇ ರೀತಿ ಇಲ್ಲಿ ವಾಹನ ಸಂಚಾರ ಮಾಡಬಾರದೆಂಬ ಪರಿಜ್ಞಾನವು ಇಲ್ಲದ ಚಾಲಕರನ್ನು ದೂಷಿಸುತ್ತಿದ್ದರು. ಇಷ್ಟೆಲ್ಲಾ ಆದರೂ ಕೆರೆಯ ಕೂಗಳತೆ ದೂರದಲ್ಲಿರುವ ನಗರಸಭೆಯ ಅಧಿಕಾರಿಗಳ ಕಣ್ಣಿಗೆ ಇದು ಕಾಣಲಿಲ್ಲವೆ ಇಲ್ಲ ಮತ್ತೆ ಟೆಂಡರ್ ಆದರೆ ನಮಗೆ ಏನಾದರು ಸಿಗಬಹುದು ಎಂದು ಹೋದರೆ ಹೋಗಲಿ ನಮಗೇನು ಇದು ಸಾರ್ವಜನಿಕರ ಆಸ್ತಿಯಲ್ಲವೆ ಎಂಬ ಮನಸ್ಥಿತಿಯಲ್ಲಿ ಕುಳಿತಿದ್ದಾರೊ ತಿಳಿಯದಾಗಿದ್ದು, ಪಾದಚಾರಿ ಮಾರ್ಗ ಹಾಳಾಗಲು ನಗರಸಭೆಯವರೆ ನೇರ ಕಾರಣರಾಗಿದ್ದಾರಾ ಎಂಬುದು ವಾಯುವಿಹಾರಿಗಳ ಪ್ರಶ್ನೆಯಾಗಿದೆ.

      ಇನ್ನು ಕೆರೆಯ ಅಂಗಳವನ್ನು ಸ್ವಚ್ಚ ಮಾಡುವ ಭರದಲ್ಲಿ ಜೂ.05 ರ ಪರಿಸರದ ದಿನದ ಅಂಗವಾಗಿ ರೋಟರಿ ಸಂಸ್ಥೆಯವರು ಹಾಕಲಾಗಿದ್ದ ಸಸಿಗಳನ್ನು ಸಂಪೂರ್ಣವಾಗಿ ಟ್ರ್ಯಾಕ್ಟರ್ ಸಹಾಯದಿಂದ ಕಿತ್ತು ಹಾಕಿದ್ದಾರೆ. ಇದರಿಂದ ಪರಿಸರ ದಿನದ ನೆನಪಿಗಾಗಿ ಪಟ್ಟಣದ ಅಲ್ಲಲ್ಲಿ ಕೆಲವು ಸಂಘಟನೆಗಳು ಗಿಡನೆಡುತ್ತಿದ್ದು ನಗರ ಸಭೆಯವರು ಈಗ ಸಕಾರಣವಿಲ್ಲದೇ ಗಿಡ ಕೀಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅವರೆಲ್ಲಾ ವಿಮುಖವಾಗುವ ಸಾಧ್ಯತೆ ಇದೆ.

      ತಿಪಟೂರು ಅಮಾನಿಕೆರೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿಲು ಕಳೆದ ವರ್ಷ ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ.ರವಿ ಅವರು 2 ಕೋಟಿ ರೂ. ಅನುದಾನದ ಯೋಜನೆ ಸಿದ್ಧಪಡಿಸಿ ಸ್ಥಳೀಯ ಸಾಂಸ್ಕøತಿಕ ಮೆರಗಿರಲಿ ಎಂದು ಹೇಳಿ ಭೂಮಿ ಪೂಜೆ ಮಾಡಿಹೋಗಿದ್ದರು. ಆದರೀಗ ಈ ಯೋಜನೆ ಎಲ್ಲಿಗೆ ಬಂದು ನಿಂತಿದೆ ಎಂಬುದೆ ತಿಳಿಯದಾಗಿದೆ. ಇಷ್ಟೆಲ್ಲಾ ಸಾರ್ವಜನಿಕರ ಆಸ್ತಿಗೆ ಹಾನಿಯಾಗಲು ಕಾರಣರಾರು ನಗರಸಭೆಯವರೆ ಇಲ್ಲಾ ಸಣ್ಣ ನೀರಾವರಿ ನಿಗಮದವರೆ ಎಂಬುದ ತಿಳಿಯದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap