ಉದ್ಯೋಗ ಖಾತ್ರಿಯಲ್ಲಿ ಹಣ ದುರ್ಬಳಕೆ ಆರೋಪ

ಎಂ.ಎನ್.ಕೋಟೆ :

ಗ್ರಾಪಂನ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸುತ್ತಿರುವುದು.

     ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಎಂ.ಎನ್.ಕೋಟೆ ಗ್ರಾಪಂ ಕಛೇರಿಯಲ್ಲಿ ಹಣ ದುರುಪಯೋಗ ಆರೋಪ ಕೇಳಿ ಬಂದಿದೆ. ಗ್ರಾಪಂಯ ಪ್ರಭಾರ ಪಿಡಿಓ ಆಗಿರುವ ನಾಗೇಂದ್ರ ಅವರು 2018 ರಿಂದ 2021ನೇ ಸಾಲಿನವರೆಗೆ ನಡೆದಿರುವ ಕಾಮಗಾರಿಗಳಿಗೆ ಸರಿಯಾದ ಕ್ರಿಯಾ ಯೋಜನೆ ಮಾಡದೇ ಹಣ ದುರುಪಯೋಗ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಯಂತ್ರ ಬಳಸಿ ಕಾಮಗಾರಿ :

      ಗ್ರಾಪಂ ನಿಧಿ-1, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 14 ಹಾಗೂ 15ನೇ ಹಣಕಾಸು ಯೋಜನೆ, ಇ-ಸ್ವತ್ತು, ಎಸ್‍ಸಿ-ಎಸ್‍ಟಿ ಕಲ್ಯಾಣನಿಧಿ ಯೋಜನೆಗೆ ಸಂಬಂಧಿಸಿದಂತೆ ಬಾರಿ ಅವ್ಯವಹಾರ ನಡೆದಿರುವುದಾಗಿ ಪಿಡಿಒ ವಿರುದ್ಧ ದೂರಿರುವ ಗ್ರಾಮಸ್ಥರು, ವಿವಿಧ ಯೋಜನೆಗಳಾದ ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿ ಹೊಂಡ, ಕೆರೆ ಹೂಳು ತೆಗೆಯುವುದು, ಸಿಸಿ ರಸ್ತೆ, ಜಲ್ಲಿ ರಸ್ತೆ, ಹಾಗೂ ಕಲ್ಯಾಣಿ ಅಭಿವೃದ್ಧಿಗಳಂತಹ ಕಾಮಗಾರಿಗಳನ್ನು ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸಬೇಕು. ಆದರೆ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಟೆಂಡರ್ ಕರೆದು ದರ ನಿರ್ಧರಿಸಿರುವವರೆ ಸಾಮಗ್ರಿ ಸರಬರಾಜು ಮಾಡಬೇಕು ಆದರೆ ಮನಸ್ಸೊಯಿಚ್ಛೆ ಗುತ್ತಿಗೆದಾರರ ಹೆಸರಿಗೆ ಸಾಮಗ್ರಿಗಳ ಬಿಲ್ಲುಗಳನ್ನು ಹಾಕಲಾಗಿದೆ.

ಒಂದೇ ಕಾಮಗಾರಿಗೆ 2 ಯೋಜನೆ ಹಣ :

      2018 ರಿಂದ ಇಲ್ಲಿನವರೆಗೆ ನಡೆದಿರುವ ಕಾಮಗಾರಿಗಳಲ್ಲಿ ಕಟಾಯಿಸಲಾಗಿರುವ ರಾಯಲ್ಟಿ ಹಣವನ್ನು ಸಂಬಂಧಪಟ್ಟ ಲೆಕ್ಕ ಶಿರ್ಷೀಕೆಗೆ ಜಮೆ ಮಾಡಬೇಕು. ಇಲ್ಲಿಯವರೆಗೂ ಯಾವುದೇ ಹಣವನ್ನು ಸಂಬಂಧಿಸಿದ ಲೆಕ್ಕ ಶಿರ್ಷೀಕೆಗೆ ಜಮೆ ಮಾಡಿರುವುದಿಲ್ಲ. 14ನೇ ಹಣಕಾಸು ಯೋಜನೆಯಲ್ಲಿ ಖರ್ಚು ಮಾಡಿದ್ದು ಮತ್ತೆ ನಿಧಿ-1 ರಲ್ಲಿಯೂ ಸಹ ಖರ್ಚು ಮಾಡಿದ್ದಾರೆ. ಕುಡಿಯುವ ನೀರು ನಿರ್ವಹಣೆ, ಬೀದಿ ದೀಪ ಖರೀದಿ ಮಾಡಿರುವ ಬಗ್ಗೆ ಹಾಗೂ ಇತರೇ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಇದ್ದರೂ ಬಿಲ್ ಪಾಸ್ ಮಾಡಿದ್ದು, ಕಮಿಷನ್ ಲೆಕ್ಕದಲ್ಲಿ ಅಂಗಡಿಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಆದ್ದರಿಂದ ಮರು ಲೆಕ್ಕ ತಪಾಸಣೆ ನಡೆಸಿ ಸದರಿ ಪಿಡಿಓ ವಿರುದ್ಧ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಲಂಚವಿಲ್ಲದೆ ಕೆಲಸ ಆಗಲ್ಲ :

     ಗ್ರಾಪಂನಲ್ಲಿ ಇ-ಸ್ವತ್ತು ಅಕ್ರಮಗಳನ್ನು ತಡೆಯಬೇಕು. ಲಂಚ ಕೊಟ್ಟರೆ ಮಾತ್ರ ಜನರಿಗೆ ಕೆಲಸ ಎಂಬಂತಾಗಿದ್ದು, ದುಡ್ಡು ಕೊಡದಿದ್ದರೇ ದಾಖಲೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಕೆಲವು ಪ್ರಭಾವಿಗಳಿಗೆ ದಾಖಲೆಗಳು ಇಲ್ಲದಿದ್ದರೂ ಸಹ ಇ-ಸ್ವತ್ತು ಮಾಡಿಕೊಡಾಗುತ್ತಿದೆ. ಆದರೇ ಜನ ಸಾಮಾನ್ಯರಿಗೆ ದಾಖಲೆ ಸರಿ ಇಲ್ಲ ಎಂದು ಸಬೂಬು ಹೇಳುತ್ತಾರೆ. ಅಲ್ಲದೇ ಸರಿಯಾದ ಸಮಯಕ್ಕೆ ಕಛೇರಿಗೆ ಬಾರದೆ ಜನರನ್ನು ಅಲೆದಾಡಿಸುತ್ತಿದ್ದು, ಜನ ವಿರೋಧಿ ಪಿಡಿಓ ಅವರನ್ನು ಶೀಘ್ರ ಅಮಾನತ್ತು ಮಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link