ಶಿರಾ :
ಈ ದೇಶದಲ್ಲಿ ಸ್ವಾತಂತ್ರ ಬಂದು 70 ವರ್ಷ ಕಳೆದರೂ ದಲಿತರು ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆಯನ್ನು ಪಡೆಯಲಾಗಿಲ್ಲ. ಅಧಿಕಾರದ ದುರಾಸೆಯಿಂದ ಬಿಜೆಪಿ-ಕಾಂಗ್ರೆಸ್ ಸರಕಾರಗಳು ಜನವಿರೋಧಿಯಾಗಿ ನಡೆದುಕೊಂಡು ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿವೆ ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಟೈರ್ ರಂಗನಾಥ್ ಹೇಳಿದರು.
ಅವರು ನಗರದಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ವತಿಯಿಂದ ಭೂಮಿ ನಮ್ಮ ಹಕ್ಕು-ಆಹಾರ ನಮ್ಮ ಆಯ್ಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿ ಮಾತನಾಡಿದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ವಚನ ಭ್ರಷ್ಟ ಸರಕಾರವಾಗಿದೆ. ದಲಿತರ ಆಹಾರ, ಭೂಮಿ, ವಿದ್ಯಾರ್ಥಿ ವೇತನ ಎಲ್ಲವನ್ನು ಕಿತ್ತುಕೊಂಡಿದೆ. ಶಿರಾ ಉಪಚುನಾವಣೆಯಲ್ಲಿ ಇನ್ನಾರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸಿ ಬಾಗಿನ ಅರ್ಪಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಮದಲೂರು ಕೆರೆಯನ್ನು ತುಂಬಿಸಲಾಗಲಿಲ್ಲ. ಬಾಗಿನವನ್ನೂ ಅರ್ಪಿಸಲಿಲ್ಲ. ದಲಿತರು ಮಾಂಸಾಹಾರವನ್ನು ಸೇವಿಸಿ ಶಕ್ತಿವಂತರಾಗುತ್ತಾರೆ, ಅವರ ಶಕ್ತಿಯನ್ನು ಕುಂದಿಸಬೇಕೆಂದು ನಮ್ಮ ಆಹಾರವನ್ನು ಕಿತ್ತುಕೊಂಡಿದ್ದಾರೆ ಎಂದರು.
ತಾಲ್ಲೂಕಿನ ಎಲ್ಲಾ ದಲಿತ ಕಾಲನಿಗಳಲ್ಲೂ ಇಂದಿಗೂ ಸಹ ನಿವೇಶನದ ಸಮಸ್ಯೆ ಇದೆ. ಎಜೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ಉಪಚುನಾವಣೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರು ಮಾತು ಕೊಟ್ಟು ಇದುವರೆಗೂ ಜಾರಿ ಮಾಡಿಲ್ಲ. ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿ ವೇತನ ಸರಿಯಾಗಿ ಕೊಡುತ್ತಿಲ್ಲ. ಇಂತಹ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನತೆ ಭಾಗವಹಿಸಿ ಸಂಖ್ಯೆಯಲ್ಲಿ ಹೋರಾಟ ಮಾಡಬೇಕು ಎಂದು ಟೈರ್ ರಂಗನಾಥ್ ಹೇಳಿದರು.
ದಲಿತ ಶೋಷಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬಜೆಟ್‍ನಲ್ಲಿ ಪ.ಜಾತಿ ಅಭಿವೃದ್ದಿಗೆ 30 ಸಾವಿರ ಕೋಟಿ ಮೀಸಲಿಡಬೇಕು. 70 ಲಕ್ಷ ಪ.ಜಾತಿ ಮತ್ತು ಪಂಗಡದ ಜನಾಂಗದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ಶಿಪ್ ಅನ್ನು ರದ್ದು ಮಾಡಿರುವ ಆದೇಶವನ್ನು ಹಿಂಪಡೆದು ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದರು.
ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣವನ್ನು ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವುದು, ರಾಜ್ಯ ಪರಿಶಿಷ್ಟ ಜಾತಿ/ ಪಂಗಡಗಳ ಉಪಯೋಜನೆ ಕಾಯ್ದೆ 7(ಡಿ ) ಕೈ ಬಿಡುವ ತಿದ್ದುಪಡಿ ಮಸೂದೆ ಮಂಡಿಸಬೇಕು, ಪಿಟಿಸಿಎಲ್ ಕಾಯ್ದೆ ಗಳನ್ನು ಬೇಗನೆ ಇತ್ಯರ್ಥಪಡಿಸಬೇಕು, ಗೋಹತ್ಯಾ ನಿಷೇಧ ಕಾಯ್ದೆಯನ್ನು ರದ್ದುಪಡಿಸಬೇಕು, ಶಿರಾ ತಾಲ್ಲೂಕು ಕರಿ ರಾಮನಹಳ್ಳಿ ಗ್ರಾಮದಲ್ಲಿ ಈ ಹಿಂದೆ ಬಹಿಷ್ಕಾರಕ್ಕೆ ಒಳಗಾಗಿದ್ದ ಪರಿಶಿಷ್ಟಜಾತಿಯ ಕುಟುಂಬಗಳಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ತಲಾ 5 ಎಕರೆ ಜಮೀನು ಮಂಜೂರು ಮಾಡಬೇಕು ಎಂದು ವೆಂಕಟಗಿರಿಯಯ್ಯ ಆಗ್ರಹಿಸಿದರು.
ಪ್ರತಿಭಟನೆಯ ನಂತರ ತಹಸೀಲ್ದಾರ್ ಮಮತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಾಮಾಜಿಕ ಸಂಘರ್ಷ ಸಮಿತಿಯ ಕಾರ್ಯಾಧ್ಯಕ್ಷ ಸಿ.ಕೆ.ಮಹೇಶ್, ದಲಿತ ಶೋಷಿತ ಸಂಘರ್ಷ ಸಮಿತಿಯ ಮಂಡ್ಯ ಜಿಲ್ಲಾಧ್ಯಕ್ಷ ಡಿ.ವೆಂಕಟೇಶ್, ಕರಿರಾಮನಹಳ್ಳಿ ಭೂತರಾಜು, ದ್ವಾರನಕುಂಟೆ ಲೋಕೇಶ್, ಮಾಗೋಡು ಯೋಗಾನಂದ್, ಶ್ರೀರಂಗ, ಡಿ.ಮಂಜುನಾಥ, ರಂಗಶಾಮಯ್ಯ, ಕಾರೇಹಳ್ಳಿ ರಂಗನಾಥ್, ಶ್ರೀನಿವಾಸ ಕೆ.ಎಂ, ನೀರಕಲ್ಲು ನರಸಿಂಹಮೂರ್ತಿ, ಶಿವಣ್ಣ, ಕೆ.ರಾಜು, ನಾಗರಾಜು, ಲಕ್ಷ್ಮೀಕಾಂತ, ಮಂಜುನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
