ಶಿರಾ:

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿಕೆ
ರೈತರು, ನಿರಾಶ್ರಿತರು, ಕಡು ಬಡ ಕುಟುಂಬಗಳು ಜೀವನ ಮಾಡಲಾಗದಷ್ಟು ಆರ್ಥಿಕ ಹೊರೆಯನ್ನು ಸೃಷ್ಟಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭ್ರಷ್ಟಾಚಾರದ ಕೊಡ ತುಂಬಿ ತುಳುಕುತ್ತಿದ್ದು, ಇಂತಹ ಭ್ರಷ್ಟಾಚಾರಿಗಳಿಗೆ ದೇಶದ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಶಿರಾ ನಗರದ ಶ್ರೀ ಅನ್ನಪೂರ್ಣೆಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ಧರಾಮಯ್ಯ ಅವರ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಲೇವಡಿ ಮಾಡುತ್ತಿದ್ದ ಇದೇ ಬಿ.ಜೆ.ಪಿ. ಮುಖಂಡರು ಹಾಗೂ ಹಾಲಿ ಶಾಸಕರು ಬಿಜೆ.ಪಿ. ಸರ್ಕಾರವನ್ನು ಶೇ.40 ಕಮೀಷನ್ ಸರ್ಕಾರ ಎಂದು ಲೇವಡಿ ಮಾಡುವ ಹಂತಕ್ಕೆ ತಲುಪಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಪಕ್ಷದ ಶಾಸಕರನ್ನು ಕದ್ದು ಕರೆದೊಯ್ದು ಹಣದ ಆಮಿಷ ತೋರಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಇಂತಹ ಮುಖ್ಯಮಂತ್ರಿಗಳ ಮಗ ಇದೀಗ ಮಹಾ ಭ್ರಷ್ಟಾಚಾರಿಯಾಗಿಬಿಟ್ಟಿದ್ದಾರೆ. ಯಡಿಯೂರಪ್ಪ ಅವರ ಪುತ್ರ ಭ್ರಷ್ಟಾಚಾರಿ ಎಂಬ ಒಂದೇ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಬಿ.ಜೆ.ಪಿ. ಪಕ್ಷದವರು ಅಧಿಕಾರದಿಂದ ಕೆಳಗಿಳಿಸಿಬಿಟ್ಟರು. ಇಂತಹವರಿಗೆ ದೇಶದ ಇತಿಹಾಸವನ್ನು ಸಾರುವ ಕಾಂಗ್ರೆಸ್ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದರು.
ಈ ಹಿಂದೆ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ 13 ಲಕ್ಷ ಮನೆಗಳನ್ನು ಅರ್ಹರಿಗೆ ನೀಡಲಾಗಿತ್ತು. ಇದೀಗ ಇದೇ ಬಿ.ಜೆ.ಪಿ. ಸರ್ಕಾರ ಕಳೆದ 4 ವರ್ಷಗಳಿಂದ ಎಷ್ಟು ಮನೆಗಳನ್ನು ಅರ್ಹರಿಗೆ ನೀಡಿದೆ ಎಂಬುದರ ಪಟ್ಟಿ ನೀಡಲಿ. ಆಯಾ ಗ್ರಾ.ಪಂ.ಗಳಿಗೆ ಮಂಜೂರಾಗಿದ್ದ ಮನೆಗಳನ್ನೂ ಈ ಸರ್ಕಾರ ವಾಪಸ್ ಪಡೆದಿರುವುದು ನಿಜಕ್ಕೂ ದುರಂತ. ವಿಧಾನ ಪರಿಷತ್ ಚುನಾವಣೆಗೆ ನಮ್ಮ ಪಕ್ಷದಿಂದ ಸ್ಪರ್ಧಿಸಿರುವ ಕೆ.ಎನ್.ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ಓರ್ವ ಯುವಕನಿದ್ದು ಪಕ್ಷದ ನಿಷ್ಟಾವಂತಿಕೆ ಅವರಿಗಿದೆ. ಡಿ. 