ಶಿರಾ ನಗರಸಭೆಯ ಮೀಸಲಾತಿ ಪ್ರಕಟ

ಶಿರಾ:

ಇಲ್ಲಿನ ನಗರಸಭೆಗೆ 3-4 ಬಾರಿ ಮೀಸಲಾತಿ ಪ್ರಕಟಗೊಂಡು ಆಕ್ಷೇಪಣೆಗಳನ್ನು ಆಹ್ವಾನಿಸಿದಾಗಲೆಲ್ಲಾ ನಗರಸಭೆಯ ಸದಸ್ಯ ಸ್ಥಾನದ ಅನೇಕ ಆಕಾಂಕ್ಷಿಗಳು ನ್ಯಾಯಾಲಯದ ಕಟಕಟೆ ಏರಿದ ಪರಿಣಾಮ ಕಳೆದ ಸುಮಾರು ಮೂರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಚುನಾವಣೆಯ ಕಾವು ಇದೀಗ ಮತ್ತೊಮ್ಮೆ ಗರಿಗೆದರಿಕೊಳ್ಳಲಿದೆ.

ಶಿರಾ ನಗರಸಭೆಯ ಈ ಹಿಂದಿನ ಚುನಾವಣೆ ನಡೆದದ್ದು 2013 ರಲ್ಲಿ 7.3.2013 ರಂದು ಸದಸ್ಯರ ಚುನಾವಣೆ ನಡೆಯಿತು. 11.3.2013 ರಂದು ಮತ ಎಣಿಕೆ ನಡೆದು ಜನಪ್ರತಿನಿಧಿಗಳ ಆಯ್ಕೆಯೂ ಆಯಿತು. ಈ ನಡುವೆ ಆಗ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೂರು ದಾಖಲಾದ ಪರಿಣಾಮ ದೂರು ಇತ್ಯರ್ಥಗೊಂಡು 12.3.2014ರಂದು ಅಧ್ಯಕ್ಷರ ಚುನಾವಣೆ ನಡೆದು ಆಗ ಮೊದಲ ಕೌನ್ಸಿಲ್ ಸಭೆಯು 19.5.2014ರಂದು ನಡೆಯಿತು.

12.3.2019ಕ್ಕೆ ಆಗಿನ ಆಡಳಿತ ಮಂಡಳಿಯ ಅಧಿಕಾರ ಪೂರ್ಣಗೊಂಡು ಮೂರು ವರ್ಷ ಸಮೀಪಿಸುತ್ತಾ ಬಂದರೂ ಇನ್ನೂ ಕೂಡಾ ನಗರಸಭೆಯ ಚುನಾವಣೆಗೆ ಮುಹೂರ್ಥ ಕೂಡಿ ಬಂದೇ ಇರಲಿಲ್ಲ. ಅಂದರೆ 7.3.2013 ರಂದು ನಗರಸಭೆಯ ಚುನಾವಣೆ ನಡೆದದ್ದು ಎಂದು ಅಂಕಿ-ಅಂಶಗಳನ್ನು ನೋಡುವುದಾದರೆ ಶಿರಾ ನಗರಸಭೆಗೆ ಚುನಾವಣೆ ನಡೆದು ಸುಮಾರು 7 ವರ್ಷಗಳೇ ಸಂದು ಹೋಗಿದ್ದವು. 7 ಕಳೆದ ವರ್ಷಗಳಿಂದಲೂ ಈ ನಗರಸಭೆಗೆ ಮತ್ತೊಮ್ಮೆ ಚುನಾವಣೆಯ ವಾಸನೆ ಮೂಗಿಗೆ ಬಡಿದಿದ್ದರೂ ನ್ಯಾಯಾಲಯದ ಪ್ರಕರಣಗಳು ಚುನಾವಣೆಗೆ ಅಡ್ಡಿಯಾಗಿತ್ತು.

