ಶಿರಾ : ರಾಜಕೀಯ ಮೇಲಾಟದಲ್ಲಿ ನಿವೇಶನ ಹಂಚಿಕೆ ಮರೀಚಿಕೆ

ಶಿರಾ :

ಶಿರಾ ನಗರಸಭೆಯ ಮುಂದೆ ಆಶ್ರಯ ನಿವೇಶನದ ಖಾಲಿ ಅರ್ಜಿ ಫಾರಂಗಳಿಗಾಗಿ ಸಾಲುಗಟ್ಟಿ ನಿಂತ ಮಹಿಳಾ ಫಲಾನುಭವಿಗಳು

      ಈ ಚಿತ್ರದಲ್ಲಿ ಕಾಣುತ್ತಿರುವ ಜನರ ಸರದಿಯ ಸಾಲು ಯಾವುದೇ ಪಡಿತರ ಅಕ್ಕಿ ಪಡೆಯಲು ನಿಂತಿರುವ ಸಾಲಲ್ಲ. ಯಾವುದೇ ಸಹಕಾರಿ ಬ್ಯಾಂಕಿನ ಸಾಲ ಪಡೆಯಲು ನಿಂತ ಸಾಲು ಕೂಡ ಅಲ್ಲ. ಕೋವಿಡ್ ಲಸಿಕೆ ಪಡೆಯಲು ನಿಂತ ಜನರಂತೂ ಅಲ್ಲವೇ ಅಲ್ಲ…
ಕಳೆದ ಕೆಲವು ದಿವಸಗಳ ಹಿಂದೆ ಇಲ್ಲಿನ ನಗರಸಭೆ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ನೀಡುವಂತೆ ಭರವಸೆ ನೀಡಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ ಪರಿಣಾಮ ನಗರಸಭಾ ಕಛೇರಿಯ ಮುಂದೆ ಸೋಮವಾರದಿಂದ ನಗರದ ಜನ ನಿವೇಶನಕ್ಕಾಗಿ ಖಾಲಿ ಅರ್ಜಿಗಳನ್ನು ಪಡೆಯಲು ಸಾಲುಗಟ್ಟಿ ನಿಂತು ನಾ ಮುಂದು ತಾ ಮುಂದು ಎಂದು ಮುಗಿ ಬಿದ್ದಿದ್ದಾರೆ.
ಆಶ್ರಯ ಸಮಿತಿಯ ತೀರ್ಮಾನದಂತೆ ಆರ್.ಜಿ.ಆರ್.ಹೆಚ್.ಸಿ.ಎಲ್. ಮಾರ್ಗಸೂಚಿಯಂತೆ ಫಲಾನುಭವಿಗಳು ಆಯ್ಕೆಯಾಗಬೇಕಾದ ಪರಿಣಾಮ ಮಹಿಳಾ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸಬೇಕಿದ್ದು ನಗರಸಭೆಯ ಮುಂದೆ ಮಹಿಳೆಯರ ದಂಡು ಇದೀಗ ಸಾಲುಗಟ್ಟಿ ನಿಂತಿದೆ.

      ನಗರದಲ್ಲಿ ಇಂದಿಗೂ ಅನೇಕ ಮಂದಿ ಆಧಾರ್ ಕಾರ್ಡು, ಚುನಾವಣಾ ಕಾರ್ಡು ಸೇರಿದಂತೆ ವಾಸಸ್ಥಳದ ದೃಢೀಕರಣ ಹೊಂದಿದ್ದು, ಸೋರುವ ಗುಡಿಸಲಲ್ಲಿ ವಾಸವಿದ್ದರೂ ಕೂಡ ಕಳೆದ 20-25 ವರ್ಷಗಳಿಂದಲೂ ಸಣ್ಣದೊಂದು ಸೂರನ್ನೂ ಸರ್ಕಾರದಿಂದ ಪಡೆದು ಮನೆ ಕಟ್ಟಿಕೊಳ್ಳಲಾಗದಂತಹ ಸ್ಥಿತಿಯನ್ನು ತಲುಪಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

      ನಿವೇಶನಕ್ಕಾಗಿ ನಗರದ ಅರ್ಹ ಫಲಾನುಭವಿಗಳು ನಗರಸಭೆಗೆ ಅರ್ಜಿಗಳನ್ನು ಸಲ್ಲಿಸುವುದು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ವರ್ಷಕ್ಕೊಮ್ಮೆ, ಇಲ್ಲವೇ ಎರಡು, ಮೂರು ವರ್ಷಗಳಿಗೊಮ್ಮೆ ಅರ್ಹ ಫಲಾನುಭವಿಗಳಿಂದ ಆಶ್ರಯ ನಿವೇಶನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸುವಂತೆ ನಾಟಕವಾಡುವ ನಗರಸಭೆ ಕಳೆದ 20 ವರ್ಷಗಳಿಂದಲೂ ಅರ್ಹ ಫಲಾನುಭವಿಗಳನ್ನು ನಿವೇಶನ ಹಂಚಿಕೆ ನೆಪದಲ್ಲಿ ಗೋಳು ಹೊಯ್ದುಕೊಳ್ಳುತ್ತಲೇ ಇದೆ.

ಶಿರಾ ನಗರಸಭೆಯ ಫೋಟೋ

      ಶಿರಾ ಕ್ಷೇತ್ರಕ್ಕೆ ಯಾರೇ ನೂತನವಾಗಿ ಶಾಸಕರು ಆಯ್ಕೆಯಾದ ಕೂಡಲೆ ಅವರ ಆಡಳಿತಾವಧಿ ಇನ್ನೇನು ಮುಗಿಯಲು ಸಮೀಪಿಸುತ್ತಿದೆ ಅನ್ನುವಾಗ ನಗರದ ಜನತೆಗೆ ಆಶ್ರಯ ನಿವೇಶನ ನೀಡುವ ಕಾತರಕ್ಕೆ ಮುಂದಾಗುತ್ತಾರೆ. ಆಡಳಿತಾವಧಿಯ ನಾಲ್ಕು ವರ್ಷಗಳಲ್ಲಿ ಕೊನೆಯ ಅಂತಿಮ ವರ್ಷದಲ್ಲಿ ಚುನಾವಣಾ ತಂತ್ರಗಾರಿಕೆಗೂ ಒಳಗಾಗಿ ಈ ಹಿಂದಿನ ಅನೇಕ ಶಾಸಕರು ಚುನಾವಣೆಗೂ ಮುನ್ನಾ ನಿವೇಶನ ಹಂಚುವ ಹೈ ಡ್ರಾಮಾ ನಡೆಸುವುದು ಹೊಸತೇನೂ ಅಲ್ಲವೆಂಬಂತಾಗಿದೆ.

     ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ ನಡೆಯುತ್ತಿರುವ ಈಗಲೂ ನಡೆಯುತ್ತಿರುವ ರಾಜಕೀಯ ಮೇಲಾಟಗಳ ನಡುವೆ ಸ್ವಂತದೊಂದು ಸೂರು ಕೂಡ ಇಲ್ಲದವರ ಮೂಗಿಗೆ ಈ ಭಾಗದ ರಾಜಕಾರಣಿಗಳು ತುಪ್ಪ ಸವರುತ್ತಲೇ ಬರುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

      ಆಗ ಪಿ.ಎಂ.ರಂಗನಾಥಪ್ಪ ಶಾಸಕರಾಗಿದ್ದರು. 2004 ರ ಸಂದರ್ಭದಲ್ಲಿ ಶಾಸಕರಾಗಿದ್ದ ಪಿ.ಎಂ.ರಂಗನಾಥಪ್ಪನವರನ್ನು ಈಗಲೂ ಸೂರು ಹೊಂದಿದ ಅನೇಕ ಮಂದಿ ಗುಣಗಾನ ಮಾಡಿ ಕೊಂಡಾಡುವುದು ಸಾಮಾನ್ಯವಾಗಿದೆ. ನೆಲೆಯೇ ಇಲ್ಲದವರಿಗೆ, ಅದರಲ್ಲೂ ಅನೇಕ ಅರ್ಹ ಮಂದಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಿದ ಕೀರ್ತಿ ದಿವಂಗತ ಪಿ.ಎಂ.ರಂಗನಾಥಪ್ಪ ಅವರದ್ದು.

