ಬೋನಿಗೆ ಬಿದ್ದ ಚಿರತೆಗಳನ್ನು ಸಮೀಪದಲ್ಲೆ ಬಿಡಲಾಗುತ್ತಿದೆ

ಗುಬ್ಬಿ:

    ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆ ಸಿಕ್ಕ ಚಿರತೆ  

ಅರಣ್ಯ ಇಲಾಖೆಯ ವಿರುದ್ಧ ಕಾರೇಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ನಿಟ್ಟೂರು ಹೋಬಳಿ ಕಾರೇಹಳ್ಳಿ ಬಳಿ ಮಂಗಳವಾರ ರಾತ್ರಿ ಸುಮಾರು ಎರಡು ವರ್ಷದ ಹೆಣ್ಣು ಚಿರತೆಯೊಂದು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ. ಕಳೆದ ಎರಡು ತಿಂಗಳ ಹಿಂದೆ ಇದೇ ಜಾಗದಲ್ಲಿ ಮತ್ತೊಂದು ಹೆಣ್ಣು ಚಿರತೆಯು ಬೋನಿಗೆ ಬಿದ್ದಿತ್ತು.

ಸುದ್ದಿ ತಿಳಿದ ತಕ್ಷಣ ಗುಬ್ಬಿ ವಲಯಾರಣ್ಯಾಧಿಕಾರಿ ದುಗ್ಗಪ್ಪ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಚಿರತೆಯನ್ನು ಕೊಂಡೊಯ್ಯಲು ಹೋದಾಗ, ಸೆರೆಸಿಕ್ಕ ಚಿರತೆಗಳನ್ನು ಹತ್ತಿರದ ಕಾಡಿನಲ್ಲಿಯೇ ಬಿಡುತ್ತಿರುವುದರಿಂದ ಪದೇಪದೇ ಗ್ರಾಮಕ್ಕೆ ಬರುತ್ತಿವೆ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ಗುಬ್ಬಿ ತಹಶೀಲ್ದಾರ್ ಬಿ ಆರತಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಮುಂದೆ ಈ ರೀತಿ ಆಗುವುದಿಲ್ಲವೆಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಸುಮ್ಮನಾದರು.

ಗ್ರಾಮದ ಯುವಕ ಜಲಗೀರಿಶ್ ಮಾತನಾಡಿ ಈಗ್ಗೆ ಎರಡು ತಿಂಗಳ ಹಿಂದೆ ಬೋನಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸ್ವಲ್ಪ ದೂರದ ಅರಣ್ಯದಲ್ಲಿ ಬಿಟ್ಟಿರುವ ಅನುಮಾನವಿದೆ. ಆದ್ದರಿಂದಲೇ ಮತ್ತೊಮ್ಮೆ ಇಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ, ರೈತರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ಇನ್ನು ಮುಂದಾದರೂ ಅಧಿಕಾರಿಗಳು ಜಾಗ್ರತೆ ವಹಿಸಿ ಚಿರತೆಯ ಹಾವಳಿ ಕಡಿಮೆ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ದುಗ್ಗಪ್ಪ, ನಾವು ಮೇಲಧಿಕಾರಿಗಳ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ. ಸೆರೆ ಸಿಕ್ಕ ಚಿರತೆಗಳನ್ನು ದೂರದ ಸ್ಥಳಗಳಿಗೆ ಬಿಡಲಾಗುತ್ತದೆ. ಆದರೆ ಎಲ್ಲಿ ಬಿಡಲಾಗುವುದು ಎಂಬ ವಿಚಾರವನ್ನು ಗೌಪ್ಯವಾಗಿಡಲಾಗುವುದು. ಈ ಭಾಗದಲ್ಲಿ ಚಿರತೆಗಳು ಸಾಮಾನ್ಯವಾಗಿ ಸಂಚರಿಸುತ್ತಲೇ ಇರುತ್ತವೆ. ಈಗ ಸೆರೆಸಿಕ್ಕಿರುವ ಈ ಚಿರತೆಯು ಭಾಗಶ: ಈ ಹಿಂದೆ ಸೆರೆಸಿಕ್ಕಿದ್ದ ಚಿರತೆಯ ಮರಿ ಇರಬಹುದು ಎಂದು ಹೇಳಿ, ಗ್ರಾಮಸ್ಥರ ಹಿತ ಕಾಯಲು ಅರಣ್ಯ ಇಲಾಖೆ ಸದಾ ಬದ್ಧವಾಗಿರುತ್ತವೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link