ನಿಗಧಿಯಂತೆ ಕಳೆದ ಮೂರು ವರ್ಷದ ಹಿಂದೆ ನಗರಸಭೆಯ ಚುನಾವಣೆಯ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆಯೇ ಆಯಾ ವಾರ್ಡುಗಳ ವಿವಿಧ ಪಕ್ಷಗಳ ಆಕಾಂಕ್ಷಿಗಳು ಹಬ್ಬ ಹದಿದಿನಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಭಾವಚಿತ್ರಗಳಿರುವ ಪ್ಲಕ್ಷಿಗಳನ್ನು ಹಾಕಿಕೊಂಡು ಒಂದೆರಡು ಸುತ್ತು ಪ್ರಚಾರವನ್ನೂ ಕೈಗೊಂಡಿದ್ದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅನೇಕ ಆಕಾಂಕ್ಷಿಗಳು ವಾರ್ಡುಗಳ ಮನೆ ಮನೆಗಳಿಗೂ ತೆರಳಿ ಚುನಾವಣಾ ಪ್ರಚಾರವನ್ನೂ ಕೈಗೊಂಡಿದ್ದರಲ್ಲದೆ ಗೆಲ್ಲಲೇಬೇಕೆಂಬ ಹಠದಿಂದ ಕೆಲವರು ಹಣವನ್ನೂ ಖರ್ಚು ಮಾಡಿಕೊಂಡಿದ್ದುಂಟು. ಕೆಲ ಪಕ್ಷಗಳ ಮುಖಂಡರು ವಾರ್ಡುಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಹುಡುಕಾಟವನ್ನು ನಡೆಸಿದ್ದರಾದರೂ ಆಕ್ಷೇಪಣೆಗಳನ್ನು ಸಲ್ಲಸಿದ ನಂತರ ಒಂದಿಬ್ಬರು ಮಾಜಿ ನಗರಸಭಾ ಸದಸ್ಯರು ಮೀಸಲಾತಿಯನ್ನು ಪ್ರಶ್ನಿಸಿ ಪದೇ ಪದೇ ನ್ಯಾಯಾಲಯದ ಮೊರೆ ಹೋಗುತ್ತಿದ್ದ ಪರಿಣಾಮ ಇಲ್ಲಿನ ನಗರಸಭೆಯ ಚುನಾವಣೆ ಕೊನೆಗೂ ನೆನೆಗುದಿಗೆ ಬೀಳುತ್ತಲೇ ಬಂದಿತ್ತು.

ಅತ್ಯಂತ ಅಚ್ಚರಿಯ ಸಂಗತಿ ಎಂದರೆ ನ್ಯಾಯಾಲಯದ ಪ್ರಕರಣ ಇತ್ಯರ್ಥಗೊಳ್ಳುವ ಮುನ್ನವೇ ಮಾ:29-2021 ರಂದು ರಾಜ್ಯ ಚುನಾವಣಾ ಆಯೋಗ ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಿಯೇ ಬಿಟ್ಟಿತು. ಪ್ರಕರಣವೇ ಇತ್ಯರ್ಥಗೊಳ್ಳದಿರುವಾಗ ಚುನಾವಣೆಯ ಅಧಿಸೂಚನೆ ಹೊರಡಿಸಿದ್ದನ್ನು ಕಂಡು ದೂರು ಹೋಗಿದ್ದವರು ಅಚ್ಚರಿಪಟ್ಟಿದ್ದೂ ಉಂಟು.

ರಾಜ್ಯ ಚುನಾವಣಾ ಆಯೋಗವು ಮಾ:29-2021 ರಂದು ಹೊರಡಿಸಿದ ಅಧಿಸೂಚನೆಯಂತೆ ದೊಡ್ಡಬಳ್ಳಾಪುರ, ವಿಜಯಪುರ, ರಾಮನಗರ, ಚೆನ್ನಪಟ್ಟಣ, ಶಿರಾ, ಗುಡಿಬಂಡೆ, ಭದ್ರಾವತಿ, ತೀರ್ಥಹಳ್ಳಿ, ಬೇಲೂರು, ಮಡಿಕೇರಿ, ಬೀದರ್ ಹಾಗೂ ತರಿಕೆರೆ ಸ್ಥಳೀಯ ಸಂಸ್ಥೆಗಳಿಗೆ ಏ:8 ರಿಂದ ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಏ:27 ರಂದು ಚುನಾವಣೆ ನಡೆಸಲು ಆದೇಶ ಹೊರಡಿಸಿತು.
ಈ ಆದೇಶ ಹೊರ ಬಿದ್ದ ಕೂಡಲೇ ಶಿರಾ ನಗರದ ಜನತೆ ಸದ್ಯ ಚುನಾವಣೆ ನಡೆದರೆ ಸಾಕಪ್ಪ ಎಂದು ಸಂತಸಪಟ್ಟ ಕೆಲವೇ ಗಂಟೆಗಳಲ್ಲಿ ಇದೇ ರಾಜ್ಯ ಚುನಾವಣಾ ಆಯೋಗವು ಮತ್ತೊಂದು ಅಧಿಸೂಚನೆಯನ್ನು ಮಾ:29 ರ ಸಂಜೆಯೇ ಹೊರಡಿಸಿತು.