2003-04ರಲ್ಲಿ ಮೊದಲಿಗೆ ಶಿವಾಜಿ ನಗರದಲ್ಲಿ ಕಲ್ಲುಕೋಟೆ ಸ.ನಂ.84-3 ರಲ್ಲಿ 125 ಮಂದಿಗೆ ನಿವೇಶನ ಹಂಚಿಕೆ ಮಾಡಿದ್ದ ರಂಗನಾಥಪ್ಪ ಅವರು ,ಇದೇ ಸಂದರ್ಭದಲ್ಲಿಯೇ ಕಲ್ಲುಕೋಟೆ ಸ.ನಂ.97 ಮತ್ತು 111ರಲ್ಲಿ ಒಟ್ಟು 264 ಮಂದಿಗೆ ನಿವೇಶನ ಹಂಚುವ ಮೂಲಕ ನಿರಾಶ್ರಿತರಿಗೆ ಆಸರೆ ನೀಡಿದ್ದರು. ಇದೇ ಅವಧಿಯಲ್ಲಿ ಆಶ್ರಯ ಸಮಿತಿಯಲ್ಲಿದ್ದ ಎಂ.ಎನ್.ರಾಜು ಸೇರಿದಂತೆ ಆಶ್ರಯ ಸಮಿತಿಯ ಅನೇಕ ಸದಸ್ಯರು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಶಾಸಕರೊಂದಿಗೆ ಹೋಗಿ ಹಕ್ಕು ಪತ್ರ ನೀಡಿದ್ದು ಇತಿಹಾಸವೇ ಸರಿ.
2005 ರಲ್ಲಿ ಬಿ.ಸತ್ಯನಾರಾಯಣ್ ಶಾಸಕರಾಗಿದ್ದಾಗ ಆರ್. ರಾಮು ಪುರಸಭೆಯ ಅಧ್ಯಕ್ಷರಾಗಿದ್ದರು. ಆಗ ಕಲ್ಲುಕೋಟೆ ಸ.ನಂ. 97/ಪಿ ಯಲ್ಲಿ ನಗರಸಭೆಯಿಂದ ಖಾಸಗಿ ಜಮೀನನ್ನು ಕೊಂಡು 355 ನಿವೇಶನಗಳನ್ನು ಗುರ್ತಿಸಿ ಹಂಚಲು ಮುಂದಾದಾಗ ಸಮ್ಮಿಶ್ರ ಸರ್ಕಾರದ ಕಿತ್ತಾಟಗಳ ನಡುವೆ ನಿವೇಶನ ಹಂಚಿಕೆಯ ಕೆಲಸವೂ ಮರೀಚಿಕೆಯಾಯಿತು.

2007 ರಲ್ಲಿ ಹೇಗಾದರೂ ಸರಿ ನಗರದ ನಿರಾಶ್ರಿತರಿಗೆ ನಿವೇಶನ ನೀಡಲೇಬೇಕೆಂಬ ಹಠ ತೊಟ್ಟು ಆಗಿನ ಶಾಸಕರು ಹಾಗೂ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ನಿವೇಶನ ರಹಿತ ಮತ್ತು ವಸತಿ ರಹಿತರನ್ನು ರಾಜೀವ್‍ಗಾಂಧಿ ನಿಗಮದಡಿಯಲ್ಲಿ ಗುರ್ತಿಸಿ ನಿವೇಶನ ಹಂಚಲು ಕ್ರಿಯಾಶೀಲತೆ ಮೆರೆದರು. ಆ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದಾಗ 7,000ಕ್ಕೂ ಅಧಿಕ ಅರ್ಜಿಗಳು ನಗರಸಭೆಗೆ ಬಂದಿದ್ದು, ರಾಜಕೀಯ ಮೇಲಾಟಗಳ ನಡುವೆ ಈ ಎಲ್ಲಾ ಅರ್ಜಿಗಳೂ ಕಸದ ಬುಟ್ಟಿ ಸೇರಿದವು.

