ತುಮಕೂರು : ಪಂಚವಾರ್ಷಿಕ ಯೋಜನೆಯಂತಾಗಿದೆ 24 ತಾಸು ನೀರು

 ತುಮಕೂರು : 

      ನಗರದಲ್ಲಿ ನಡೆಯುತ್ತಿರುವ 24 ತಾಸು ನೀರು ಸರಬರಾಜು ಯೋಜನೆ ಕಾಮಗಾರಿ ನಿಗದಿತ ಕಾಲಮಿತಿಯೊಳಗೆ ಮುಗಿಯದೆ ಪಂಚವಾರ್ಷಿಕ ಯೋಜನೆಯಂತೆ ಐದು ವರ್ಷ ಕಳೆಯುತ್ತಿದ್ದು, ಕಾಮಗಾರಿಯೂ ಲೋಪಗಳಿಂದ ಕೂಡಿರುವುದು ಜನರ ತೆರಿಗೆ ಹಣ ಪೋಲಾಗುತ್ತಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುವಂತೆ ಮಾಡಿದೆ.

      ಯುಐಡಿಎಸ್‍ಎಸ್‍ಎಂಟಿ, ಅಮೃತ್, ಅಮೃತ್ ಹೆಚ್ಚುವರಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಯೋಜನೆಯಡಿ 37 ಡಿಎಂಇ(ಜಲಸಂಗ್ರಹ ಟ್ಯಾಂಕ್)ಗಳ ಪೈಕಿ 24 ಡಿಎಂಇಗಳಿಗೆ ಸಂಪರ್ಕ ಕಲ್ಪಿಸಿ ಮನೆಗಳಲ್ಲಿ ನಲ್ಲಿ ಸಂಪರ್ಕ ಮೀಟರ್ ಅಳವಡಿಸುವ ಕಾರ್ಯ ನಡೆದಿದೆ. ಉಳಿದಂತೆ ಇನ್ನೂ 13 ಡಿಎಂಇಗಳು ಬಾಕಿ ಉಳಿದಿದ್ದು, 58,632 ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದು, 7551 ಬಾಕಿ ಉಳಿದಿದೆ. ಮೂರು ಯೋಜನೆಗಳಡಿ ಸರಾಸರಿ ಶೇ.70ರಷ್ಟು ಅನುದಾನ ಈಗಾಗಲೇ ವೆಚ್ಚವಾಗಿದ್ದು, ಉಳಿಕೆ 30ರಷ್ಟು ಅನುದಾನ ಮಂಜೂರಿಗೆ ಮುನ್ನಾ ಹಾಲಿ ಖರ್ಚು ಮಾಡಿರುವ ಅನುದಾನದ ಕಾಮಗಾರಿಗಳು ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿ ಮುಂದುವರಿಯಬೇಕಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ

ಯೋಜನೆಗಳ ಸ್ಥಿತಿಗತಿ:

      148.32 ಕೋಟಿಯ ಯುಐಡಿಎಸ್‍ಎಸ್‍ಎಂಟಿ ಯೋಜನೆ: 2016ರಲ್ಲಿ ಯುಐಡಿಎಸ್‍ಎಸ್‍ಎಂಟಿ ಯೋಜನೆಯಡಿ 148.32 ಕೋಟಿ ಮೊತ್ತದ ಟೆಂಡರ್ ಮಾಡಿ ಎಲ್ ಅಂಡ್ ಟಿ ಕಂಪನಿಗೆ 37 ಡಿಎಂಇ(ಜಲಸಂಗ್ರಹಗಾರ ಟ್ಯಾಂಕ್)ಗಳಿಗೆ ಪೈಪ್‍ಲೈನ್ ಅಳವಡಿಸಿ ಅಲ್ಲಿಂದ ಮನೆಗಳಿಗೆ ನಲ್ಲಿ ಸಂಪರ್ಕ ಮಾಡುವ ಜವಾಬ್ದಾರಿ ವಹಿಸಲಾಗಿತ್ತು. 579 ಕಿ.ಮೀ ಪೈಪ್‍ಲೈನ್ ಅಳವಡಿಸಬೇಕಾದ ಈ ಕಾಮಗಾರಿಯನ್ನು 21-07-2019ರ ದಿನಾಂಕಕ್ಕೆ ಮುಗಿಸಬೇಕೆಂದು ಗಡುವು ವಿಧಿಸಲಾಗಿತ್ತು. ಆದರೆ ಕೋವಿಡ್ ಕಾರಣ ಹೇಳಿ 2021 ಸೆಪ್ಟೆಂಬರ್‍ವರೆಗೆ ಕಾಲಮಿತಿ ವಿಸ್ತರಿಸಿ ಯೋಜನೆಗೆ ಅವಕಾಶ ಕಲ್ಪಿಸಲಾಗಿದೆ. ಸದ್ಯ 551 ಕಿ.ಮೀ.ಪೈಪ್ಲೈನ್ ಕಾಮಗಾರಿ ಮುಗಿದಿರುವುದಾಗಿ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದು,ಇನ್ನೂ 28 ಕಿ.ಮೀ ಪೈಪ್‍ಲೈನ್ ಕಾಮಗಾರಿ ಬಾಕಿ ಇದೆ. 2 ಓವರ್ ಹೆಡ್ ಟ್ಯಾಂಕ್ ಸಹ ಯೋಜನೆಯಡಿ ನಿರ್ಮಿಸಿದ್ದು, 40,300 ಮನೆ ಕನೆಕ್ಷನ್‍ಗುರಿಯ ಪೈಕಿ 33,586 ಸಂಪರ್ಕ ಕಲ್ಪಿಸಲಾಗಿದೆ.ಇನ್ನೂ 6,714 ಕನೆಕ್ಷನ್ ಬಾಕಿ ಇದೆ. 148.32 ಕೋಟಿ ಯೋಜನೆ ವೆಚ್ಚದ ಪೈಕಿ 91,79 ಕೋಟಿಯಷ್ಟು ಗುತ್ತಿಗೆದಾರರಿಗೆ ವೆಚ್ಚದ ಅನುದಾನ ಒದಗಿಸಲಾಗಿದೆ.

