ಬರಗೂರು:
ಕಾರ್ತೀಕ ಮಾಸದ ದೀಪೋತ್ಸವದಲ್ಲಿ ಶ್ರೀ ಚಿದಾನಂದ ಸ್ವಾಮಿಗಳ ನುಡಿ
ಪವಾಡ ಪುರುಷ ಶ್ರೀ ಸಿದ್ಧರೂಢರು ನೆಲೆಸಿರುವಂತಹ ಮಠ ಹುಬ್ಬಳ್ಳಿಯಲ್ಲಷ್ಟೇ ಅಲ್ಲ, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲೂ ಪ್ರಸಿದ್ಧಿ ಪಡೆದಿದ್ದು, ಶಿರಾ ತಾಲ್ಲೂಕಿನ ಶ್ರೀಕ್ಷೇತ್ರ ಪೂಜಾರ ಮುದ್ದನಹಳ್ಳಿಯಲ್ಲಿ ಸಿದ್ಧಾರೂಢ ಮಠ ಇದೆ. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಕೈಲಾಸದಂತೆ ಕಂಗೊಳಿಸುತ್ತಿರುವ ಈ ಧಾರ್ಮಿಕ ಕಾರ್ಯಕ್ರಮ ನಿಜಕ್ಕೂ ಮೆಚ್ಚುಗೆ ಪಡೆಯುವಂತದ್ದು ಎಂದು ಹುಬ್ಬಳ್ಳಿ ಮಠದ ಶ್ರೀ ಚಿದಾನಂದ ಸ್ವಾಮೀಜಿಗಳು ನುಡಿದರು.
ಶಿರಾ ತಾಲ್ಲೂಕಿನ ಶ್ರೀಕ್ಷೇತ್ರ ಪೂಜಾರ ಮುದ್ದನಹಳ್ಳಿ ಗ್ರಾಮದ ಶ್ರೀ ಸಿದ್ಧಾರೂಢ ಮಠದಲ್ಲಿ ಶ್ರೀ ಸಿದ್ಧಾರೂಢರ ಕಥಾಮೃತ, ಪಾರಾಯಣ, ಶ್ರೀಶಿವಾನಂದ ಸ್ವಾಮಿಗಳ ಜೀವನಾಧಾರಿತ ಗ್ರಂಥ ಬಿಡುಗಡೆ, ಪುಣ್ಯಾರಾಧನೆ, ರಕ್ಕಸಗುಣ ಸಂಹಾರ, ದವೀಗುಣ ಸ್ಥಾಪನಾ ರೂಪಕ, ಲಕ್ಷ ದೀಪೋತ್ಸವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಾ ಶ್ರೀ ಸಿದ್ಧಾರೂಢ ಮಠ ಅಭಿವೃದ್ಧಿಯತ್ತ ಸಾಗಲು ಕಾರಣೀಭೂತರಾದ ಭಕ್ತರು, ಶ್ರೀ ಮಠದ ಗುರುಗಳಲ್ಲಿ ಇಟ್ಟಿರುವ ಶ್ರದ್ಧಾಭಕ್ತಿ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಅಂಚೀಪುರ ಸಿದ್ಧಾರೂಢ ಮಠದ ಸಾದ್ವಿ ಉಮಾ ಭಾರತಿ ಅವರು ಮಾತನಾಡಿ ಶಿವನ ಅನುಗ್ರಹವಿದ್ದಾಗ ಮಾತ್ರ ಉತ್ತಮ ಗುರುವನ್ನು ಪಡೆಯಲು ಸಾಧ್ಯ. ಈ ಭಾಗದಲ್ಲಿ ಅನೇಕ ಜನ ಮಹಾತ್ಮರು, ಮೋಕ್ಷಿಗಳು,ತಪಸ್ವಿಗಳು ಇರುವುದರಿಂದ ಇಲ್ಲಿ ಮಠ ಆಗಿದೆ. ಗ್ರಾಮಗಳ ಗಲ್ಲಿ ಗಲ್ಲಿಗಳಲ್ಲಿ ಹಲವಾರು ದೇವಸ್ಥಾನಗಳನ್ನು ನೋಡುತ್ತಿದ್ದೇವೆ. ಆದರೆ ಮಠಗಳು ಕಾಣುವುದಿಲ್ಲ. ನಿಷ್ಕಾಮವಾದ ಮೋಕ್ಷವುಳ್ಳಂತಹ ಗುರುವಿದ್ದಾಗ ಮಾತ್ರ ಮಠಗಳ ಅಭಿವೃದ್ಧಿ ಸಾಧ್ಯ ಎಂದರು.
ಕೈವಲ್ಯಾನಂದ ಸ್ವಾಮಿಗಳು ಮಾತನಾಡುತ್ತಾ 6 ಲಕ್ಷ ರೂ.ಗಳ ವೆಚ್ಚದ ಶ್ರೀ ಶಿವಾನಂದಸ್ವಾಮಿಗಳ ಕಥಾಮೃತ ಗ್ರಂಥಗಳ ಮುದ್ರಣ ದಾನಿಗಳಾದ ಆಂಧ್ರ ಪ್ರದೇಶ ಮೂಲದ ರೊಳ್ಳೆ ಮಂಡಲ ಜಿ.ಪಂ.ಸದಸ್ಯರಾದ ಲಕ್ಷ್ಮೀ ಅನಂತರಾಜು ಅವರ ಕಾರ್ಯ ಮಹತ್ವದ್ದು. ಈ ಗ್ರಂಥವನ್ನು ಶ್ರೀ ಶಿವಾನಂದ ಸ್ವಾಮಿಗಳ ಧರ್ಮಪತ್ನಿ ನಾಗರತ್ನ ಅವರಿಗೆ ಮೊದಲಿಗೆ ವಿತರಿಸಿದ್ದಕ್ಕೆ ಹೆಮ್ಮೆಪಡುತ್ತೇನೆ ಎಂದರು.
ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಚಿದಾನಂದ ಭಾರತಿ ಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠವು ರಾಜ್ಯ, ಅಂತರಾಜ್ಯಗಳಲ್ಲಿ ಹೆಸರು ಮಾಡಿದೆ. ಅಲ್ಲಿನ ಮಠದಲ್ಲಿ ಪವಾಡದ ಹೆಜ್ಜೆ ಗುರುತುಗಳನ್ನು ಕಾಣಬಹುದಾಗಿದೆ. ಅಲ್ಲಿಗೆ ಹೋಗಿ ಮುಕ್ತಿ ಪಡೆಯುವಂತಹ ಭಕ್ತರಿಗೆ ಯಾವುದೇ ಕೊರತೆ ಇರುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಶ್ರೀ ಶಿವಾನಂದಸ್ವಾಮಿಗಳ ಕಥಾಮೃತ ಗ್ರಂಥಗಳ ಮುದ್ರಣ ದಾನಿಗಳಾದ ಆಂಧ್ರ ಮೂಲಕ ಲಕ್ಷ್ಮೀ ಅನಂತರಾಜು ಹಾಗೂ ಸುಮಾರು 4021 ಓಂ ನಮಃ ಶಿವಾಯ ನಾಮಜಪ ಲಿಪಿ ಪುಸ್ತಕ ಮುದ್ರಣ ದಾನಿಗಳಾದ ಬೆಂಗಳೂರಿನ ಓಂಕಾರ್ ಪ್ರಿಂಟರ್ಸ್‍ನ ಮಾಲೀಕರಾದ ವೆಂಕಟೇಶಬಾಬು ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಇಡೀ ರಾತ್ರಿ ಭಜನೆ, ಕೀರ್ತನೆಗಳನ್ನು ಆಯೋಜಿಸಲಾಗಿತ್ತು. ಬಂದ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆಲೂರು ಆನಂದಾಶ್ರಮದ ಶಂಕರಾನಂದ ಸ್ವಾಮೀಜಿ, ಸುಂದರ್‍ಲಾಲ್ ನಾಕೋಡಾ, ಆಂಧ್ರದ ಅಮರಾಪುರ ಮಂಡಲ್‍ನ ಜಿ.ಪಂ.ಮಾಜಿ ಸದಸ್ಯ ಬಸವನಹಳ್ಳಿ ಉಗ್ರಪ್ಪ, ಜಿಲ್ಲಾ ಬಿಎಸ್‍ಎನ್‍ಎಲ್ ನೌಕರರ ಸಂಘದ ಅಧ್ಯಕ್ಷ ಎಂ.ರಾಜ್‍ಕುಮಾರ್, ಬರಗೂರು ಹಾಲೇಗೌಡ ಧರ್ಮಪತ್ನಿ ಲಕ್ಷ್ಮಮ್ಮ ಹಾಗೂ ಸಾಧು ಸಂತರು, ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