ತುಮಕೂರು :
ಸ್ಮಾರ್ಟ್ ಸಿಟಿಯಿಂದ ಕೈಗೊಂಡಿರುವ ಮಹಾತ್ಮಗಾಂಧಿ ನವೀಕೃತ ಕ್ರೀಡಾಂಗಣ ಕಾಮಗಾರಿ 2022 ಜನವರಿವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ತೋಟಗಾರಿಕೆ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮುಗಿಸಿದ ಬಳಿಕ ನಗರದ ಎಂ.ಜಿ ಸ್ಟೇಡಿಯಂ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ ರಾಜಧಾನಿಗೆ ಹೋಲಿಸಿದರೆ ಸ್ಮಾರ್ಟ್‍ಸಿಟಿ ಕಾಮಗಾರಿ ತುಮಕೂರಿನಲ್ಲೇ ಭರದಿಂದ ಸಾಗಿದೆ. ಕ್ರೀಡಾಂಗಣ ಕಾಮಗಾರಿ ಮತ್ತಷ್ಟು ವೇಗವಾಗಿ ನಡೆಯಬೇಕಿದ್ದು, ಹಗಲಿರುಳು ಎನ್ನದೇ ಕಾಮಗಾರಿಗೆ ಒತ್ತುಕೊಟ್ಟು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆನೆ. ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದು, ಕೊರೊನಾ ಮೂರನೇ ಅಲೆ, ಮಳೆ ಮತ್ತಿತರ ಕಾರಣಕ್ಕೆ ಒಂದು ತಿಂಗಳ ವಿಳಂಬ ಎಂದುಕೊಂಡರೂ ಜನವರಿ ವೇಳೆಗೆ ಕಾಮಗಾರಿ ಮುಗಿಸಬೇಕೆಂದು ಗಡುವು ನೀಡಲಾಗಿದೆ ಎಂದರು.
ನೀರಿನ ಸದ್ಬಳಕೆ, ರೇಷ್ಮೆ ತೋಟಗಾರಿಕೆಯಲ್ಲೂ ಮುಂಚೂಣಿಯಲ್ಲಿರುವ ತುಮಕೂರು ಜಿಲ್ಲೆ ಕ್ರೀಡೆಯಲ್ಲೂ ನಂಬರ್ ಒನ್ ಸ್ಥಾನಕ್ಕೇರಲಿ ಎಂಬುದು ನಮ್ಮ ಆಶಯವಾಗಿದೆ. ಅದಕ್ಕೆ ಪೂರಕವಾಗಿ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು,1000 ಕ್ರೀಡಾಪಟುಗಳಿಗೆ ವಸತಿ ಸೌಕರ್ಯ ಕಲ್ಪಿಸುವ ವ್ಯವಸ್ಥೆಯಾಗುತ್ತಿರುವುದು ಗಮನಾರ್ಹ ಸಂಗತಿ. ಶೀಘ್ರದಲ್ಲೇ ಕಂಠಿರವ ಸ್ಟೇಡಿಯಂ ನವೀಕರಣಕ್ಕೆ ಬಿಟ್ಟುಕೊಡಬೇಕಿದ್ದು, ಕಾಮಗಾರಿ ಮುಗಿಯಲು ಒಂದೂವರೆ ವರ್ಷ ಹಿಡಿಯಲಿದೆ. ಅಲ್ಲಿಯವರೆಗೆ ಸುಸಜ್ಜಿತವಾಗಿ ರೂಪುಗೊಳ್ಳುವ ರಾಜಧಾನಿಗೆ ಸನಿಹದ ಈ ಕ್ರೀಡಾಂಗಣವನ್ನೇ ಬಳಸಿಕೊಳ್ಳಲಾಗುವುದು ಎಂದರು.
ಕ್ರೀಡಾ ಚಟುವಟಿಕೆ ಆರಂಭಕ್ಕೆ ಕ್ರಮ:
ಕೋವಿಡ್ ಕಾರಣಕ್ಕೆ ಕಳೆದ ಒಂದೂ ವರ್ಷಕ್ಕೂ ಅಧಿಕ ಸಮಯದಿಂದ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ. ಸದ್ಯ ಅನ್‍ಲಾಕ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಕ್ರೀಡಾಂಗಣ- ಹಾಸ್ಟೆಲ್ ಸ್ವಚ್ಛತೆ, ಸ್ಯಾನಿಟೈಜರ್ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು. ಈ ವೇಳೆ ಸ್ವಾಮಿ ವಿವೇಕಾನಂದ ಸ್ಫೋಟ್ಸ್ ಕ್ಲಬ್‍ನಿಂದ ಸಚಿವರನ್ನು ಅಭಿನಂದಿಸಲಾಯಿತು.
