ಹುಳಿಯಾರು:
ಯಾರನ್ನೊ ಕೀರ್ತಿಸುವುದಕ್ಕಾಗಿ ಬರೆಯುವ ಪದ್ಯಗಳನ್ನು ಕೀರ್ತನೆಗಳೆನ್ನುತ್ತಾರೆ. ಆದರೆ ಕನಕನ ಕಾವ್ಯ, ಪದ್ಯಗಳಲ್ಲಿ ಸಕಲಜೀವಿಗಳಿಗೂ ಲೇಸನ್ನು ಬಯಸಿದ ಪ್ರೀತಿತತ್ವ ಇದೆ. ಹಾಗಾಗಿ ಕನಕನ ಸಾಹಿತ್ಯ ತತ್ವಪದಗಳಾಗಿವೆ ಎಂದು ಸಾಹಿತಿ ಬಿಳಿಗೆರೆಕೃಷ್ಣಮೂರ್ತಿ ಅವರು ಪ್ರತಿಪಾದಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕನಕ ಜಯಂತಿಯಲ್ಲಿ ಅವರು ಮಾತನಾಡಿದರು.ಕನಕರ ಮೋಹನತರಂಗಿಣಿಯಲ್ಲಿ ಕೋಮುವಾದ, ಜಾತಿವಾದ, ಲಿಂಗಬೇದವನ್ನು ವಾಸಿ ಮಾಡುವ ಔಷಧಿಯಾಗಿ ಪ್ರೀತಿ ತತ್ವವಿದೆ, ಪ್ರೇಮ ತತ್ವವಿದೆ. ರಾಮಧಾನ್ಯ ಚರಿತ್ರೆಯಲ್ಲಿ ವರ್ಗಗಳ ಸಂಘರ್ಷಗಳಿಗೆ ಮದ್ದು ನೀಡಿದ್ದಾರೆ. ರಾಜ-ಮಹಾರಾಜರಿಗೆ ಬಹುಪರಾಕ್ ಕೂಗುತ್ತಿದ್ದ ಕಾಲಘಟ್ಟದಲ್ಲಿ ಉತ್ತಮ ಪ್ರಭುತ್ವ ಲೊಳಲೊಟ್ಟೆ ಎನ್ನುವ ಮೂಲಕ ರಾಜ ಪ್ರಭುತ್ವವನ್ನು ಟೀಕಿಸಿದ್ದಾರೆ. ಕನಕರ ಸಾಹಿತ್ಯದಲ್ಲಿ ಸಮಾಜವನ್ನು ತಿದ್ದುವ ವೈಚಾರಿಕ ಮೌಲ್ಯಗಳಿವೆ ಎಂದರು.
ಸಾಮಾಜಿಕ ಮತ್ತು ಆರ್ಥಿಕ ಅಸಮಾನ್ಯತೆಯ ಕಾರಣಕ್ಕಾಗಿ ಮೀಸಲಾತಿ ಕೊಟ್ಟಿದ್ದಾರೆ ಎಂಬ ಸಾಮಾನ್ಯ ತಿಳುವಳಿಕೆ ಇಲ್ಲದೆ ಜಾತಿ ಮೀಸಲಾತಿ ವಿರುದ್ಧ ಮಾತನಾಡುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ವೃತ್ತಿ ಆಧಾರಿತ ಜಾತಿ ವ್ಯವಸ್ಥೆ ಜಾರಿಗೆ ಬಂದಿದೆ. ಮೀಸಲಾತಿ ತೆಗೆದರೆ ಜಾತಿ ಹೋಗಲ್ಲ, ಅರ್ಜಿ ಫಾರಂನಲ್ಲಿ ಜಾತಿ ಕಾಲಂ ತೆಗೆದರೆ ಜಾತಿ ಹೋಗಲ್ಲ. ಬದಲಾಗಿ ಮನುಷ್ಯನಲ್ಲಿ ಹೊಕ್ಕಿರುವ ಜಾತಿಯ ರೋಗಗಳು ಹೋಗಬೇಕು. ಜಾತಿ ಒಳಗಿರುವ ಮೌಢ್ಯ, ಬಡತನ ಹೋಗಬೇಕು, ಆಗ ಜಾತಿ ವ್ಯವಸ್ಥೆ ಹೋದರೂ ಹೋಗಬಹುದು ಎಂದರು.
ಉಪನ್ಯಾಸಕರಾದ ಆರ್.ವಲಿ, ಮೋಹನ್, ಸುಷ್ಮಾಬೀರಾದಾರ್, ಮಲ್ಲಿಕಾರ್ಜುನ್, ದೈಹಿಕ ಶಿಕ್ಷಣ ನಿರ್ದೇಶಕ ಆರ್.ಶಿವಯ್ಯ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