10 ರಂದು ನಡೆಯುವ ಚುನಾವಣೆಯಲ್ಲಿ ಅವರನ್ನು ಆಯ್ಕೆ ಮಾಡಿ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿಸಬೇಕು ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಮಂಡಿಸಿದ ಯಾವುದೇ ಮಸೂದೆ ಬಿದ್ದು ಹೋದರೆ ಮಸೂದೆ ಜಾರಿಗೆ ತರಲು ಕಾರಣರಾದವರು ಅರೆ ಕ್ಷಣವೂ ಅಧಿಕಾರದಲ್ಲಿ ಕೂರಬಾರದು. ರೈತ ವಿರೋಧಿ ಕಾನೂನು ಜಾರಿಗೊಳಿಸಿ ಮತ್ತೆ ಅವುಗಳನ್ನು ವಾಪಸ್ ಪಡೆದು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವ ನರೇಂದ್ರ ಮೋದಿ ಅವರಿಗೆ ಆ ಕುರ್ಚಿಯಲ್ಲಿ ಕೂರಲು ಅರ್ಹತೆಯೇ ಇಲ್ಲ. ಕರಾಳವಾದ ಮೂರು ಮಸೂದೆ ಹಿಂಪಡೆಯಲು ಮೂಲ ಕಾರಣ 5 ರಾಜ್ಯಗಳಲ್ಲಿ ಸಮಿಪಿಸುತ್ತಿರುವ ಚುನಾವಣೆಯೇ ಆಗಿದೆ. ಕೇಂದ್ರ ಸರ್ಕಾರದ ಇಂತಹ ತಂತ್ರಗಾರಿಕೆ ದೇಶದ ಜನಕ್ಕೆ ತಿಳಿದಿದೆ. ಕೆ.ಎನ್.ರಾಜಣ್ಣ ಹಾಗೂ ನಾನು ಇಬ್ಬರು ಒಳ್ಳೆಯ ಗೆಳೆಯರು. ವಿರೋಧ ಪಕ್ಷದವರು ಇಬ್ಬರ ನಡುವಿನ ಬಾಂಧವ್ಯವನ್ನು ಈ ಹಿಂದೆ ಮುರಿಯಲು ಪ್ರಯತ್ನಿಸಿದ್ದರು. ವಿರೋಧಿಗಳ ಆಟ ನಡೆಯುವುದಿಲ್ಲ. ಅವರ ಪುತ್ರ ಆರ್.ರಾಜೇಂದ್ರ ಅವರು ಕೂಡ ನನ್ನ ಪುತ್ರನಿದ್ದಂತೆ ಅವರನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಜಯಚಂದ್ರ ತಿಳಿಸಿದರು.
ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ರೈತ ವಿರೋಧಿ ಕಾನೂನನ್ನು ಪ್ರಶ್ನಿಸಿದ 12 ಮಂದಿ ಸಂಸದರನ್ನು ಸದನದಿಂದ ವಜಾ ಮಾಡುವಂತಹ ಹೇಯ ಕಾರ್ಯವನ್ನು ಕೇಂದ್ರ ಬಿ.ಜೆ.ಪಿ. ಮಾಡಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಸಾಧನೆ ಶೂನ್ಯವೇ ಆಗಿದ್ದು, ಈ ಹಿಂದೆ 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಯು.ಪಿ.ಎ. ಸರ್ಕಾರಕ್ಕಿದೆ ಎಂದರು.
ಕೆ.ಎನ್. ರಾಜಣ್ಣ ಮಾತನಾಡಿ, ನಮ್ಮ ಡಿ.ಸಿ.ಸಿ. ಬ್ಯಾಂಕಿನಿಂದ ನೀಡುವ ಯಾವುದೇ ಸಾಲಗಳ ಹಣವನ್ನು ಯಾವುದೇ ಸರ್ಕಾರ ಒಂದು ನಯಾ ಪೈಸೆ ನೀಡುವುದಿಲ್ಲ. ಸದಸ್ಯರ ಠೇವಣಿ ಹಣದಿಂದ ನಡೆಯುತ್ತಿರುವ ಈ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರು ಶಿರಾ ತಾಲ್ಲೂಕಿನವರೇ ಆಗಿದ್ದು ಬರಗೂರು ರಾಮೇಗೌಡರು ಸ್ಥಾಪಿಸಿದ ಈ ಬ್ಯಾಂಕ್ ಎಂದಿಗೂ ಸುಭದ್ರವಾಗಿರುತ್ತದೆ. ಓಟಿಗೋಸ್ಕರ ಈ ಬ್ಯಾಂಕ್‍ನಿಂದ ಸಾಲ ನೀಡುತ್ತಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವವರನ್ನು ಗುರ್ತಿಸಿ ನೀಡಲಾಗುತ್ತಿದೆ ಎಂದರು.
