ವೈರಲ್‌ ಆಗ್ತಿದೆ ಕಾಂತೇಶ್‌ ಹೇಳಿಕೆ …..!

ಶಿವಮೊಗ್ಗ

   ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆಯ ತನಕ 11.45ರಷ್ಟು ಮತದಾನವಾಗಿದೆ .ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಈ ಬಾರಿ ಚುನಾವಣಾ ಕಣದ ಬಿಸಿಯನ್ನು ಹೆಚ್ಚಿಸಿದ್ದಾರೆ. ಮಂಗಳವಾರ  ಅವರು ಕುಟುಂಬ ಸಮೇತ ಮತದಾನ ಮಾಡಿದ್ದಾರೆ.

    ಮತದಾನ ಮಾಡಿದ ಬಳಿಕ ಕೆ. ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ಮಾಡಿರುವ ಪೋಸ್ಟ್‌ ಬಗ್ಗೆ ಚರ್ಚೆಯಾಗುತ್ತಿದೆ. ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕಾಂತೇಶ್ ಕೈ ತಪ್ಪಿದ ಕಾರಣ ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಕಾಂತೇಶ್ ಫೇಸ್‌ಬುಕ್ ಪೋಸ್ಟ್ ನಲ್ಲೇನಿದೆ:

    ಮಂಗಳವಾರ ಮತದಾನ ಮಾಡಿದ ಬಳಿಕ ಈಶ್ವರಪ್ಪ ಪುತ್ರ ಕಾಂತೇಶ್, “ಕಬ್ಬು ಬೆಳೆದ ರೈತನಿಗೆ ಮತ ಹಾಕಲಾಯಿತು …ಈಗ ಸಕ್ಕರೆಯ ಸುದ್ದಿಯೊಂದೆ ಬಾಕಿ …ಗೆಲುವು ನಮ್ಮದೆ” ಎಂದು ಪೋಸ್ಟ್ ಹಾಕಿದ್ದಾರೆ. ಅಲ್ಲದೇ #KSEforShivamogga, #Modi, #JaiSriRam ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಬಳಕೆ ಮಾಡಿದ್ದಾರೆ.

  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪಗೆ ಚುನಾವಣಾ ಆಯೋಗ ಕಬ್ಬು ಬೆಳೆಯುವ ರೈತನ ಚಿಹ್ನೆಯನ್ನು ನೀಡಿದೆ. ಇದನ್ನು ಕಾಂತೇಶ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಹೇಳಿದ್ದಾರೆ.

   ಪುತ್ರನಿಗೆ ಟಿಕೆಟ್ ಸಿಗಲಿಲ್ಲ ಎಂದು ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು.

   ಆದರೆ ಯಾರ ಮನವೊಲಿಕೆಗೂ ಸಹ ಬಗ್ಗದ ಅವರು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಕೇಂದ್ರ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಅಮತ್ ಶಾ ಫೋನ್ ಕರೆ ಮಾಡಿದರೂ ಸಹ ಈಶ್ವರಪ್ಪ ಮನವೊಲಿಕೆ ಮಾಡಲು ಸಾಧ್ಯವಾಗಲಿಲ್ಲ.

   ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಆಗ ಶಿವಮೊಗ್ಗ ನಗರದಲ್ಲಿ ನಡೆದ ಮೋದಿ ಸಮಾವೇಶಕ್ಕೆ ಬರುವಂತೆ ಆಹ್ವಾನ ನೀಡಿದರೂ ಸಹ ಈಶ್ವರಪ್ಪ ಸಮಾವೇಶಕ್ಕೆ ಗೈರಾಗಿದ್ದರು.

   ಶಿವಮೊಗ್ಗದಲ್ಲಿ ಬಿಜೆಪಿಯಿಂದ ಬಿ. ವೈ. ರಾಘವೇಂದ್ರ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ ಕುಮಾರ್ ಅಭ್ಯರ್ಥಿ. ಪಕ್ಷೇತರ ಅಭ್ಯರ್ಥಿಯಾಗಿ ಕೆ. ಎಸ್‌. ಈಶ್ವರಪ್ಪ ಕಣದಲ್ಲಿದ್ದಾರೆ. ಒಟ್ಟು 23 ಅಭ್ಯರ್ಥಿಗಳು ಶಿವಮೊಗ್ಗ ಲೋಕಸಭಾ ಕಣದಲ್ಲಿದ್ದಾರೆ.

   ಕೆ. ಎಸ್. ಈಶ್ವರಪ್ಪ ರಾಷ್ಟ್ರ ಭಕ್ತರ ಬಳಗ ಎಂದು ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದು, ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ ಮಾಡುವುದೇ ನನ್ನ ಗುರಿ, ನಾನು ಗೆದ್ದು ಅವರನ್ನು ಸಂಸತ್ ಭವನದಲ್ಲಿ ಭೇಟಿಯಾಗುತ್ತೇನೆ ಎಂದು ಹೇಳಿ ಚುನಾವಣಾ ಪ್ರಚಾರ ಮಾಡಿದ್ದಾರೆ.

   ತಮ್ಮ ಪುತ್ರನಿಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಲು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಕಾರಣ ಎಂದು ಈಶ್ವರಪ್ಪ ಆರೋಪ ಮಾಡುತ್ತಿದ್ದಾರೆ.

    ಆದ್ದರಿಂದ ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ಕಣಕ್ಕಿಳಿದಿದ್ದು, ರಾಘವೇಂದ್ರ ಸೋಲಿಸುತ್ತೇನೆ ಎಂದು ಭರವಸೆ ಹೊಂದಿದ್ದಾರೆ. ಮೇ 7ರ ಮಂಗಳವಾರ ನಡೆಯುತ್ತಿರುವ ಚುನಾವಣೆಯ ಮತ ಎಣಿಕೆ ಜೂನ್‌ 4ರಂದು ನಡೆಯುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap