ಅತಿಥಿ ಉಪನ್ಯಾಸಕರ ಮುಷ್ಕರ ನಡೆಯದ ತರಗತಿಗಳು

ತಿಪಟೂರು:

      ಕೊರೋನಾ ಕತ್ತಲೆ ಮಾಸುವ ಮುನ್ನ ಮತ್ತೆ ಮಬ್ಬಾದ ವಿದ್ಯಾರ್ಥಿಗಳ ಭವಿಷ್ಯ

ಸರ್ಕಾರ-ಅತಿಥಿಗಳ ಜಟಾಪಟಿಯಲ್ಲಿ ವಿದ್ಯಾರ್ಥಿಗಳು ಬೀದಿಗೆ 

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಮೊದಲು ಉಪನ್ಯಾಸಕರ ಕೊರತೆ ಅಷ್ಟಾಗಿ ಕಾಡುತ್ತಿರಲಿಲ್ಲ, ಅತಿಥಿ ಉಪನ್ಯಾಸಕರು ಪಾಠ-ಪ್ರವಚನಗಳನ್ನು ಬೋಧಿಸುತ್ತಾ ವಿದ್ಯಾರ್ಥಿಗಳಿಗೆ ಪಾಠಗಳ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಆದರೇ ಕಳೆದ 4 ದಿನಗಳಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿದ್ದು, 4 ದಿನಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಭವಿಷ್ಯ ತ್ರಿಶಂಕು ಸ್ಥಿತಿಗೆ ಬಂದು ನಿಂತಿದೆ.

ತರಗತಿ ನಡೆಸುವುದೆ ಸವಾಲು :

3272 ವಿದ್ಯಾರ್ಥಿಗಳು, 48 ಸರ್ಕಾರಿ ಪ್ರಾಧ್ಯಾಪಕರು ಹಾಗೂ 124 ಅತಿಥಿ ಉಪನ್ಯಾಸಕರನ್ನು ಒಳಗೊಂಡಿರುವ ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯದಲ್ಲಿಯೆ ಅತಿ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅತಿಥಿ ಉಪನ್ಯಾಸಕರನ್ನೊಳಗೊಂಡ ಸರ್ಕಾರಿ ಕಾಲೇಜುಗಳಲ್ಲೊಂದಾಗಿದೆ. ಸದರಿ ಕಾಲೇಜಿನಲ್ಲಿರುವ 48 ಸರ್ಕಾರಿ ಪ್ರಾಧ್ಯಾಪಕರುಗಳಿಂದ ದೊಡ್ಡ ಮೊತ್ತದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುವುದು ಕಷ್ಟ ಸಾಧ್ಯವಾಗಿದೆ. ಇದರಿಂದ ಬೇಸತ್ತ ಕಾಲೇಜಿನ ವಿದ್ಯಾರ್ಥಿಗಳು, ತರಗತಿಗಳು ಸೂಕ್ತವಾಗಿ ನಡೆಯುತ್ತಿಲ್ಲ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಎಂದು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಸರ್ಕಾರದತ್ತ ಬೊಟ್ಟು ಮಾಡಿದ ಪ್ರಾಂಶುಪಾಲರು :

ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲರು, ಈ ಸಮಸ್ಯೆಗೆ ಯಾವುದೇ ಪರಿಹಾರ ಕೋಗೊಳ್ಳಲು ನಮ್ಮ ಕೈನಲ್ಲಿ ಏನೂ ಇಲ್ಲ. ಅತಿಥಿ ಉಪನ್ಯಾಸಕರು ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳಕ್ಕಾಗಿ ಬೆಳಗಾವಿಯಲ್ಲಿ ಧರಣಿ ಕುಳಿತಿದ್ದಾರೆ. ಆದ್ದರಿಂದ ತರಗತಿಗಳು ನಡೆಯಲು ತೊಂದರೆಯಾಗುತ್ತಿದೆ. ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಇದರ ಬಗ್ಗೆ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದು, ಅಲ್ಲಿಯವರೆಗೂ ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ.

ಅಂತಿಮ ಮತ್ತು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅಕೌಂಟ್ಸ್ ಮತ್ತಿತರ ಎರಡು ತರಗತಿಗಳನ್ನು ನಡೆಸÀಲಾಗುತ್ತಿದ್ದು, ಸಮಸ್ಯೆಗೆ ಪರಿಹಾರವಾಗಿ ಆನ್‍ಲೈನ್ ಶಿಕ್ಷಣವನ್ನು ನೀಡಬಹುದಷ್ಟೆ. ಇದಕ್ಕಿಂತ ಹೆಚ್ಚಿಗೆ ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸಮಸ್ಯೆಯನ್ನು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಹೇಳಿಕೊಳ್ಳಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರ್ಯಾಯಾವಾಗಿ ಏನು ಕ್ರಮ ಕೈಗೊಂಡಿದ್ದಾರೆಂದು ತಿಳಿಸಿಲ್ಲ.

ಪ್ರಾಂಶುಪಾಲರು ಹೀಗೆ ಹೇಳುತ್ತಿದ್ದಂತೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯ ಅರ್ಜಿಯನ್ನು ಬರೆದುಕೊಂಡು ತಾಲ್ಲೂಕು ಕಚೇರಿಗೆ ದೌಡಾಯಿಸಿ, ಗ್ರೇಡ್-2 ತಹಶೀಲ್ದಾರರಿಗೆ ಅರ್ಜಿಯನ್ನು ಸಲ್ಲಿಸಿದರು.

ಶೈಕ್ಷಣಿಕ ಭವಿಷ್ಯ ಡೋಲಾಯಮಾನ :

ಸರ್ಕಾರ ಸೂಕ್ತ ಸಮಯದಲ್ಲಿ ನೇಮಕಾತಿಯನ್ನು ಮಾಡಿದ್ದರೆ ಇಂದು ಅತಿಥಿ ಉಪನ್ಯಾಸಕರ ಸಮಸ್ಯೆಯೆ ಉದ್ಭವಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹೋಗಿ ತಮ್ಮ ಭವಿಷ್ಯವನ್ನೆ ಅಡ ಕತ್ತರಿಗೆ ಸಿಕ್ಕಿಸಿಕೊಂಡಿರುವ ಅತಿಥಿ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವಮಾನವನ್ನೆ ತೇಯ್ದಿದ್ದಾರೆ.

ಇನ್ನು ಕೆಲವು ಅತಿಥಿ ಉಪನ್ಯಾಸಕರು ತಾವು ಇನ್ನು ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕುವ ವಯೋಮಿತಿ ಮೀರಿದ್ದು, ಉಪನ್ಯಾಸ ಬಿಟ್ಟರೆ ನಮಗೇನು ತಿಳಿದಿಲ್ಲ, ಈಗ ನಡೆಯುತ್ತಿರುವ ನೇಮಕಾತಿಯಲ್ಲಿ ನಮಗೆ ವಯೋಮಿಯಲ್ಲಿ ಸಡಿಲಿಕೆಯನ್ನಾದರೂ ಮಾಡಿ, ನಮಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಎಂದು ಸರ್ಕಾರವನ್ನು ಕೇಳುತ್ತಿದ್ದಾರೆ. ಆದರೇ ಸರ್ಕಾರ ಮತ್ತು ಅತಿಥಿ ಉಪನ್ಯಾಸಕರ ನಡುವಿನ ಜಟಾಪಟಿಯಲ್ಲಿ ಅಮಾಯಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವು ಡೋಲಾಯಮಾನವಾಗಿದೆ.

ಪೋಷಕರ ಕನಸಿಗೆ ತಣ್ಣೀರು :

ನಾವು ಕಷ್ಟಪಟ್ಟಿದ್ದು ಸಾಕು, ನಮ್ಮ ಮಕ್ಕಳಾದರೂ ಸುಖವಾಗಿರಲಿ ಎಂದು ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕೊಡಿಸಿ ನಮ್ಮ ಮಕ್ಕಳು ವಿದ್ಯಾವಂತರಾಗಿ, ಸಮಾಜದಲ್ಲಿ ಉತ್ತಮ ಸ್ಥಾನಮಾನ, ಉನ್ನತ ಹುದ್ದೆ ಪಡೆದು ನಮ್ಮನ್ನು ನೋಡಿಕೊಳ್ಳಲಿ ಎಂದು ತಮ್ಮ ಕಷ್ಟವನ್ನೆಲ್ಲಾ ಬದಿಗಿಟ್ಟು ಅದೇಷ್ಟೊ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಪಾಠ-ಪ್ರವಚನಗಳಿಲ್ಲದೆ ಕಾಲೇಜಿಗೆ ಬರಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದು, ಅತಿಥಿ ಉಪನ್ಯಾಸಕರ ಪ್ರತಿಭಟನೆ ಎಂದು ಮುಗಿಯುತ್ತದೊ ಎಂದು ಎದುರು ನೋಡುತ್ತಿದ್ದಾರೆ. ಎಲ್ಲಿ ನಮ್ಮ ವಿದ್ಯಾಭ್ಯಾಸ ಹಾಳಾಗಿ ನಮ್ಮ ತಂದೆ-ತಾಯಿಯೆ ಆಸೆ ನೆರವೇರುವುದಿಲ್ಲವೊ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೋನಾದಿಂದಾಗಿ ತರಗತಿಗಳೇ ನಡೆದಿಲ್ಲ, ಇನ್ನೇನು ಎಲ್ಲಾ ಸಹಜ ಸ್ಥಿತಿಗೆ ಬಂತು ಎನ್ನುವಾಗ, ಈಗ ಅತಿಥಿ ಉಪನ್ಯಾಸಕರ ಮುಷ್ಕರದಿಂದ ತರಗತಿಗಳು ನಡೆಯುತ್ತಿಲ್ಲ. ಹೀಗಾದರೆ ನಮ್ಮ ವಿದ್ಯಾಭ್ಯಾಸ ಏನಾಗಬೇಕು, ಸರ್ಕಾರ ಏನಾದರೂ ಮಾಡಿಕೊಳ್ಳಲಿ ನಮಗೆ ತರಗತಿಗಳು ನಡೆಯಬೇಕು ಅಷ್ಟೆ.

-ಹೆಸರು ಹೇಳದ ವಿದ್ಯಾರ್ಥಿ

                  ಸರ್ಕಾರ ಮತ್ತು ಅತಿಥಿ ಉಪನ್ಯಾಸಕರ ಗೊಡವೆಗಳ ನಡುವೆ ಇಂದು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಚಳಿ-ಮಳೆ ಲೆಕ್ಕಿಸದೆ ಗ್ರಾಮಾಂತರ ಪ್ರದೇಶದಿಂದ ಕಷ್ಟಪಟ್ಟು ಕಾಲೇಜಿಗೆ ಬಂದರೆ ಇಲ್ಲಿ ತರಗತಿಗಳು ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಶೀಘ್ರವಾಗಿ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲಿ, ಇಲ್ಲ ಬದಲಿ ಉಪನ್ಯಾಸಕರನ್ನು ನೇಮಿಸಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಿ.

-ಲಿಖಿತ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ,

-ರಂಗನಾಥ್ ಪಾರ್ಥಸಾರಥಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap