ತುಮಕೂರು:
ಗೌರಿ ಗಣೇಶ ಹಬ್ಬ ಕ್ಕೆ ಸಡಗರದ ಸಿದ್ಧತೆ ಜರುಗಿದ್ದು, ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿ ಗೌರಿ ಗಣೇಶ ಮಣ್ಣಿನ ಮೂರ್ತಿಗಳು ರಾರಾಜಿಸುತ್ತಿವೆ.
ಅರ್ಧ ಅಡಿಯಿಂದ ಐದು ಅಡಿ ಎತ್ತರದ ವರೆಗೆ ತರಹೇವಾರಿ ಮಣ್ಣಿನ ಗೌರಿ ಗಣಪತಿ ಮೂರ್ತಿಗಳು ರಾರಾಜಿಸುತ್ತಿದ್ದು, ಕನಿಷ್ಠ 300 ರೂ. ಗಳಿಂದ,15000ರೂ.ಗಳವರೆಗೆ ಮಾರಾಟವಾಗುತ್ತಿತ್ತು. ಅಶೋಕ ರಸ್ತೆ ಯಲ್ಲಿ ಮಾರಾಟಕ್ಕಿಟ್ಟಿರುವ ಗಣಪತಿ ಮೂರ್ತಿ ಗಳಲ್ಲಿ ಅಯೋಧ್ಯೆ ರಾಮಲಲ್ಲಾ ಮಾದರಿ ಗಣಪತಿ ಮೂರ್ತಿ ಗಮನ ಸೆಳೆಯಿತು.
ಬಣ್ಣ ರಹಿತ ಗಣಪತಿ ಮೂರ್ತಿ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಮಹಿಳೆಯರು ಗೌರಿ ಪೂಜೆ ಗಾಗಿ ಮಣ್ಣಿನ ಮೂರ್ತಿಗಳನ್ನು, ಬಾಗಿನ, ಮಂಗಳ ದ್ರವ್ಯ ಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯ ಕಂಡು ಬಂದಿತು.
ದುಬಾರಿ ಬೆಲೆ:
ಹಣ್ಣು ಹೂ ಬೆಲೆ ದುಬಾರಿ ಯಾಗಿದ್ದು, ಸೇಬು ಕೆಜಿಗೆ 160-200ರೂ., ಬಾಳೆ ಹಣ್ಣು ಕೆ. ಜಿಗೆ 100 ರಿಂದ 150ರೂ. ದಾಳಿಂಬೆ 200 ರಿಂದ 240ರೂ., ಸೀಬೆ ಹಣ್ಣು 100ರೂ., ದ್ರಾಕ್ಷಿ 200ರೂ.ಕೆ.ಜಿ., 150ರೂ.ಕಿತ್ತಳೆ ಕೆಜಿಗೆ ಮಾರಾಟವಾಗುತ್ತಿದ್ದುದು ಕಂಡುಬಂದಿತು. ಇನ್ನು ಸೇವಂತಿಗೆ ಮಾರೊಂದಕ್ಕೆ 120 ರಿಂದ 150ರೂ. ಮಲ್ಲಿಗೆ ಕಾಕಡ 200 ರೂ., ಬಿಡಿ ಹೂ ಕೆಜಿಗೆ 200ರೂ.ವೀಳ್ಯದೆಲೆ 80 ರಿಂದ 100ರೂ.ಗಳಿಗೆ ಮಾರಾಟವಾಗುತ್ತಿದ್ದುದು ಕಂಡುಬಂದಿತು.
ಬಡಾವಣೆಗಳಲ್ಲಿ ಗಣಪತಿ ಕೂರಿಸಲು ಯುವಕ ಮಂಡಳಿಗಳವರು ಉತ್ಸಾಹದಿಂದ ಗಣಪತಿ ಮೂರ್ತಿಗಳನ್ನು ಕೊಂಡೊಯ್ಯುತ್ತಿದ್ದರೆ, ದುಬಾರಿ ಯಾಗಿರುವ ಕಾರಣಕ್ಕೆ ಗಣಪತಿ ಮೂರ್ತಿಗಳನ್ನು ಕೊಂಡೊಯ್ಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ರಾಮಸಾಗರದಿಂದ ಬಂದು ಗಣಪತಿ ಮೂರ್ತಿ ಮಾರಲು ಬಂದಿರುವ ಗಣಪತಿ ತಯಾರಕರೊಬ್ಬರು ಅಭಿಪ್ರಾಯಿಸಿದರು.