ಗುಬ್ಬಿ :

ರಾಮ ಮಂದಿರ ಮತ್ತು ಹಿಂದುತ್ವದ ಬಗ್ಗೆ ಮಾತನ್ನಾಡುತ್ತಾ ಅಧಿಕಾರಕ್ಕೆ ಬಂದ ಬಿಜೆಪಿಯ ವಿಕೃತ ಮನಸ್ಥಿತಿ ಈಗ ಹಿಂದೂ ದೇವಾಲಯಗಳ ನೆಲಸಮ ಮಾಡುವ ಮೂಲಕ ಅನಾವರಣಗೊಂಡಿದೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಕಿಡಿಕಾರಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಚಂಗಾವಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಪಡೆಯಲು ರಾಮಮಂದಿರ ಮತ್ತು ಹಿಂದುತ್ವದ ಬಗ್ಗೆ ಭಾಷಣ ಮಾಡಿ, ಈಗ ಸಾಲು ಸಾಲು ಹಿಂದೂ ದೇವಾಲಯಗಳನ್ನು ಕೆಡವಲು ಮುಂದಾಗಿರುವುದು ಅವರ ಮತ್ತೊಂದು ಮುಖ ಬಯಲಾಗಿದೆ ಎಂದರು.
ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಹರದನಹಳ್ಳಿಯಲ್ಲಿನ ಪುರಾತನ ಆಂಜನೇಯ ದೇವಾಲಯವನ್ನು ನೆಲಸಮ ಮಾಡುವ ಮೂಲಕ ಆಸ್ತಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಬಿಜೆಪಿ ಸರ್ಕಾರವು ಸ್ವಪಕ್ಷದ ಸಂಸದರು, ಅರ್ಚಕರು, ಆಗಮಿಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದರು.
ಬೀದಿಗಿಳಿದು ಪ್ರತಿಭಟಿಸುವ ಆಸ್ತಿಕರ ಭಾವನೆ ಜೊತೆ ಆಟವಾಡಿದ್ದು ಸರಿಯಲ್ಲ, ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ದೇವಾಲಯಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶವಿದ್ದು, ದೇವಾಲಯ ರಕ್ಷಣೆಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದರೂ, ಬಿಜೆಪಿ ಸರ್ಕಾರವು ಕೋರ್ಟ್ ಆದೇಶವನ್ನೇ ಅಸ್ತ್ರವಾಗಿಸಿಕೊಂಡು ಒಂದು ಧರ್ಮದ ಜನರ ಧಾರ್ಮಿಕ ಭಾವನೆ ಮೇಲೆ ಕೆಟ್ಟ ಪ್ರಹಾರ ಬೀಸಿದೆ.
-ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರು
ಸ್ವಪಕ್ಷೀಯರೇ ತೊಡೆ ತಟ್ಟುತ್ತಿದ್ದಾರೆ :
ತುರುವೇಕೆರೆ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಓಡಾಟದ ಬಗ್ಗೆ ಪ್ರತಿಕ್ರಿಯಿಸಿ, ಸ್ವಪಕ್ಷೀಯರೇ ತೊಡೆ ತಟ್ಟುತ್ತಿದ್ದಾರೆ. ಆದರೇ ತಮ್ಮದು ಯಾವ ಪಕ್ಷ ಎಂದು ಹೇಳಲಾಗದ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ, ಎಲ್ಲವೂ ರಾಜಕೀಯ ಧೃವೀಕರಣ, ಕಾದು ನೋಡೋಣ ಎಂಬ ಮಾರ್ಮಿಕ ನುಡಿಗಳಾಡಿದ ಅವರು ತುರುವೇಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಟ ಎಂಬುದು ಎಲ್ಲರಿಗೂ ತಿಳಿದಿದ್ದು, ಮುಂದಿನ ದಿನಗಳಲ್ಲಿ ಮತದಾರರೇ ನಿರ್ಧರಿಸಲಿದ್ದಾರೆ ಎಂದು ಎಂ.ಟಿ.ಕೃಷ್ಣಪ್ಪ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








