ಸಂಪರ್ಕ ರಸ್ತೆ ಬಂದ್ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ

 ಗುಬ್ಬಿ : 

      ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಹಕಾರ ನೀಡಿದ ರೈತರ ಅನುಕೂಲಕ್ಕಿದ್ದ ರಸ್ತೆಯನ್ನು ಮುಚ್ಚುವ ಮೂಲಕ ಹೆದ್ದಾರಿ ಪ್ರಾಧಿಕಾರ ಸಲ್ಲದ ನಿಯಮಗಳನ್ನು ಮುಂದಿಟ್ಟು ರಸ್ತೆ ಬಿಟ್ಟುಕೊಡದ ಹಿನ್ನಲೆ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ ಸ್ಥಳೀಯ ರಾಯವಾರ ಹಾಗೂ ಗೊಲ್ಲರಹಟ್ಟಿ ಗ್ರಾಮಸ್ಥರು ಧರಣಿ ನಡೆಸಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿದರು.

      ಪಟ್ಟಣದ ಹೊರವಲಯದ ರಾಯವಾರ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಬಳಿ ಪ್ರತಿಭಟನೆ ಆರಂಭಿಸಿದ ರೈತರು ಹೆದ್ದಾರಿ ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿದರು. ಕಳೆದ ಎರಡು ವರ್ಷಗಳಿಂದ ರಾಯವಾರ, ಗೊಲ್ಲರಹಟ್ಟಿ ಮೂಲಕ ಲಕ್ಕೇನಹಳ್ಳಿ ಸೇರುವ ರಸ್ತೆ ನೂರಾರು ಮಂದಿ ಗ್ರಾಮಸ್ಥರ ಪ್ರಮುಖ ರಸ್ತೆಯಾಗಿದೆ. ಎರಡೂ ಗ್ರಾಮಸ್ಥರ ಜಮೀನು ಹೆದ್ದಾರಿಯ ಮತ್ತೊಂದು ಬದಿಯಲ್ಲಿದ್ದು ಅಲ್ಲಿಗೆ ತೆರಳಲು ಇದ್ದ ಏಕೈಕ ಮಾರ್ಗವನ್ನು ಮುಚ್ಚಿ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಮಾನವೀಯತೆ ಮರೆತ ಅಧಿಕಾರಿಗಳು ಅವೈಜ್ಞಾನಿಕ ನಿಯಮಗಳನ್ನು ಮುಂದಿಟ್ಟು ಮುಗ್ಧ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

      ಪ್ರಾಧಿಕಾರದ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಮುನ್ನ ಸಿದ್ದಪಡಿಸಿದ ಕ್ರಿಯಾಯೋಜನೆಯ ನಕ್ಷೆಯಲ್ಲೂ ಗೊಲ್ಲರಹಟ್ಟಿ ರಸ್ತೆ ನಿರ್ಮಾಣಕ್ಕೆ ಗುರುತು ಮಾಡಲಾಗಿದೆ. ದಿನ ಕಳೆದಂತೆ ಈ ರಸ್ತೆ ಮಾಯ ಮಾಡುವ ನಿಯಮವನ್ನು ಅಧಿಕಾರಿಗಳು ಹೊರತಂದು ಗ್ರಾಮಸ್ಥರಿಗೆ ತೊಂದರೆ ನೀಡಿದ್ದಾರೆ. ರಸ್ತೆಯು ಮೇಲ್ಸುತುವೆ ಮೂಲಕ ಹಾದು ಹೋಗುವ ಕಾರಣ ಈ ಗ್ರಾಮಗಳ ರಸ್ತೆಯನ್ನು ಕಬಳಿಸಲು ಸಲ್ಲದ ನಿಯಮ ಹುಡುಕಿದ್ದಾರೆ. ರಾಯವಾರ ಮತ್ತು ಗೊಲ್ಲರಹಟ್ಟಿ ರೈತರ ಜಮೀನಿಗೆ ಹೋಗಲು ನಾಲ್ಕೈದು ಕಿಮೀ ದೂರವನ್ನ ಬಳಸಿ ಹೋಗಬೇಕಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಾಂತ್ರಿಕ ತೊಂದರೆಯನ್ನು ಹೇಳಿದ್ದರೂ ಕೊಂಚವೂ ಆಸಕ್ತಿ ತೋರಿಲ್ಲ. ಜನರಿಗೆ ಅವಶ್ಯವಿರುವ ರಸ್ತೆಯನ್ನು ಅಂಡರ್‍ಪಾಸ್ ಮೂಲಕ ನಿರ್ಮಿಸಬಹುದಿತ್ತು.ಆದರೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇಂದು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯ್‍ಕುಮಾರ್ ತಿಳಿಸಿದರು.