      2012ರಲ್ಲಿ ಪುನಃ ಟಿ.ಬಿ.ಜಯಚಂದ್ರ ಅರ್ಹರಿಗೆ ನಿವೇಶನ ಹಂಚಿಕೆಗೆ ಮತ್ತೊಮ್ಮೆ ಪ್ರಯತ್ನ ನಡೆಸಿದರು. ನಗರಕ್ಕೆ ಸಮೀಪದ ಎಮ್ಮೇರಹಳ್ಳಿ ಸ.ನಂ.ನಲ್ಲಿ ಸುಮಾರು 6 ಎಕರೆ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಂಚುವ ಸಲುವಾಗಿ ಜಮೀನು ಸ್ವಚ್ಛತೆಗೆ ಪ್ರಯತ್ನವೂ ನಡೆಯಿತು. ಆಗ 5700ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಜಯಚಂದ್ರ ಅವರು ಗುರ್ತಿಸಿದ್ದ ಎಮ್ಮೇರಹಳ್ಳಿ ಬಳಿಯ 6 ಎಕರೆ ಜಮೀನು ಗೋಮಾಳಕ್ಕೆ ಸೇರ್ಪಡೆಯಾಗಿದೆ ಎಂಬ ತಕರಾರು ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿ ನಿವೇಶನ ಹಂಚಿಕೆಯಲ್ಲೂ ಗೊಂದಲವೇರ್ಪಟ್ಟು, ಆಗಲೂ ಆಶ್ರಯ ಫಲಾನುಭವಿಗಳ ಪಟ್ಟಿ ನನೆಗುದಿಗೆ ಬಿತ್ತು.

      20017 ರಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಪೈಕಿ ಅನೇಕ ಮಂದಿ ಮನೆ, ನಿವೇಶನ ಇರುವವರಿದ್ದಾರೆಂಬ ತಕರಾರಿನ ನಂತರ ಪರ್ಯಾಯವಾಗಿ ಇನ್ನೊಂದು ಕಡೆ ನಿವೇಶನ ನೀಡಲು ಮುಂದಾದಾಗ, ನಗರಸಭೆಯು 5700 ಅರ್ಜಿಗಳ ಪೈಕಿ 4,000 ಮಂದಿ ಅರ್ಹರನ್ನು ಗುರ್ತಿಸಿ ಫಲಾನುಭವಿಗಳ ಪಟ್ಟಿಯನ್ನೂ ಪ್ರಕಟಿಸಿತಾದರೂ, ಅಷ್ಟು ಹೊತ್ತಿಗೆ ಸಮೀಪಿಸಿಯೇ ಬಿಟ್ಟ ಅಸೆಂಬ್ಲಿ ಚುನಾವಣೆ ನಿವೇಶನ ಹಂಚಿಕೆಗೆ ತಡೆಯೊಡ್ಡಿತು.