ಅಮೃತ್ ಯೋಜನೆಯಡಿ 7,500 ಮನೆಗಳಿಗೆ ನಲ್ಲಿ ಸಂಪರ್ಕ:

     ಅಮೃತ್ ಯೋಜನೆಯಡಿ 73 ಕಿ.ಮೀ ಪೈಪ್‍ಲೈನ್ ಕಾಮಗಾರಿಯ ಟೆಂಡರ್ ಅನ್ನು ರಮೇಶ್ ಎಂಬ ಗುತ್ತಿಗೆದಾರರು 2019ರಲ್ಲಿ ಪಡೆದಿದ್ದು, 36.94 ಕೋಟಿ ಮೊತ್ತದ ಕಾಮಗಾರಿಯಲ್ಲಿ ಮೆಳೆಕೋಟೆ, ಸಂತೆಮೈದಾನದಲ್ಲಿ ಎರಡು ಓವರ್‍ಹೆಡ್ ಟ್ಯಾಂಕ್, ವಿದ್ಯಾನಗರ, ಸಂತೆಮೈದಾನದಲ್ಲಿ ಭೂಮಟ್ಟದ ಜಲಸಂಗ್ರಹಗಾರಗಳನ್ನು ನಿರ್ಮಿಸುವ ಜೊತೆಗೆ 4 ಡಿಎಂಇ ಹಾಗೂ 7,500 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಜವಾಬ್ದಾರಿ ನೀಡಲಾಗಿತ್ತು. ಈ ಪೈಕಿ ಮನೆಗಳ ನಲ್ಲಿ ಸಂಪರ್ಕ ಕಾರ್ಯ ಅಷ್ಟು ಪೂರ್ಣಗೊಂಡಿದ್ದು, ಟ್ಯಾಂಕ್ ಕಾಮಗಾರಿ ಸ್ವಲ್ಪ ಬಾಕಿ ಇದೆ. 29.28 ಕೋಟಿ ಈವರೆಗೆ ಅನುದಾನ ಪಾವತಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

      ಇನ್ನೂ 2018ರಲ್ಲಿ ಚಾಲೂಗೊಳಿಸಲಾದ ಅಮೃತ್ ಹೆಚ್ಚುವರಿ ಯೋಜನೆಯ ಗುತ್ತಿಗೆಯು ರಮೇಶ್ ಎಂಬುವರಿಗೆ ಸಿಕ್ಕಿದ್ದು 74.88 ಕೋಟಿ ಯೋಜನಾ ಟೆಂಡರ್ ಮೊತ್ತವಾಗಿದೆ. ಈ ಮೊತ್ತದಲ್ಲಿ ಆರು ಓವರ್ ಹೆಡ್‍ಟ್ಯಾಂಕ್‍ಗಳು, 349 ಕಿ.ಮೀ ಪೈಪ್‍ಲೈನ್, 18,583 ಮನೆಗಳಿಗೆ ನಲ್ಲಿ ಸಂಪರ್ಕವನ್ನು 1.1.2020ರಲ್ಲೇ ಪೂರ್ಣಗೊಳಿಸಬೇಕಿದ್ದು, ಒಂದೂವರೆ ವರ್ಷ ವಿಳಂಬವಾಗಿದೆ. ಪ್ರಸಕ್ತ 17,564 ಸಂಪರ್ಕ ಪೂರ್ಣಗೊಂಡು 1037 ನಲ್ಲಿ ಸಂಪರ್ಕ ಬಾಕಿಯಿದೆ. 324 ಕಿಮೀ ಪೈಪ್‍ಲೈನ್ ಕಂಪ್ಲೀಟ್ ಆಗಿದ್ದು, 25 ಕಿ.ಮೀ ಮಾತ್ರ ಬಾಕಿ ಇದೆ. ಈವರೆಗೆ 71.65ಕೋಟಿ ಬಿಲ್ ಸಹ ಯೋಜನೆ ಕಾಮಗಾರಿಗೆ ಪಾವತಿಯಾಗಿದೆ.

