ಕೊಡಿಗೇನಹಳ್ಳಿ :
ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ವರ್ಷ ಕಳೆದರೂ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಕೆಸರು ಗದ್ದೆಯಂತಾಗಿದ್ದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮಧುಗಿರಿ ತಾಲ್ಲೂಕು ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಾಲೂರು-ವೀರಾಪುರಕ್ಕೆ ಹೋಗುವ ರಸ್ತೆಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ವರ್ಷ ಕಳೆದಿದೆಯಾದರೂ ರಸ್ತೆ ಕಾಮಗಾರಿ ಪೂರ್ಣವಾಗಿಲ್ಲ. ಸಾರ್ವಜನಿಕರು, ವಿದ್ಯಾರ್ಥಿಗಳು, ವೈದ್ಯರು ಅನುಭವಿಸುತ್ತಿರುವ ಪಡಿಪಾಟಲು ಯಾರಿಗೆ ಹೇಳಬೇಕು? ಸುಮಾರು 2 ಕಿಲೋಮೀಟರ್ ಉದ್ದದ ರಸ್ತೆಯ ಡಾಂಬರು ಹಾಳಾಗಿ, ಆಳವಾದ ಗುಂಡಿಗಳು ಬಿದ್ದು, ಈಗಾಗಲೆ ಹಲವಾರು ಮಂದಿ ಬಿದ್ದು ಕೈ-ಕಾಲುಗಳಿಗೆ ಗಾಯಗಳನ್ನು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಅದರಲ್ಲೂ ಈಗ ಮಳೆಗಾಲವಾಗಿದ್ದು, ಕೆಸರು ಗದ್ದೆಯಂತಾಗಿರುವ ನೀರು ತುಂಬಿದ ಗುಣಿಗಳಿಂದ ರಸ್ತೆ ಯಾವುದು ಎಂಬುದೇ ತಿಳಿಯದೆ, ವಾಹನ ಸವಾರರ ಪರದಾಟ ಹೇಳತೀರದಾಗಿದೆ.
ಹದಗೆಟ್ಟಿದ್ದ ಈ ರಸ್ತೆಯ ದುರವಸ್ಥೆಯನ್ನು ಕಣ್ಣಾರೆ ಕಂಡಿದ್ದ ಶಾಸಕ ಎಂ.ವಿ ವೀರಭದ್ರಯ್ಯನವರು ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ, ಶೀಘ್ರದಲ್ಲೇ ವೀರಾಪುರ-ಚಿಕ್ಕಮಾಲೂರು ರಸ್ತೆ ಅಭಿವೃದ್ದಿ, ನಂತರ ತಿಗಳರಹಳ್ಳಿ ರಸ್ತೆ ಅಭಿವೃದ್ಧಿ ಕೂಡ ಕೈಗೆತ್ತಿಕೊಳ್ಳಲಾಗುವುದು ಎಂದು ಜನರಿಗೆ ಭರವಸೆ ನೀಡಿದ್ದರು. ಆದರೆ ಇಲ್ಲಿ ಗುತ್ತಿಗೆದಾರ ಕೇವಲ ರಸ್ತೆ ಅಗಲೀಕರಣ ಮಾಡಿ, ಮಣ್ಣು ಹಾಕಿ ಬಿಟ್ಟಿರುವುದರಿಂದ ಮಹಿಳೆ ಯರು, ವೃದ್ದರು, ವಾಹನ ಸವಾರರು ಜೊತೆಗೆ ರೈತರು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ. ಹಾಗೆಂದು ನಿವೃತ್ತ ಶಿಕ್ಷಕ ಕೆ.ವಿ ಹೊಸಳ್ಳಯ್ಯ, ಕದುರಪ್ಪ, ಲಕ್ಷ್ಮೀಪತಿ, ಲಿಂಗಪ್ಪ, ಶಿವರಾಜ್, ಲೋಕೇಶ್, ಕುಮಾರಪ್ಪ, ಮಂಜುನಾಥ್, ಮಹೇಂದ್ರ, ಅರುಣ, ಸಿ.ಎಲ್. ಬಾಬು, ಶ್ರೀನಿವಾಸ್, ಲಕ್ಷ್ಮಯ್ಯ, ಶೋಭಾ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