ಲಸಿಕೆ ವಿತರಣೆಯಲ್ಲಿ ಭಾರತ ಯಶಸ್ವಿ

ಬಳ್ಳಾರಿ:

                                                                                                                                                 ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮದಿಂದಾಗಿ ಕೋವಿಡ್ ಸೋಂಕು ನಿಯಂತ್ರಿಸುವ ಲಸಿಕೆಯನ್ನು ದೇಶದಲ್ಲಿ ನೂರು ಕೋಟಿ ಡೋಸ್ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಮ್ಮಾರಿ ಕೋವಿಡ್ ಸೋಂಕು ಕಳೆದ ಎರಡು ವರ್ಷಗಳಿಂದ ಭಾರತ ಸೇರಿ ವಿಶ್ವವನ್ನೇ ಕಾಡುತ್ತಿದೆ. ಕೋವಿಡ್ ಸೋಂಕು ನಿಯಂತ್ರಿಸುವಲ್ಲಿ ಭಾರತದಲ್ಲೇ ಸಿದ್ಧಪಡಿಸಿದ ಲಸಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸಮರ್ಥವಾಗಿ ನೂರು ಕೋಟಿ ಡೋಸ್ ನೀಡುವ ಮೂಲಕ ವಿಶ್ವವೇ ನಿಬ್ಬೆರಗಾಗಿ ಭಾರತದತ್ತ ನೋಡುವಂತಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ 2021 ಜನವರಿ 16 ರಂದು ಆರಂಭವಾದ ಲಸಿಕೆ ನೀಡುವ ಅಭಿಯಾನ ಆರೋಗ್ಯ ಇಲಾಖೆ ಸಿಬ್ಬಂದಿಯ ಶ್ರಮ, ಮಾಧ್ಯಮಗಳ ಸಹಕಾರದಿಂದಾಗಿ ದೇಶಾದ್ಯಂತ ನೂರು ಕೋಟಿ ಡೋಸ್ ನೀಡುವಲ್ಲಿ ಯಶಸ್ವಿಯಾಗಿದ್ದು, ಶತಕೋಟಿ ಡೋಸ್ ದಾಟಿದ ವಿಶ್ವದ ಏಕೈಕ ದೇಶ ಭಾರತವಾಗಿದೆ ಎಂದು ವಿವರಿಸಿದರು.

ಕಳೆದ 2020 ಮಾರ್ಚ್ ತಿಂಗಳಲ್ಲಿ ಆವರಿಸಿದ್ದ ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಹಲವು ಪ್ರಯತ್ನಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಹಲವು ಮುಂಜಾಗ್ರತಾ ಕ್ರಮ, ಲಸಿಕೆಯನ್ನು ಸಿದ್ಧಪಡಿಸಿ ಅದನ್ನು ಕೇಂದ್ರ, ರಾಜ್ಯ ಸರ್ಕಾರಗಳು ಸಮರ್ಥವಾಗಿ ಅನುಷ್ಠಾನಕ್ಕೆ ತರುವ ಮೂಲಕ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಮುತುವರ್ಜಿ ವಹಿಸಿದ್ದಾರೆ ಎಂದು ಶಾಸಕರು ಸ್ಮರಿಸಿದರು.