ಎರಡು ತಿಂಗಳಲ್ಲಿ ಮುಗಿಯುವುದೇ? :

      ಸೆಪ್ಟೆಂಬರ್ ಅಂತ್ಯದೊಳಗೆ ಮೂರು ಯೋಜನೆ ಕಾಮಗಾರಿಗಳು ಅಂತಿಮಗೊಳ್ಳಲಿದೆ ಎಂದು ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಹೇಳುತ್ತಿದ್ದು, ಈಗಾಗಲೇ ನಿಗದಿತ ಗಡುವಿಗಿಂತ ಎರಡು ವರ್ಷ ಮುಂದಕ್ಕೆ ತಳ್ಳಲ್ಪಟ್ಟಿರುವ ಕಾಮಗಾರಿಗಳು ಇನ್ನೆರೆಡು ತಿಂಗಳಲ್ಲಿ ಗುಣಮಟ್ಟದಿಂದ ಮುಗಿಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

5 ವರ್ಷ ಮೈಂಟೆನೈನ್ಸ್ ಹೊಣೆ, 1 ವರ್ಷ ದುರಸ್ಥಿ ಜವಾಬ್ದಾರಿ

      ಕಾಮಗಾರಿ ಮುಗಿದ ಮಾತ್ರಕ್ಕೆ ಟೆಂಡರ್‍ದಾರರ ಕೆಲಸ ಮುಗಿಯತೆಂಬುದಲ್ಲ. ಯೋಜನೆ ಪೂರ್ಣಗೊಳಿಸಿ ಮನೆಗಳಿಗೆ ನೀರು ಸರಬರಾಜು ಮೀಟರ್ ಅಳವಡಿಸಿ ಪಾಲಿಕೆಗೆ ಹಸ್ತಾಂತರಿಸಿದ ಮೇಲೆ 5 ವರ್ಷ ನಿರ್ವಹಣೆ(ಪ್ರತ್ಯೇಕ ವೆಚ್ಚ( ಯನ್ನು ಮಾಡಬೇಕಿದೆ. 1 ವರ್ಷದೊಳಗೆ ಏನಾದರೂ ಡ್ಯಾಮೇಜ್ ಆದರೆ ಅದನ್ನು ಟೆಂಡರ್‍ದಾರರೇ ತಮ್ಮ ವೆಚ್ಚದಲ್ಲಿ ಮರುಪೂರ್ಣಗೊಳಿಸಬೇಕೆಂಬ ನಿಬಂಧನೆಯಿದೆ. ಕಾಮಗಾರಿ ಮುಗಿಯುವ ಮುನ್ನವೇ ಇರುವ ಲೋಪಗಳನ್ನು ಸರಿಪಡಿಸಿ ನಾಗರಿಕರಿಗೆ ಕಿರಿಕಿರಿಯಿಲ್ಲದಂತೆ 24 ತಾಸು ನೀರು ಸರಬರಾಜು ಮಾಡಬೇಕೆಂಬದು ಸಾರ್ವಜನಿಕರ ಆಗ್ರಹವಾಗಿದೆ.

     ಮತ್ತೆ ವಿಳಂಬ ಮಾಡದೆ ವಿಸ್ತರಿತ ಕಾಲಾವಧಿಯಲ್ಲಿ 24 ತಾಸು ನೀರು ಸರಬರಾಜು ಕಾಮಗಾರಿ ಮುಗಿಸಬೇಕೆಂದು ಟೆಂಡರ್‍ದಾರರಿಗೆ ಸೂಚಿಸಲಾಗಿದೆ. ಬಿಡುಗಡೆಯಾಗುವ ಕಾಮಗಾರಿ ಬಾಬ್ತು ಮೂರನೇ ಪಾರ್ಟಿ ಪರಿಶೀಲನೆ ಬಳಿಕವೇ ಮುಂಜೂರು ಮಾಡುವಂತಹುದಾಗಿದ್ದು, ಪೈಪ್‍ಲೈನ್ ಹಾಕಿರುವ ಕಡೆ ರೆಸ್ಟೊರೇಷನ್ ಸರಿಯಿಲ್ಲದಿರುವುದು ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲು ಸೂಚಿಸಿದ್ದೇವೆ.

-ವೀರನಗೌಡ ಎಕ್ಸಿಕ್ಯೂಟಿವ್ ಎಂಜಿನಿಯರ್, ನಗರ ನೀರು ಸರಬರಾಜು ಮಂಡಳಿ.

Recent Articles

spot_img

Related Stories

Share via
Copy link
Powered by Social Snap