ಕಾಮಗಾರಿ ವೀಕ್ಷಿಸುವ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಂಎಲ್ಸಿ ಚಿದಾನಂದ್ ಎಂ.ಗೌಡ, ಡಿಸಿ ವೈ.ಎಸ್.ಪಾಟೀಲ್, ಜಿಪಂ ಸಿಇಓ ಕೆ.ವಿದ್ಯಾಕುಮಾರಿ, ಯೋಜನಾಧಿಕಾರಿ ಬಾಲರಾಜ್, ತಹಸೀಲ್ದಾರ್ ಮೋಹನ್‍ಕುಮಾರ್, ಯುವಜನ ಸೇವಾ ಇಲಾಖೆ ಆಯುಕ್ತರು, ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ, ಕ್ರೀಡಾಇಲಾಖೆ ಹಿರಿಯ ಸಹಾಯಕ ನಿರ್ದೇಶಕರು, ರಾಕ್‍ಯೂತ್‍ಕ್ಲಬ್‍ನ ನರಸಿಂಹರಾಜು, ಅಥ್ಲೆಟಿಕ್ ಅಸೋಸಿಯೇಷನ್‍ನ ಪ್ರಭಾಕರ್, ತರಬೇತುದಾರರಾದ ಪ್ರದೀಪ್ ಇಸ್ಮಾಯಿಲ್ ಮತ್ತಿತರ ಅಧಿಕಾರಿ ವೃಂದದವರು ಹಾಜರಿದ್ದರು.
ಕೆಆರ್‍ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿಲ್ಲ :
ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿರುವ ವಿಚಾರವಾಗಿ ಸಂಸದೆ ಹಾಗೂ ಮಾಜಿ ಸಿಎಂ ಎಚ್ಡಿಕೆ ನಡುವೆ ನಡೆಯುತ್ತಿರುವ ರಾಜಕೀಯ ಜಟಾಪಟಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮಂಡ್ಯ ಜಿಲ್ಲಾ ಸಚಿವರೂ ಆದ ನಾರಾಯಣಗೌಡ ಅವರು ವಿಪಕ್ಷಗಳವರ ಜಗಳದಲ್ಲಿ ನಾನು ತಲೆಹಾಕೋಲ್ಲ. ಇಷ್ಟಂತೂ ನಿಜ. ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಂಎಲ್ಸಿ ಚಿದಾನಂದಗೌಡ, ಸ್ಥಳೀಯ ಕ್ರೀಡಾ ಸಂಘಟನೆಗಳ ಪ್ರಮುಖರಾದ ನರಸಿಂಹರಾಜು, ಪ್ರಭಾಕರ್ ಇತರರು ಕ್ರೀಡಾಂಗಣದಲ್ಲಿ ಸಿಂಥಟಿಕ್ ಟ್ರ್ಯಾಕ್ ಆಗಲೇಬೇಕೆಂದು ಬೇಡಿಕೆಯಿಟ್ಟಿದ್ದು, ಇದಕ್ಕಾಗಿ ಅಗತ್ಯವಾದ 8 ಕೋಟಿ ಅನುದಾನವನ್ನು ಪ್ರಮುಖ ಕಂಪನಿಯೊಂದರ ಸಿಎಸ್‍ಆರ್ ಫಂಡ್‍ನಿಂದ ಕೊಡಿಸಲಾಗುವುದು. ಸಿಂಥಟಿಕ್ ಟ್ರ್ಯಾಕ್ ನಿರ್ಮಿಸಿಕೊಡುವುದು ನಮ್ಮ ಜವಾಬ್ದಾರಿಯಾಗಿದ್ದು, ಜಿಲ್ಲೆಯವರೇ ಆದ ಇಲಾಖೆ ಆಯುಕ್ತರು ಕ್ರಮ ವಹಿಸಲಿದ್ದಾರೆ.
-ನಾರಾಯಣಗೌಡ, ಯುವಜನ ಮತ್ತು ಕ್ರೀಡಾ ಸಚಿವರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