ಜಗತ್ತಿನಲ್ಲಿ ಮುಂದುವರೆದ ದೇಶಗಳಿಗಿಂತಲೂ ಲಸಿಕೆ ನೀಡುವಲ್ಲಿ ಭಾರತ ಮುಂದಿದೆ. ಇದಕ್ಕೆ ಕಾರಣ ದೇಶದ ಪ್ರಧಾನಿಗಳ ಇಚ್ಛಾಶಕ್ತಿ, ವಿಜ್ಞಾನಿಗಳ ಪ್ರಯತ್ನ, ಆರೋಗ್ಯ ಇಲಾಖೆ ಇನ್ನಿತರೆ ಇಲಾಖೆಗಳ ನೌಕರರ ಪರಿಶ್ರಮವೇ ಕಾರಣವಾಗಿದೆ. ಮಹಮ್ಮಾರಿ ಕೋವಿಡ್ ಸೋಂಕನ್ನು ನಿಯಂತ್ರಿಸುವಲ್ಲಿ ಭಾರತ ದೇಶ ಸಶಕ್ತವಾಗಲು ಕಾರಣರಾದ ಎಲ್ಲರಿಗೂ ಪಕ್ಷದಿಂದ ಧನ್ಯವಾದಗಳನ್ನು ತಿಳಿಸುವೆ ಎಂದು ಸ್ಮರಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ಬಿ.ಕೆ.ಸುಂದರ್ ಮಾತನಾಡಿ, ಕೋವಿಡ್ ನಿಯಂತ್ರಿಸುವಲ್ಲಿ ದೇಶದಲ್ಲೇ ಅತಿದೊಡ್ಡ ಅಭಿಯಾನ ಕೋವಿಡ್ ಲಸಿಕೆಯಾಗಿದ್ದು, ಈವರೆಗೆ ನೀಡಿರುವ ಡೋಸ್‍ಗಳ ಸಂಖ್ಯೆ ಶತಕೋಟಿ ದಾಟಿದೆ. ದೇಶದಲ್ಲಿ 71 ಕೋಟಿ ಜನರು ಮೊದಲ ಡೋಸ್ ಪಡೆದಿದ್ದರೆ, 29 ಕೋಟಿ ಜನರು ಎರಡನೇ ಡೋಸ್ ಪಡೆದಿದ್ದಾರೆ. ಭಾರತದಲ್ಲೇ ಸಿದ್ಧಪಡಿಸಿದ್ದ ಲಸಿಕೆ ಇದಾಗಿದೆ ಎಂದ ಅವರು, ಶೇ. 51 ರಷ್ಟು ಜನರು ಪ್ರಥಮ, ಶೇ.21 ರಷ್ಟು ಜನರು ಎರಡನೇ ಡೋಸ್ ಪಡೆದಿದ್ದಾರೆ. ಇನ್ನು ಬಹಳಷ್ಟು ಜನರು ಲಸಿಕೆ ಪಡೆಯಬೇಕಾಗಿದ್ದು, ಭಯದಿಂದ ದೂರ ಉಳಿದಿದ್ದಾರೆ.