ನನಗೂ ಈ ತಾಲ್ಲೂಕಿಗೂ ಅವಿನಾಭಾವ ಸಂಬಂಧವಿದೆ. ಸದಾ ಒಡನಾಟದಿಂದ ಇರುವ ಈ ತಾಲ್ಲೂಕು ನನಗೆ ತವರು ಮನೆ ಇದ್ದಂತೆ. ನನ್ನ ಪುತ್ರ ರಾಜೇಂದ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಮತ ಯಾಚಿಸಿದರು.
ಮಾಜಿ ಶಾಸಕ ಷಡಕ್ಷರಿ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಹುಣಸೇಹಳ್ಳಿ ಶಶಿಧರ್, ಶಾಸಕ ರಿಜ್ವಾನ್ ಅರ್ಷದ್, ಕೆಂಚಮಾರಯ್ಯ ಸೇರಿದಂತೆ ಹಲವರು ಮಾತನಾಡಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾ. ಅಧ್ಯಕ್ಷ ನಟರಾಜ್ ಬರಗೂರು, ಕಲ್ಕೆರೆ ರವಿಕುಮಾರ್, ಕೊಂಡವಾಡಿ ಚಂದ್ರಶೇಖರ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಜಿ.ಎಸ್.ರವಿ, ಜಿ.ಎನ್.ಮೂರ್ತಿ, ಗುಳಿಗೇನಹಳ್ಳಿ ನಾಗರಾಜು, ಡಿ.ಗಂಗಣ್ಣ, ಅಮಾನುಲ್ಲಾಖಾನ್, ಎಸ್.ರಾಮಚಂದ್ರಯ್ಯ, ಶಶಿ ಹುಲಿಕುಂಟೆ, ರೇಖಾ ರಾಘವೇಂದ್ರ, ಲಕ್ಷ್ಮೀದೇವಮ್ಮ, ಮಂಜುಳಾಬಾಯಿ, ಹನುಮಂತಯ್ಯ, ಚಂದ್ರಶೇಖರ್, ಹುಣಸೇಹಳ್ಳಿ ಶಿವಕುಮಾರ್, ಭಕ್ತರಾಮೇಗೌಡ, ದಯಾನಂದ್, ಶಶಿಧರಗೌಡ, ಸತ್ಯನಾರಾಯಣ್, ಸಚಿನ್ ಹೆಚ್.ಹೊನ್ನೇಶ್, ಕರಿದಾಸರಹಳ್ಳಿ ನರಸಪ್ಪ, ಚಿದಾನಂದ್, ಹನುಮಂತಯ್ಯ, ಅಜಯ್‍ಕುಮಾರ್, ಎಸ್.ಎಲ್.ಗೋವಿಂದರಾಜು ಸೇರಿದಂತೆ ಪಕ್ಷದ ಅನೇಕ ಪ್ರಮುಖರು ಹಾಜರಿದ್ದರು.
ರಾಜೇಂದ್ರ ಅವರನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ
ಕೆ.ಎನ್.ರಾಜಣ್ಣ ಹಾಗೂ ನಾನು ಇಬ್ಬರು ಒಳ್ಳೆಯ ಗೆಳೆಯರು. ವಿರೋಧ ಪಕ್ಷದವರು ಇಬ್ಬರ ನಡುವಿನ ಬಾಂಧವ್ಯವನ್ನು ಈ ಹಿಂದೆ ಮುರಿಯಲು ಪ್ರಯತ್ನಿಸಿದ್ದರು. ವಿರೋಧಿಗಳ ಆಟ ನಡೆಯುವುದಿಲ್ಲ. ಅವರ ಪುತ್ರ ಆರ್.ರಾಜೇಂದ್ರ ಅವರು ನನಗೂ ಕೂಡ ಪುತ್ರನಿದ್ದಂತೆ, ಅವರನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಜಯಚಂದ್ರ ತಿಳಿಸಿದರು.
ಶಿರಾ ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರದ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಉದ್ಘಾಟಿಸಿದರು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೆಎನ್.ರಾಜಣ್ಣ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








