ತುಮಕೂರು:
ಸಾರ್ವಜನಿಕ ರಸ್ತೆಗೆ ಬೇಲಿ ಹಾಕುವ ಮೂಲಕ ಓಡಾಟಕ್ಕೆ ಅಡ್ಡಿ ಮಾಡಿರುವ ಘಟನೆ ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಬೆಳ್ಳಿಬಟ್ಟಲಹಳ್ಳಿ ಗ್ರಾಮದಲ್ಲಿ ಜರುಗಿದೆ.
ಸದರಿ ಗ್ರಾಮದಲ್ಲಿ ಸುಮಾರು 80 ಮನೆಗಳಿದ್ದು, ಈ ಜನಕ್ಕೆಲ್ಲ ಅತ್ಯವಶ್ಯಕವಾಗಿರುವ ರಸ್ತೆಗೆ ಗ್ರಾಮಸ್ಥರೊಬ್ಬರು ಅಡ್ಡಿಪಡಿಸುತ್ತಿದ್ದಾರೆಂಬುದು ಗ್ರಾಮಸ್ಥರ ದೂರಾಗಿದೆ. ಸ.ನಂ.18/1 ರಲ್ಲಿ ಸುಮಾರು 50-60 ವರ್ಷಗಳಿಂದಲೂ ಇಲ್ಲಿ ರಸ್ತೆ ಇದ್ದು, ಇದಕ್ಕೆ 3-4 ಬಾರಿ ಸರ್ಕಾರದಿಂದ ಜಲ್ಲಿ ಹಾಗೂ ಮಣ್ಣನ್ನು ಹಾಕಿ ಓಡಾಡಲಿಕ್ಕೆ ಅನುಕೂಲ ಕಲ್ಪಿಸಿದ್ದರು. ಈ ರಸ್ತೆಗೆ ಸರ್ಕಾರದಿಂದ ಒಳಚರಂಡಿ ರಸ್ತೆ ಕಾಮಗಾರಿ ಆರಂಭವಾಗಿದ್ದು, ಗ್ರಾಮದ ಜಮೀನಿನ ಮಾಲೀಕರಾದ ಗಂಗಹುಚ್ಚಯ್ಯ ಮತ್ತವರ ಮಕ್ಕಳು ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಇದರಿಂದ ಕೂಲಿ ಕಾರ್ಮಿಕರು, ವೃದ್ಧರು, ಮಕ್ಕಳು, ಗರ್ಭಿಣಿಯರು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರತರಹದ ತೊಂದರೆ ಉಂಟಾಗಿದೆ.
ರಸ್ತೆಗೆ ಬೇಲಿ ಹಾಕಿ ಅಡ್ಡಪಡಿಸುತ್ತಿರುವುದರಿಂದ ಸುಮಾರು 3 ತಿಂಗಳಿನಿಂದಲೂ ಜನರು ಓಡಾಡಲಿಕ್ಕೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಊರ್ಡಿಗೆರೆ ಗ್ರಾಪಂ ಅಧಿಕಾರಿಗಳಿಗೂ ಮನವಿ ಮಾಡಿಕೊಂಡಿದ್ದೇವೆ. ಅವರು ಕೂಡ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ತಿಳಿಸಿದ್ದರೂ ಕೂಡ ಇದುವರೆವಿಗೂ ರಸ್ತೆಗೆ ಅಡ್ಡಲಾಗಿ ಹಾಕಿರುವ ಬೇಲಿಯನ್ನು ತೆರವುಗೊಳಿಸಿರುವುದಿಲ್ಲ.
ತುಮಕೂರು ಉಪ ವಿಭಾಗಾಧಿಕಾರಿಗಳಿಗೂ ಈ ಬಗ್ಗೆ ದೂರು ನೀಡಲಾಗಿದ್ದು, ಅವರು ಸ್ಥಳ ಪರಿಶೀಲನೆ ಮಾಡಿ ಕಾನೂನು ರೀತ್ಯ ಸೂಕ್ತಕ್ರಮ ಕೈಗೊಳ್ಳುವಂತೆ ತಿಳಿಸಿದ್ದರೂ ಸಹ ಸುಗಮ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿರುವುದಿಲ್ಲ. ಇನ್ನಾದರೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಕೂಡಲೇ ಸ್ಥಳ ತನಿಖೆ ಕೈಗೊಂಡು ರಸ್ತೆಗೆ ಹಾಕಿರುವ ಬೇಲಿಯನ್ನು ತೆರವುಗೊಳಿಸಿಕೊಡುವಂತೆ ಈ ಮೂಲಕ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