      ನಂತರ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಎಇಇ ಸಿದ್ದರಾಮಪ್ಪ ಅವರ ತಂಡವನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಅಂಡರ್ ಪಾಸ್ ರಸ್ತೆ ನಿರ್ಮಿಸಿ ನಂತರ ತಮ್ಮ ಕಾಮಗಾರಿ ಮುಂದುವರೆಸಬೇಕು. ಅಲ್ಲಿಯವರೆಗೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು.ತಾಂತ್ರಿಕ ಅಂಶವನ್ನು ಮುಂದಿಟ್ಟು ಮನವೊಲಿಸುವ ಪ್ರಯತ್ನ ಮಾಡಿದ ಇಂಜಿನಿಯರ್‍ಗಳ ಔಪಚಾರಿಕ ಮಾತುಗಳು ಒಪ್ಪದ ಪ್ರತಿಭಟನಾಕಾರರು ರೈತರ ಸರ್ಕಾರಿ ರಸ್ತೆ ಬಿಟ್ಟು ಹೆದ್ದಾರಿ ಕೆಲಸ ಮಾಡಿಕೊಳ್ಳಲು ಸೂಚಿಸಿದರು. ನಂತರ ಮಾತನಾಡಿದ ಬಿಜೆಪಿ ಮುಖಂಡ ಎಚ್.ಟಿ.ಬೈರಪ್ಪ ಈ ಹಿಂದೆ ನಾಲ್ಕು ಬಾರಿ ಈ ರಸ್ತೆ ಬಿಡಲು ಮನವಿ ಮಾಡಲಾಗಿದೆ. ಈ ಬಗ್ಗೆ ಸಂಸದರು, ಶಾಸಕರು ಪತ್ರ ಬರೆದರೂ ನಿರ್ಲಕ್ಷ್ಯತೋರಿದ ಅಧಿಕಾರಿಗಳು ಖರಾಬು ರಸ್ತೆಯನ್ನು ಮುಚ್ಚಿ ಸಾವಿರಾರು ಮಂದಿ ರೈತರಿಗೆ ತೊಂದರೆ ನೀಡಿದ್ದಾರೆ.

      ತೋಟಗಳಿಗೆ ಹೊಲಗಳಿಗೆ ತೆರಳುವ ರೈತರು ತಮ್ಮ ಜಾನುವಾರುಗಳನ್ನು ಮತ್ತು ಟ್ರಾಕ್ಟ್‍ರ್‍ಗಳನ್ನು ಹೇಗೆ ತೆಗೆದುಕೊಂಡು ಹೋಗುವುದು ಎಂದು ಚಿಂತಿಸಿದ್ದಾರೆ. ಈ ಕೂಡಲೇ ಕ್ರಮವಹಿಸಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ವಿನಯ್ ಮಾತನಾಡಿ, ರಸ್ತೆ ಬಿಡುವ ನಾಟಕವಾಡಿ ಈಗ ರಾತ್ರೋರಾತ್ರಿ ಮಣ್ಣುತಂದು ಸುರಿದು ಹೆದ್ದಾರಿ ಮೇಲ್ಸೇತುವೆ ಕೆಲಸ ಆರಂಭಿಸಿದ್ದಾರೆ. ಪೊಳ್ಳು ಭರವಸೆ ನೀಡಿ ಪ್ರಾಧಿಕಾರದ ಮೇಲಾಧಿಕಾರಿಗಳಿಂದ ಅನುಮತಿ ಬರಬೇಕಿದೆ. ಅಲ್ಲಿಯವರೆಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿ ಕೆಲಸ ಆರಂಭಿಸಿದ್ದಾರೆ. ಬೇಸತ್ತ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇವರ ಬೇಡಿಕೆಗೆ ಅನುಗುಣವಾಗಿ ಜಮೀನುಗಳಿಗೆ ತೆರಳುವ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

      ಸಮಸ್ಯೆ ಆಲಿಸಿದ ಎಇಇ ಸಿದ್ದರಾಮಪ್ಪ ಸರ್ಕಾರದ ಗಮನಕ್ಕೆ ತಂದು ಮೇಲಾಧಿಕಾರಿಗಳಿಂದ ಒಪ್ಪಿಗೆ ಪಡೆದುರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿ ಕಾಮಗಾರಿ ಸ್ಥಳದಲ್ಲಿ ಮುಚ್ಚಲಾಗಿದ್ದ ಖರಾಬು ರಸ್ತೆ ತೆರವು ಮಾಡುವ ಮೂಲಕ ತಾತ್ಕಾಲಿಕವಾಗಿ ಪರಿಸ್ಥಿತಿ ತಿಳಿಗೊಳಿಸಿದರು.

      ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಗೋಪಿನಾಥ್, ಅರುಣ್‍ಕುಮಾರಿ ಭಾಸ್ಕರ್, ಯತೀಶ್‍ಕುಮಾರ್, ಮುಖಂಡರಾದ ಬಿ.ಲೋಕೇಶ್, ಜಿ.ಎಸ್.ಮಂಜುನಾಥ್, ಟೈಲ್ಸ್ ಬಾಬು, ಶಿವಲಿಂಗಯ್ಯ, ಜಯಕರ್ನಾಟಕ ಸಂಘಟನೆಯ ಮಧು, ವಾಸು, ಗ್ರಾಪಂ ಮಾಜಿ ಸದಸ್ಯ ರಾಜಣ್ಣ, ಜಿ.ಆರ್.ನರಸಿಂಹಮೂರ್ತಿ. ಹೊನ್ನಪ್ಪ, ಮೋದಪ್ಪ, ಪ್ರಕಾಶ್, ಕುಮಾರ್, ರಾಜಣ್ಣ, ಕೃಷ್ಣಪ್ಪ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap