ತುಮಕೂರು

ಲೋಕಸಭಾ ಚುನಾವಣೆಯನ್ನು ಮೈತ್ರಿಗೆ ಅನುಗುಣವಾಗಿ ಎದುರಿಸುವ ತೀರ್ಮಾನಕ್ಕೆ ಬಂದಂತಿರುವ ದೋಸ್ತಿ ಪಕ್ಷಗಳು ಒಂದೆರಡು ಕ್ಷೇತ್ರಗಳಲ್ಲಿ ಹಗ್ಗಜಗ್ಗಾಟ ಮುಂದುವರೆಸಿವೆ. ತುಮಕೂರು ಲೋಕಸಭಾ ಕ್ಷೇತ್ರ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಜಗ್ಗಾಟ ಮುಂದುವರೆದಿದೆ.
12 ಲೋಕಸಭಾ ಕ್ಷೇತ್ರಗಳನ್ನು ನಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕೆನ್ನುವ ಷರತ್ತಿನಲ್ಲಿಯೇ ಮುಂದುವರೆದಿದ್ದ ಜೆಡಿಎಸ್ ವರಿಷ್ಠರು ತಮ್ಮ ಬಿಗಿಪಟ್ಟನ್ನು ಇತ್ತೀಚೆಗೆ ಸಡಿಲಿಸಿದೆ. ಎಷ್ಟು ಕ್ಷೇತ್ರ ಎನ್ನುವುದಕ್ಕಿಂತ ಬಿಜೆಪಿ ಸೋಲಿಸುವುದೇ ಗುರಿ ಎಂಬ ಮಾತುಗಳು ಜೆಡಿಎಸ್ ಮುಖಂಡರಿಂದ ಹೊರಬಂದಿರುವುದನ್ನು ಗಮನಿಸಿದರೆ ಕ್ಷೇತ್ರಗಳ ಬೇಡಿಕೆಯ ಪಟ್ಟಿನಿಂದ ಹಿಂದೆ ಸರಿದು ಮೈತ್ರಿಯತ್ತ ಮುನ್ನಡೆದಿರುವುದು ಗೋಚರಿಸುತ್ತದೆ.
12 ಲೋಕಸಭಾ ಕ್ಷೇತ್ರಗಳನ್ನು ನೀಡದಿದ್ದರೂ ಪರವಾಗಿಲ್ಲ 7 ರಿಂದ 10 ಕ್ಷೇತ್ರಗಳು ಜೆಡಿಎಸ್ ಪಾಲಿಗೆ ಸಿಗಬಹುದು. ಇದರಲ್ಲಿ ತುಮಕೂರು ಕ್ಷೇತ್ರವನ್ನು ಬಿಟ್ಟು ಕೊಡಲು ಬೇಡಿಕೆ ಇಡಲಾಗಿದೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿವೆ. ದೇವೆಗೌಡರು ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳುತ್ತಿರುವುದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳು ಇವೆ.
ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಸಾಧಿಸಿರುವ ಉದಾಹರಣೆಗಳು ಕಡಿಮೆ. 1996 ರಲ್ಲಿ ಸಿ.ಎನ್.ಭಾಸ್ಕರಪ್ಪ ಜೆಡಿಎಸ್‍ನಿಂದ ಗೆಲುವು ಸಾಧಿಸಿದ್ದನ್ನು ಹೊರತುಪಡಿಸಿದರೆ ಉಳಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಿ ಪಾರಮ್ಯ ಮೆರೆದಿವೆ. ಆದರೆ ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರ ಜೆಡಿಎಸ್ ತನ್ನ ಪ್ರಭಾವ ಮೆರೆಯುತ್ತಾ ಬಂದಿದೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳು, ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿವೆ. ಶಿರಾ ಮತ್ತು ಪಾವಗಡ ಕ್ಷೇತ್ರಗಳು ಚಿತ್ರದುರ್ಗಕ್ಕೆ, ಕುಣಿಗಲ್ ಬೆಂಗಳೂರು ಗ್ರಾಮಾಂತರಕ್ಕೆ ಸೇರಿವೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಗುಬ್ಬಿ, ಮಧುಗಿರಿ ಹಾಗೂ ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್ ಹಿಡಿತ ಸಾಧಿಸಿದೆ. ಕೊರಟಗೆರೆ ಕ್ಷೇತ್ರದ ಮತದಾರರು ಮಾತ್ರವೇ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಕುಣಿಗಲ್ ಹಾಗೂ ಪಾವಗಡದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೂ ಲೋಕಸಭೆಯಲ್ಲಿ ಬೇರೆ ಕ್ಷೇತ್ರಗಳಿಗೆ ಅವು ಸೇರಿವೆ. ಹೀಗಾಗಿ ತುಮಕೂರು ಲೋಕಸಭಾ ಕ್ಷೇತ್ರವನ್ನು ದೇವೇಗೌಡರು ತಮಗೆ ಬಿಟ್ಟುಕೊಡುವಂತೆ ಒತ್ತಡ ಹಾಕಿದ್ದಾರೆ.
ಹಳೆ ಮೈಸೂರು ಭಾಗದ ಮೈಸೂರು, ತುಮಕೂರು, ಬೆಂಗಳೂರು ಉತ್ತರ ಕ್ಷೇತ್ರಗಳ ಬೇಡಿಕೆ ಕುರಿತು ಇನ್ನೂ ಒಂದು ಸುತ್ತಿನ ಮಾತುಕತೆ ನಡೆಯಲಿದೆ. ಬೆಂಗಳೂರು ಉತ್ತರ ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿದ್ದು, ಈ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಲಿ ಎನ್ನುವ ಇಂಗಿತ ಕೆಲವರದ್ದು. ಮಂಡ್ಯವನ್ನು ನಿಖಿಲ್ ಕುಮಾರಸ್ವಾಮಿಗೆ, ಹಾಸನ ಕ್ಷೇತ್ರವನ್ನು ಪ್ರಜ್ವಲ್ ರೇವಣ್ಣನಿಗೆ ಬಿಟ್ಟು ಕೊಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೆಗೌಡರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿವೆ. ಆದರೆ ಇದಾವುದೂ ಇನ್ನೂ ಅಧಿಕೃತಗೊಂಡಿಲ್ಲ. ಈ ನಡುವೆ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
