ತುರುವೇಕೆರೆ :
ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ಹಿಂದಿನ ವ್ಯಾಜ್ಯ ಪ್ರಕರಣಗಳನ್ನು ಮುಂಬರುವ ತಿಂಗಳು 14 ರಂದು ರಾಷ್ಟ್ರೀಯ ಕಾನೂನು ಪ್ರಾಧಿಕಾರದ ಆಶ್ರಯದಲ್ಲಿ ನಡೆಯುವ ಬೃಹತ್ ಲೋಕ್ ಅದಾಲತ್‍ನಲ್ಲಿ ಸುಮಾರು ರಾಜಿ ಪ್ರಕರಣಗಳನ್ನು ಇತ್ಯರ್ಥ ಪಡಿಸಬಹುದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಪಿ.ಎಂ.ಬಾಲಸುಬ್ರಮಣಿ ತಿಳಿಸಿದ್ದಾರೆ.
ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಆಗಸ್ಟ್ 14 ರಂದು ನಡೆಯುವ ಬೃಹತ್ ಲೋಕ ಅದಾಲತ್ ಕಾರ್ಯಕ್ರಮವು ಸಾರ್ವಜನಿಕರಿಗೆ ಅತ್ಯುತ್ತಮವಾದ ವೇದಿಕೆಯಾಗಲಿದೆ. ಸಣ್ಣಪುಟ್ಟ ಮನಸ್ಥಾಪದಿಂದ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ತಾಲೂಕಿನ ಎರಡು ನ್ಯಾಯಾಲಯಗಳಲ್ಲಿ ಇತ್ಯರ್ಥ ಪಡಿಸಬಹುದಾದ ಸುಮಾರು 4 ಸಾವಿರ ಪ್ರಕರಣಗಳು ಇವೆ. ಅದರಲ್ಲಿ ಸುಮಾರು 2500 ರಾಜಿ ಪ್ರಕರಣಗಳನ್ನು ವಿಲೇವಾರಿ ಮಾಡಬಹುದು ಎಂಬ ಆಶಾಭಾವನೆ ಇದೆ. ಕಳೆದ ಬಾರಿ ನಡೆದ ಬೃಹತ್ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಲ್ಲೇ ಅತಿಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿದ್ದವು. ಇದು ರಾಜ್ಯದಲ್ಲೇ ಪ್ರಥಮ ಸ್ಥಾನ ಹೊಂದಿತ್ತು. ಇದೇ ರೀತಿ ಈ ಬಾರಿಯೂ ಸಹ ಸಾರ್ವಜನಿಕರು ಕಕ್ಷಿದಾರರು ಮತ್ತು ವಕೀಲರ ಸಹಕಾರದಿಂದ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವ ಆಲೋಚನೆ ಇದೆ ಎಂದರು.
ಸಾಲ ತೀರುವಳಿ ಪ್ರಕರಣಗಳಲ್ಲಿ ಮರುಪಾವತಿ ಮಾಡದ ಸಾಲಗಾರರನ್ನು ಮತ್ತು ಬ್ಯಾಂಕ್‍ಗಳನ್ನು ಒಂದೇ ಸೂರಿನಡಿ ಸೇರಿಸಿ ರಾಜೀ ಸೂತ್ರ ಬಳಸಲು ಕ್ರಮ ವಹಿಸಲಾಗುವುದು. ಲೋಕ್ ಅದಾಲತ್‍ನಲ್ಲಿ ಪ್ರಕರಣಗಳು ಇತ್ಯರ್ಥವಾದರೆ ಕಕ್ಷಿದಾರರಿಗೆ ಆರ್ಥಿಕನಷ್ಟ, ಸಮಯದ ನಷ್ಟ, ಮಾನಸಿಕ ಒತ್ತಡ ತಪ್ಪುತ್ತದೆ. ಇದು ದೂರುದಾರರಿಗೆ ಇರುವ ಉತ್ತಮ ವೇದಿಕೆಯಾಗಿದೆ ಎಂದರು.
ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಎನ್.ರಮೇಶ್‍ಬಾಬು ಅವರು ಮಾತನಾಡಿ ಭೂಸ್ವಾಧೀನ, ಚೆಕ್‍ಬೌನ್ಸ್, ಕೌಟುಂಬಿಕ ಕಲಹ, ವಿಭಾಗದಾವೆ ಸೇರಿದಂತೆ ರಾಜಿ ಆಗಬಹುದಾದ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ಇತ್ಯರ್ಥ ಪಡಿಸಬಹುದಾಗಿದೆ. ಈ ವೇದಿಕೆಯಲ್ಲಿ ಪ್ರಕರಣ ಇತ್ಯರ್ಥವಾದಲ್ಲಿ ಕಕ್ಷಿದಾರರು ನ್ಯಾಯಾಲಯಕ್ಕೆ ಕಟ್ಟಿರುವ ಹಣವನ್ನೂ ಸಹ ಹಿಂತಿರುಗಿಸಲಾಗುವುದು. ಈ ವೇದಿಕೆಯಲ್ಲಿ ಇತ್ಯರ್ಥ ಪಡಿಸಿದ ಪ್ರಕರಣಗಳಲ್ಲಿ ಪುನರ್ ಮನವಿ ಇರುವುದಿಲ್ಲವಾದ್ದರಿಂದ ಇಬ್ಬರಿಗೂ ನ್ಯಾಯ ಸಮ್ಮತವಾಗಿರುತ್ತದೆ. ಹಾಗಾಗಿ ಆಗಸ್ಟ್ 14 ರಂದು ನ್ಯಾಯಾಲಯದ ಕಟ್ಟಡದ ಸಂಕೀರ್ಣದಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ನಡೆಯುವ ಲೋಕ್ ಅದಾಲತ್ ಕಲಾಪದಲ್ಲಿ ಸಮಸ್ಯೆಯನ್ನು ಮುಕ್ತಾಯಗೊಳಿಸಬಹುದಾಗಿದೆ. ಈ ಲೋಕ್ ಅದಾಲತ್‍ನ ಸಂಬಂಧ ಈಗಾಗಲೇ ಪ್ರತಿದಿನ ನ್ಯಾಯಾಲಯದಲ್ಲಿ ಕಕ್ಷಿದಾರರ ಪ್ರಕರಣದ ಕುರಿತು ಮಧ್ಯಸ್ಥಿಕೆ ಕಾರ್ಯ ಮಾಡಲಾಗುತ್ತಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