     ಹೀಗೆ ಒಂದಲ್ಲಾ ಎರಡಲ್ಲಾ ಹತ್ತು ಹಲವು ವರ್ಷಗಳಿಂದಲೂ ಅರ್ಹರಿಗೆ ನಿವೇಶನ ಹಂಚಿಕೆ ವ್ಯವಸ್ಥೆಗೆ ಅಡೆ-ತಡೆಗಳು ಬರುತ್ತಲೇ ಇದ್ದು ಈ ನಡುವೆ ಜಾಜಮ್ಮಕಟ್ಟೆಯ ಒತ್ತುವರಿ ತೆರವಿಗೆ ಒಳಗಾದ ಕೆಲವರಿಗೆ ಹಾಗೂ ಭವಾನಿ ನಗರದಲ್ಲಿ ಆಕಸ್ಮಿಕ ಬೆಂಕಿಗೀಡಾದ ಫಲಾನುಭವಿಗಳಾದ ಕೆಲವರಿಗೆ ಮಾತ್ರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೆಲವು ನಿವೇಶನಗಳು ಲಭ್ಯವಾಗಿರುವುದನ್ನು ಬಿಟ್ಟರೆ ಉಳಿದಂತೆ ಇಲ್ಲಿಯವರೆಗೂ ಅರ್ಹರಿಗೆ ಸಮಗ್ರವಾಗಿ ನಿವೇಶನ ಹಂಚಿಕೆ ಮಾಡುವ ಗೋಜಿಗೆ ಯಾವ ಶಾಸಕರೂ ಹೋಗಿಯೇ ಇಲ್ಲ.

      ಕ್ಷೇತ್ರದಲ್ಲಿ ನೂತನ ಶಾಸಕರು ಆಯ್ಕೆಯಾದ ಸಂದರ್ಭದಲ್ಲಿ ಅರ್ಹರಿಂದ ನಿವೇಶನಗಳಿಗೆ ಅರ್ಜಿ ಆಹ್ವಾನಿಸುವುದು ಸಹಜವೇ ಆಗುತ್ತಿದ್ದು, ಈಗಲೂ ಕಳೆದ ಎರಡು ದಿನಗಳಿಂದ ನಗರಸಭೆಯು ಮತ್ತೊಮ್ಮೆ ಅರ್ಹರಿಂದ ಆಶ್ರಯ ನಿವೇಶನಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸೋಮವಾರ ಒಂದೇ ದಿನದಂದು 350ಕ್ಕೂ ಹೆಚ್ಚು ಮಂದಿ ಖಾಲಿ ಅರ್ಜಿಗಳನ್ನು ಸರದಿಯ ಸಾಲಲ್ಲಿ ನಿಂತು ಅರ್ಜಿಗಳನ್ನು ಪಡೆದಿದ್ದಾರೆ. ಅರ್ಜಿ ಸಲ್ಲಿಸಲು ಆಗಸ್ಟ್ 6 ರಂದು ಅಂತಿಮ ದಿನವಾಗಿದ್ದು, ಆ ಹೊತ್ತಿಗೆ 10,000ಕ್ಕೂ ಅಧಿಕ ಫಲಾನುಭವಿಗಳು ನಿವೇಶನ ಕೋರಿ ಅರ್ಜಿಗಳನ್ನು ಸಲ್ಲಿಸುವ ಸಾದ್ಯತೆ ಇದೆ.

      ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ಹಿಂದೆ ನಿವೇಶನ ಕೋರಿ ಫಲಾನುಭವಿಗಳು ಸಲ್ಲಿಸಿದ್ದ ಅರ್ಜಿಗಳು ಏನಾದವು ಎಂಬುದು ನಿಜಕ್ಕೂ ನಿಗೂಢವೇ ಸರಿ. ನಗರಸಭೆ ಆಹ್ವಾನಿಸಿದಾಗಲೆಲ್ಲಾ ನೂರಾರು ರೂ.ಗಳನ್ನು ಖರ್ಚು ಮಾಡಿ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು, ಅರ್ಜಿ ಹಾಕುತ್ತಿರುವ ಫಲಾನುಭವಿಗಳ ಜೇಬಿಗಂತೂ ನಿರಂತರವಾಗಿ ಕತ್ತರಿ ಬೀಳುತ್ತಿದೆಯೇ ಹೊರತು, ಈವರೆಗೂ ಒಂದೇ ಒಂದು ನಿವೇಶನವನ್ನೂ ಪಡೆಯಲಾಗಿಲ್ಲ. 

      ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ನಗರದ ಕಲ್ಲುಕೋಟೆ ಸ.ನಂ. 97/ಪಿ. ಜಮೀನಿನಲ್ಲಿ 355 ನಿವೇಶನಗಳನ್ನು ಬಿಟ್ಟರೆ ಉಳಿದ ಯಾವ ಕಡೆಯಲ್ಲೂ ನಗರಸಭೆಯ ವ್ಯಾಪ್ತಿಯಲ್ಲಿ ಖಾಲಿ ಜಮೀನುಗಳೇ ಇಲ್ಲದಿರುವಾಗ ಇನ್ನು ಅರ್ಹರಿಗೆ ನಿವೇಶನ ಹಂಚುವ ಬಗೆಯಾದರೂ ಹೇಗೆಂಬುದು ಅಚ್ಚರಿಯ ಸಂಗತಿಯೂ ಆಗಿದೆ.

      ಈ ನಡುವೆ ನಿವೇಶನಗಳನ್ನು ಹಂಚಲು ಸರ್ಕಾರಿ ಜಮೀನನ್ನು ಉಳಿಸಿಕೊಳ್ಳುವ ಒಂದಷ್ಟು ಪ್ರಯತ್ನವನ್ನು 2017ರಲ್ಲಿ ಶಾಸಕರಾಗಿದ್ದ ಟಿ.ಬಿ.ಜಯಚಂದ್ರ ಮಾಡಿದ್ದಾರೆ. 13.3.2017ರಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ತೀರ್ಮಾನದಂತೆ ವಿವಿಧ ಗ್ರಾಮಗಳಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿ ವಿವಿಧ ಸ.ನಂ.ಗಳಲ್ಲಿ 150 ಎಕರೆ ಸರ್ಕಾರಿ ಗೋಮಾಳದ ಜಮೀನುಗಳಿದ್ದು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಉಚಿತವಾಗಿ ಸರ್ಕಾರ ಮಂಜೂರು ಮಾಡಿದ್ದ ಈ ಜಮೀನಿನಲ್ಲಿ ನಿವೇಶನ ಮತ್ತು ವಸತಿಗಳನ್ನು ರಚಿಸಲು ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಒತ್ತಡ ತಂದಿದ್ದರು.

      ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರಾದ 150 ಎಕರೆ ಗೋಮಾಳದ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡುವ ಕ್ರಿಯಾಶೀಲ ಪ್ರಯತ್ನ ನಡೆದರೆ ನಗರ ಪ್ರದೇಶದ ಜನರಷ್ಟೇ ಅಲ್ಲದೆ ತಾಲ್ಲೂಕಿನ ಬಹುಪಾಲು ನಿರಾಶ್ರಿತರಿಗೆ ಸೂರು ನೀಡಿದಂತಾಗುತ್ತದೆ. ಇದರೊಟ್ಟಿಗೆ ಸ್ಥಳೀಯ ಪ್ರದೇಶದಲ್ಲಿ ಒಂದಿಷ್ಟು ಗೋಮಾಳದ ಜಮೀನನ್ನು ಮೀಸಲಿರಿಸಿಕೊಂಡು ಪ್ರಯತ್ನ ನಡೆಸಿದರೆ ಇನ್ನೂ ಒಳಿತು.

ಕ್ಷೇತ್ರದ ಹಾಲಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಒಂದಷ್ಟು ಕ್ರಿಯಾಶೀಲ ಶಾಸಕರೆನಿಸಿಕೊಂಡಿದ್ದು ಇದೀಗ ನಗರಸಭಾ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಗುರ್ತಿಸಿ ನಿವೇಶನ ಹಂಚುವ ಪ್ರಾಮಾಣಿಕ ಪ್ರಯತ್ನ ಮಾಡುವರೋ ಅಥವಾ ಈ ಹಿಂದಿನ ಕೆಲ ಶಾಸಕರಂತೆ ನಿವೇಶನ ಹಂಚಿಕೆಯ ಭರವಸೆಯ ಮಹಾಪೂರಗಳನ್ನು ಹರಿದುಬಿಡುವರೋ ಕಾದು ನೋಡಬೇಕಿದೆ.