ದೊಡ್ಡಬಳ್ಳಾಪುರ ನಗರಸಭೆಯ 31, ತರಿಕೆರೆ ಪುರಸಭೆಯ 23 ಹಾಗೂ ಶಿರಾ ನಗರಸಭೆಯ 31 ವಾರ್ಡುಗಳ ಚುನಾವಣೆಯನ್ನು ತಾಂತ್ರಿಕ ಕಾರಣಗಳಿಂದ ಮುಂದಿನ ಆದೇಶದವರೆಗೆ ಹಿಂಪಡೆಯಲಾಗಿದೆ ಎಂಬ ಮತ್ತೊಂದು ಆದೇಶ ಶಿರಾ ನಗರದ ಜನತೆಯ ಸಂತಸಕ್ಕೆ ಮತ್ತೊಮ್ಮೆ ಬರೆ ಎಳೆದಂತಾಯಿತು.

ಇದೀಗ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 5886/2021 ಛಿತಿ 5887/2021 ಪ್ರಕರಣದಲ್ಲಿ ದಿ:25.11.2021 ರಂದು ನೀಡಿರುವ ತೀರ್ಪಿನನ್ವಯ ಹಾಗೂ ಕರ್ನಾಟಕ ಪುರಸಭೆ ಕಾಯಿದೆ 1964ರ ಕಲಂ11 ರ ಅನ್ವಯ ಸರ್ಕಾರದ ಅಧಿ ಸೂಚನೆಯನ್ನು ಹೊರಡಿಸಿ ಮೀಸಲಾತಿಯನ್ನು ಪ್ರಕಟಗೊಳಿಸಿದೆ.

ನಗರಸಭೆಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಆಡಳಿತ ಮಂಡಳಿಯೇ ಇಲ್ಲದೆ ನಗರಸಭೆಯ ಒಳ, ಹೊರಗೆ ಅಕ್ರಮಗಳೇ ನಡೆಯುತ್ತಿದ್ದರೂ ಹೇಳುವವರು, ಕೇಳುವವರೇ ಇಲ್ಲದಂತಾಗಿದ್ದರು. ನಗರ ವ್ಯಾಪ್ತಿಯಲ್ಲಿನ ಸ್ವಚ್ಚತೆಯಿಂದಾ ಹಿಡಿದು, ಬೀದಿ ದೀಪ, ಖಾತೆ ಬದಲಾವಣೆ, ನಿವೇಶನ ಹಂಚಿಕೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳು ಅರ್ಹರಿಗೆ ಲಭ್ಯವಾಗದಂತಾಗಿತ್ತು.
ಈಗ ಪ್ರಕಟಗೊಂಡ ಮೀಸಲಾತಿ ಅಂತಿಮವೋ ಅಥವ ಇನ್ನೂ ಮುಂದೆ ನ್ಯಾಯಾಲಯಕ್ಕೆ ದೂರು ಸಲ್ಲಿಕೆಯ ಪ್ರಕ್ರಿಯೆಗಳು ನಡೆಯುತ್ತವೆಯೋ ಅನ್ನುವ ಆತಂಕವೂ ನಗರದ ಜನತೆಯಲ್ಲಿದ್ದು ಚುನಾವಣೆ ನಡೆದರೆ ಸಾಕು ಎಂಬ ಇಂಗಿತ ಸಾರ್ವಜನಿಕರದ್ದಾಗಿದೆ.

 

(ಬರಗೂರು ವಿರೂಪಾಕ್ಷ)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link