ಆನೇಕಲ್ ರಾಜಕೀಯ ಇಲ್ಲಿ ನಡೆಯಲ್ಲ

ಪಾವಗಡ:

 ಕೇಂದ್ರ ಸಚಿವ ನಾರಾಯಣ ಸ್ವಾಮಿ ವಿರುದ್ಧ ಶಾಸಕರ ಆಕ್ರೋಶ 

ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದಂತೆ ಇಲ್ಲಿ ಯಾವುದೇ ದೌರ್ಜನ್ಯಗಳು ನಡೆಯುತ್ತಿಲ್ಲ.
ಆನೇಕಲ್ ರಾಜಕೀಯವನ್ನು ಪಾವಗಡದಲ್ಲಿ ಮಾಡಲು ಬಂದರೆ ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.

ಅವರು ಪಟ್ಟಣದ ಎಸ್‍ಎಸ್‍ಕೆ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪಾವಗಡ ವತಿಯಿಂದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಉದ್ಘಾಟಿಸಿ ಮಾತನಾಡಿದರು. ಇಲ್ಲಿ ಯಾವುದೇ ರಾಜಕೀಯ ದೌರ್ಜನ್ಯ ನಡೆಯುತ್ತಿಲ್ಲ. ಅಭಿವೃದ್ಧಿವೊಂದೆ ನಡೆಯುತ್ತಿದೆ. ಆನೆಕಲ್ ರಾಜಕೀಯ ಇಲ್ಲಿ ನಡೆಯಲ್ಲ ಎಂದು ಖಾರವಾಗಿಯೆ ನುಡಿದರು.

ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ವೇಳೆ ಅನುಷ್ಠಾನಕ್ಕೆ ತಂದು, ಸಮ್ಮಿಶ್ರ ಸರಕಾರದಲ್ಲಿ ಸಚಿವನಾದ ವೇಳೆ ಕಾಮಗಾರಿಗಳಿಗೆ ವೇಗ ನೀಡಿದ್ದು ಯಾರು ಎಂಬುದು ತಾಲ್ಲೂಕಿನ ಜನತೆಗೆ ತಿಳಿದಿದೆ. ಆದರೆ ಅವರ ಬೂಟಾಟಿಕೆ ಇಲ್ಲಿ ನಡೆಯದ ಕಾರಣ ಇಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಪ್ರಯತ್ನ ನಾರಾಯಣ ಸ್ವಾಮಿಯಿಂದ ನಡೆಯುತ್ತಿದೆ ಎಂದರು.

ಸಮ್ಮಿಶ್ರ ಸರಕಾರದಲ್ಲಿ ತುಮಕೂರು ಲೋಕಸಭಾ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಬಿಜೆಪಿ ಕಾರಣ ಹೊರತು ರಾಜಣ್ಣ ಅಲ್ಲ. ಮೊದಲು ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದ ಅವರು, ಹಾಸನದಲ್ಲಿನ ಕುಟುಂಬ ರಾಜಕೀಯವನ್ನು ತುಮಕೂರಿಗೆ ವಿಸ್ತರಿಸುವ ಪ್ರಯತ್ನದಲ್ಲಿ ಸೊಲನ್ನು ಕಂಡಿದ್ದು ಬಿಜೆಪಿಯಿಂದ.

      ಆದರೆ ಇಂದು ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ. 20-20 ಸರಕಾರದಲ್ಲಿ ಮೊದಲು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಯಡಿಯೂರಪ್ಪರವರಿಗೆ ಅಧಿಕಾರ ನೀಡದ ಪರಿಣಾಮ ಕಣ್ಣೀರು ಹಾಕಿದ ಸಂದರ್ಭವನ್ನು ಬಿಜೆಪಿಯವರು ಮರೆತರೆ? ಈ ಬಾರಿ ವಿ.ಪ. ಚುನಾವಣೆಯಲ್ಲಿ ರಾಜೇಂದ್ರ ಗೆಲುವು ಖಚಿತ. ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಪಂ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ರಾಜೇಂದ್ರ ಗೆಲುವಿಗೆ ಶ್ರಮಿಸಬೇಕೆಂದರು.

ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಆರ್.ರಾಜೇಂದ್ರ ಮಾತನಾಡಿ, ಗಡಿನಾಡು ಪಾವಗಡದಲ್ಲಿ 529 ಮತದಾರರಿದ್ದು, 400ಕ್ಕೂ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುವ ವಿಶ್ವಾಸವಿದೆ. ಪಕ್ಷದ ಕಾರ್ಯಕರ್ತರ, ಮುಖಂಡರ, ಗ್ರಾಪಂ ಸದಸ್ಯರ ಕಠಿಣ ಪರಿಶ್ರಮದಿಂದ ವಿ.ಪ. ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲುವಾಗಲಿದೆ. ತುಮಕೂರು ಲೋಕಸಭಾ ಸದಸ್ಯರು ಹೇಳಿದ ಹಾಗೆ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿಲ್ಲ. ಪಾವಗಡದಲ್ಲಂತು ಹೀನಾಯವಾಗಿದ್ದು, ಈ ಸ್ಥಿತಿಯಲ್ಲಿ ಗೆಲುವು ಅಸಾಧ್ಯವಾಗಿದೆ ಎಂದು ತಿಳಿದರೂ ಅವರ ಬುದ್ದಿ ಬಿಡುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ಕಳೆದ 6 ವರ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚಿದೆ. ವಿ.ಪ. ಸೇರಿದಂತೆ ಜಿಪಂ, ತಾಪಂ ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಯುವಕರ ಆಶಾಕಿರಣ ವೆಂಕಟೇಶ್ ಗೆಲುವಿಗೆ ಶ್ರಮಿಸಲಾಗು ವುದು. ವಿಪ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ನನ್ನನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸೋಮ್ಲನಾಯ್ಕ್, ಪುರಸಭಾ ಅಧ್ಯಕ್ಷೆ ಗಂಗಮ್ಮ, ಪುರಸಭಾ ಮಾಜಿ ಅಧ್ಯಕ್ಷ ಗುರ್ರಪ್ಪ, ಶಂಕರ್ ರೆಡ್ಡಿ, ಹಿರಿಯ ಮುಖಂಡ ತಾಳೆಮರದ ನರಸಿಂಹಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಎಚ್.ವಿ.ವೆಂಕಟೇಶ್, ಕೋಟೆ ಪ್ರಭಾಕರ್, ನಾನಿ, ಪುರಸಭಾ ಸದಸ್ಯರುಗಳಾದ ರಾಜೇಶ್, ಟೆಂಕಾಯಲ ರವಿ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link