      ಶಿರಾ ಕ್ಷೇತ್ರಕ್ಕೆ ಯಾರೇ ನೂತನವಾಗಿ ಶಾಸಕರು ಆಯ್ಕೆಯಾದ ಕೂಡಲೇ ಅವರ ಆಡಳಿತಾವಧಿ ಇನ್ನೇನು ಮುಗಿಯಲು ಸಮೀಪಿಸುತ್ತಿದೆ ಅನ್ನುವಾಗ ನಗರದ ಜನತೆಗೆ ಆಶ್ರಯ ನಿವೇಶನ ನೀಡುವ ಕಾತರಕ್ಕೆ ಮುಂದಾಗುತ್ತಾರೆ. ಆಡಳಿತಾವಧಿಯ ನಾಲ್ಕು ವರ್ಷಗಳಲ್ಲಿ ಕೊನೆಯ ಅಂತಿಮ ವರ್ಷದಲ್ಲಿ ಚುನಾವಣಾ ತಂತ್ರಗಾರಿಕೆಗೂ ಒಳಗಾಗಿ ಈ ಹಿಂದಿನ ಅನೇಕ ಶಾಸಕರು ಚುನಾವಣೆಗೂ ಮುನ್ನಾ ನಿವೇಶನ ಹಂಚುವ ಹೈ ಡ್ರಾಮಾ ನಡೆಸುವುದು ಹೊಸತೇನೂ ಅಲ್ಲವೆಂಬಂತಾಗಿದೆ.

      2004 ರ ಸಂದರ್ಭದಲ್ಲಿ ಶಾಸಕರಾಗಿದ್ದ ಪಿ.ಎಂ.ರಂಗನಾಥಪ್ಪನವರನ್ನು ಈಗಲೂ ಸೂರು ಹೊಂದಿದ ಅನೇಕ ಮಂದಿ ಗುಣಗಾನ ಮಾಡಿ ಕೊಂಡಾಡುವುದು ಸಾಮಾನ್ಯವಾಗಿದೆ. ನೆಲೆಯೇ ಇಲ್ಲದವರಿಗೆ ಅದರಲ್ಲೂ ಅನೇಕ ಅರ್ಹ ಮಂದಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಿದ ಕೀರ್ತಿ ದಿವಂಗತ ಪಿ.ಎಂ.ರಂಗನಾಥಪ್ಪ ಅವರದ್ದು.

      ಈ ಹಿಂದೆ ನಗರಸಭೆಗೆ ನಿವೇಶನ ಕೋರಿ ಫಲಾನುಭವಿಗಳು ಸಲ್ಲಿಸಿದ್ದ ಅರ್ಜಿಗಳು ಏನಾದವು ಎಂಬುದು ನಿಜಕ್ಕೂ ನಿಗೂಢವೇ ಸರಿ. ನಗರಸಭೆ ಆಹ್ವಾನಿಸಿದಾಗಲೆಲ್ಲಾ ನೂರಾರು ರೂ.ಗಳನ್ನು ಖರ್ಚು ಮಾಡಿ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡು ಅರ್ಜಿ ಹಾಕುತ್ತಿರುವ ಫಲಾನುಭವಿಗಳ ಜೇಬಿಗಂತೂ ನಿರಂತರವಾಗಿ ಕತ್ತರಿ ಬೀಳುತ್ತಿದೆಯೇ ಹೊರತು ಈವರೆಗೂ ಒಂದೇ ಒಂದು ನಿವೇಶನವನ್ನೂ ಫಲನುಭವಿಗಳು ಪಡೆಯಲಾಗಿಲ್ಲ.

  (ಬರಗೂರು ವಿರೂಪಾಕ್ಷ)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link