ಅಂತಹವರಿಗೆಲ್ಲ ಜಾಗೃತಿ ಮೂಡಿಸಿ ಲಸಿಕೆ ಪಡೆಯುವಂತೆ ಪ್ರೇರೇಪಿಸಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 24 ಲಕ್ಷ ಜನರಿಗೆ ಲಸಿಕೆ ನೀಡುಗ ಗುರಿ ಹೊಂದಲಾಗಿತ್ತು. ಈ ಪೈಕಿ 18-44 ವಯೋಮಾನದವರಿಗೆ ಮೊದಲ ಡೋಸ್ ಶೇ.100 ರಷ್ಟು ಗುರಿ ಸಾಧಿಸಲಾಗಿದೆ. 2,84,366 ಜನರು ಎರಡನೇ ಡೋಸ್ ಪಡೆದಿದ್ದಾರೆ. 45-59 ವಯೋಮಾನದ 412,540 ಜನರಿಗೆ ಹಾಕಿ ಶೇ.100 ರಷ್ಟು ಗುರಿ ತಲುಪಿದ್ದು, ಎರಡನೇ ಡೋಸ್ 2,68,480 ಜನರಿಗೆ ಹಾಕಲಾಗಿದೆ. 60ಕ್ಕೂ ಮೇಲ್ಪಟ್ಟ ವಯಸ್ಸಿನವರಿಗೆ ಮೊದಲ ಡೋಸ್ ಗುರಿ ತಲುಪಲಾಗಿದ್ದು, ಎರಡನೇ ಡೋಸ್ 4.49 ಲಕ್ಷ ಜನರಿಗೆ ಹಾಕಲಾಗಿದೆ. ಎರಡನೇ ಡೋಸ್ ಪಡೆಯುವಲ್ಲಿ ಜನರು ಹಿಂದೇಟು ಹಾಕುತ್ತಿದ್ದು, ಈ ಕುರಿತು ಪುನಃ ಪಕ್ಷದಿಂದ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.
ಇನ್ನು ಮೂರನೇ ಅಲೆ ಮಕ್ಕಳಿಗೆ ಬರುವ ಸಾಧ್ಯತೆಯಿದೆ ಎಂದ ಅವರು, ಈಗಾಗಲೇ ಇಂಗ್ಲೆಂಡ್ ದೇಶದಲ್ಲಿ ಮಕ್ಕಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಭಾರತದಲ್ಲೂ ಅಗತ್ಯ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇನ್ನು ಲಸಿಕೆಯು ದೇಹದಲ್ಲಿ ಎಷ್ಟು ದಿನ ರಕ್ಷಣೆ ಮಾಡಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಸುಂದರ್ ಅವರು, ಅದನ್ನು ನಿರ್ದಿಷ್ಟವಾಗಿ ಹೇಳೋಕೆ ಆಗಲ್ಲ. ಅದು ದೀರ್ಘಕಾಲಿಕವಾಗಿಯೂ ಇರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸನ್ಮಾನ;
ಇದೇ ವೇಳೆ ಕೊರೊನಾ ವಾರಿಯರ್‍ಗಳಾದ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿಯರಾದ ಚೇತನ, ಮಂಜುಳ, ಜಿಲ್ಲಾ ಆರೋಗ್ಯ ಇಲಾಖೆಯ ನರ್ಸಿಂಗ್ ಅಧಿಕಾರಿ ಬಿ.ಕಸ್ತೂರಿ, ರಾಜು, ಆಶಾ ಕಾರ್ಯಕರ್ತೆಯರಾದ ಶ್ಯಾಮಲ, ನಾಗವೇಣಿ, ರೋಟರಿ ಯು.ಎಫ್.ಡಬ್ಲ್ಯೂ.ಸಿ.ಯ ಡಾ. ಸುಧಾರಾಣಿ, ಆಶಾ ಕಾರ್ಯಕರ್ತೆಯರಾದ ಭಾಗ್ಯ, ಶುಶ್ರೂಷಕಿಯರಾದ ಲತಾ, ಶೋಭ, ಕಾವ್ಯ ಅವರನ್ನು ಸನ್ಮಾನಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಡು, ಬರಾಕೊ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ, ಪಾಲಿಕೆ ಸದಸ್ಯರಾದ ಹನುಮಂತ, ಕೆ.ಎಸ್.ಅಶೋಕ್‍ಕುಮಾರ್, ಇಬ್ರಾಹಿಂಬಾಬು, ಹನುಮಂತ ಗುಡಗಂಟಿ, ಮುಖಂಡರಾದ ಹೇಮಣ್ಣ, ಸುರೇಂದ್ರಬಾಬು, ನಗರ ಘಟಕ ಸಹ ಕಾರ್ಯದರ್ಶಿ ರಾಮಾಂಜಿನಿ, ಜಿಲ್ಲಾ ಮಾಧ್ಯಮ ಸಂಚಾಲಕ ಕೃಷ್ಣಾರೆಡ್ಡಿ, ನಗರ ಮಾಧ್ಯಮ ಸಂಚಾಲಕ ರಾಜೀವ್ ಇತರರಿದ್ದರು.

ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೊರೊನಾ ವಾರಿಯರ್ಸ್‍ಗಳನ್ನು ಶಾಸಕ ಜಿ.ಸೋಮಶೇಖರರೆಡ್ಡಿಯವರು ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಿದರು.

 

Recent Articles

spot_img

Related Stories

Share via
Copy link